ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಆರೋಗ್ಯವಂತ ಬದುಕಿಗೆ ಸಾವಯುವ ಕೃಷಿಯೇ ಆಧಾರ. ಹೆಚ್ಚು ಇಳುವರಿಯ ಆಸೆಗಾಗಿ ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆಯನ್ನು ಹಾಳು ಮಾಡಿಕೊಳ್ಳಬಾರದು ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ ನುಡಿದರು.ತಾಲೂಕಿನ ಶೇಗುಣಿಸಿ ಗ್ರಾಮದಲ್ಲಿ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಹಾಗೂ ಲಿಂ.ಗುರುಪಾದ ಯಲಡಗಿ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾವಯುವ ಕೃಷಿ ಚಿಂತನಾಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನವಾದ ದೇಶ. ನಮ್ಮ ಕೃಷಿ ಪದ್ಧತಿಗೆ ಕಲುಷಿತವಾದರೇ ರೈತರು ಹೇಗೆ ಶ್ರೀಮಂತವಾಗಲು ಸಾಧ್ಯ?. ನಾವು ಶರೀರದ ಮೇಲೆ ಒಳ್ಳೆಯ ಬಟ್ಟೆ, ಶೂಟ್, ಬೂಟು ಧರಿಸಿರಬಹುದು. ಆದರೆ, ದೇಹ ಅನೇಕ ರೋಗಗಳ ಗೂಡಾಗಿದೆ. ಮನೆ ಮತ್ತು ಮನಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ದೇಶಕ್ಕೆ ಅನ್ನ ನೀಡುವ ರೈತ ಇಂದು ಸರ್ಕಾರ ಕೊಡುವ ರೇಷನ್ ಅಕ್ಕಿಗಾಗಿ ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸರ್ಕಾರ ಬಡವರಿಗಾಗಿ ಆರಂಭಿಸಿದ ಅಕ್ಕಿ ಯೋಜನೆ ಇಂದು ಎಲ್ಲರ ಮನೆಗೆ ಬರುತ್ತಿದೆ. ರೈತರು ಸ್ವಾವಲಂಬಿಗಳಾಗುವುದಕ್ಕಿಂತ ಪರಾವಲಂಬಿಗಳಾಗಿರುವುದು ದೇಶದ ದೊಡ್ಡ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ದೇಶದ ಕೃಷಿಯಲ್ಲಿ ಸಾವಯುವ ಪದ್ಧತಿ ರೂಢಿಸಿಕೊಳ್ಳಬೇಕು. ದೈವ ಸ್ವರೂಪಿಯಾದ ಗೋಮಾತೆಯನ್ನು ಮನೆಯಲ್ಲಿ ಸಾಕಾಣಿಕೆ ಮಾಡುವ ಮೂಲಕ ಆರೋಗ್ಯವಂತ ಜೀವನ ಕಂಡುಕೊಳ್ಳಬೇಕು. ರೈತರು ಒಗ್ಗಟ್ಟಿನಿಂದ ಕೃಷಿ ಮಾಡಿದಾಗ ನಿಮ್ಮ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರಕಲಿದೆ. ರೈತರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಡಬೇಕು. ಪ್ರತಿಯೊಬ್ಬ ರೈತನು ತಮ್ಮಮಕ್ಕಳಿಗೆ ಕೃಷಿ ಚಟುವಟಿಕೆಗಳನ್ನು ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಮಾತನಾಡಿ, ದೇಶದ ಪ್ರಧಾನ ಕಸುಬು ಒಕ್ಕಲುತನ ಇಂದು ವಿಷಕಾರಿ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳಿಂದ ಸಂಪೂರ್ಣ ಕಲುಷಿತಗೊಂಡಿದೆ. ಇದರಿಂದ ಮಣ್ಣಿನ ಫಲವತ್ತತೆ ಹಾಳಾಗಿ ಕೃಷಿಕರ ಬದುಕು ಕಲುಷಿತಗೊಂಡಿದೆ. ರೈತ ಬಡವನಾದರೇ ಭಾರತವೇ ಬಡವಾಗುತ್ತದೆ. ನಮ್ಮ ಸಾವಯುವ ಕೃಷಿಗೆ ಪೂರಕವಾದ ಗೋವು ಸಂಪತ್ತು ಉಳಿಸ ಬೆಳೆಸಬೇಕು ಮತ್ತು ಸಾವಯುವ ಕೃಷಿಯನ್ನು ಪ್ರತಿಯೊಬ್ಬ ರೈತರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಶೇಗುಣಸಿಯ ಹನುಮಂತ ಮಹಾರಾಜರು, ನಂದಗಾoವ ಭೂಕೈಲಾಸ ಆಶ್ರಮದ ಮಹದೇವ ಮಹಾರಾಜರು, ಯಕ್ಕಂಚಿಯ ಗುರುದೇವ ತಪೋವನದ ಗುರುಪಾದ ಸ್ವಾಮಿಗಳು, ಶಿರೂರಿನ ಬಸವಲಿಂಗ ಸ್ವಾಮೀಜಿ, ಮಲ್ಲಾಪುರದ ತಮ್ಮಣ್ಣ ಶಾಸ್ತ್ರಿಗಳು ಮಾತನಾಡಿ ಸಾವಯುವ ಕೃಷಿಯ ಮಹತ್ವವನ್ನು ತಿಳಿಸಿದರು.ಸಮಾರಂಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಡಾ.ಪ್ರಕಾಶ್ ಕುಮಟಳ್ಳಿ, ಚಿದಾನಂದ ಸವದಿ, ನಾಗಪ್ಪ ಬಿಸ್ವಾಗರ, ಮಲ್ಲಪ್ಪ ಭದ್ರಪ್ಪಗೊಳ, ಭೀಮಪ್ಪ ಯಲ್ಲಡಗಿ, ಕಲ್ಮೇಶ ಯಲಡಗಿ, ಚೇತನ ಯಲ್ಲಡಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚೇತನ ಶಿವರಾಯ ಯಲ್ಲಡಗಿ ಸ್ವಾಗತಿಸಿದರು. ಶಿಕ್ಷಕ ಎ.ವೈ.ಗಲಗಲಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಥಣಿ ತಾಲೂಕಿನ ಶೇಗುಣಿಸಿ ಗ್ರಾಮದಲ್ಲಿ ಸದ್ಗುರು ಸಮರ್ಥ ಕಲ್ಮೇಶ್ವರ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಹಾಗೂ ಲಿಂ.ಗುರುಪಾದ ಯಲಡಗಿ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾವಯುವ ಕೃಷಿ ಚಿಂತನಾಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಹೇಶಾನಂದ ಸ್ವಾಮೀಜಿ ಮಾತನಾಡಿ ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ಹಾಳು ಮಾಡಬೇಡಿ ಎಂದರು.