ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾರ್ಖಾನೆ ಆರಂಭಕ್ಕೆ ಪೂಜೆ ನೆರವೇರಿಸುವುದನ್ನು ವಿರೋಧಿಸಿ, ಪೂಜೆಗೆ ತಂದಿದ್ದ ಕಬ್ಬನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸುವವರೆಗೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ತಾಲೂಕಿನ ಸಂಗೂರು ಸಕ್ಕರೆ ಕಾರ್ಖಾನೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಅಲ್ಲದೆ ಕಾರ್ಖಾನೆ ಆರಂಭಕ್ಕೆ ಪೂಜೆ ನೆರವೇರಿಸುವುದನ್ನು ವಿರೋಧಿಸಿ, ಪೂಜೆಗೆ ತಂದಿದ್ದ ಕಬ್ಬನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರಿ ಶಿಡ್ಲಾಪುರ ಮಾತನಾಡಿ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ, ಜಿಲ್ಲಾಧಿಕಾರಿ ಹಾಗೂ ಸಕ್ಕರೆ ಸಚಿವರಿಗೆ ರೈತರು ಮನವಿ ಸಲ್ಲಿಸಿ, ಕಬ್ಬಿನ ದರ ನಿಗದಿಪಡಿಸುವವರೆಗೆ ಯಾವುದೇ ಕಾರ್ಖಾನೆಯನ್ನೂ ಆರಂಭಿಸಬಾರದು ಎಂದು ಒತ್ತಾಯಿಸಿದ್ದರು. ಆದರೆ ರೈತರ ಮನವಿ ಕಡೆಗಣಿಸಿ ಸಂಗೂರು ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಂದಾಗಿರುವುದು ಖಂಡನೀಯ. ಕೂಡಲೇ ಕಾರ್ಖಾನೆಗೆ ಬೀಗ ಹಾಕಬೇಕು ಎಂದು ಪಟ್ಟುಹಿಡಿದರು.

ಪ್ರತಿ ಟನ್ ಕಬ್ಬಿಗೆ 5,500 ರು. ದರ ನಿಗದಿಪಡಿಸಬೇಕು. ದರ ನಿಗದಿಯಾಗುವವರೆಗೆ ಯಾವುದೇ ಸಕ್ಕರೆ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ. ರೈತರ ಒಪ್ಪಿಗೆ ಮತ್ತು ನ್ಯಾಯಯುತ ದರದ ಕುರಿತು ನಿರ್ಧಾರ ಕೈಗೊಂಡ ಬಳಿಕವೇ ಕಬ್ಬು ನುರಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸಂಗೂರು ಸಕ್ಕರೆ ಕಾರ್ಖಾನೆ ಮಾತ್ರವಲ್ಲದೆ ಬೈರನಪಾದದಲ್ಲಿರುವ ಜಿಎಂ-2 ಸಕ್ಕರೆ ಕಾರ್ಖಾನೆಯಲ್ಲಿಯೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬೇಡಿಕೆಗಳನ್ನು ಕಡೆಗಣಿಸಿ ಕಾರ್ಖಾನೆ ಆರಂಭಿಸಲು ಮುಂದಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ದೂರವಾಣಿ ಮೂಲಕ ಮಧ್ಯಸ್ಥಿಕೆ ವಹಿಸಿ, ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಮಾತನಾಡಿದರು. ರೈತರೊಂದಿಗೆ ಚರ್ಚಿಸುವವರೆಗೆ ಕಾರ್ಖಾನೆ ಆರಂಭಿಸುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ತಿಳಿಸಿದ ಬಳಿಕ ರೈತರು ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದರು.

ಸಂಘದ ಮುಖಂಡರಾದ ರಾಜಶೇಖರ ಬೆಟಗೇರಿ, ಪ್ರಕಾಶಗೌಡ ಪಾಟೀಲ, ಬಸಣ್ಣ ಬೆಳವಗಿ, ಸುರೇಶ ಸಜ್ಜನ, ನಾಗೇಂದ್ರಪ್ಪ ಕೆಂಗೊಂಡ, ಸುರೇಶ ಗಾಜಿ, ಮುತ್ತುನಗೌಡ ಪಾಟೀಲ, ಹೊನ್ನಪ್ಪ ಮಾಳಿಗಿ, ಫಕೀರಪ್ಪ ಗುಲಾಲ, ಮಂಜುನಾಥ ಅಸುಂಡಿ ಮತ್ತಿತರರು ಪಾಲ್ಗೊಂಡಿದ್ದರು.