ಸಣ್ಣಪುಟ್ಟ ಕೆಲಸಕ್ಕೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಿರಿ

| Published : Jun 27 2024, 01:02 AM IST

ಸಣ್ಣಪುಟ್ಟ ಕೆಲಸಕ್ಕೆ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಣ್ಣಪುಟ್ಟ ಕೆಲಸಗಳಿಗೂ ಅಲೆದಾಡುವಂತಾಗಿದೆ.

ಕೂಡ್ಲಿಗಿ: ತಾಲೂಕಿನಲ್ಲಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಣ್ಣಪುಟ್ಟ ಕೆಲಸಗಳಿಗೂ ಅಲೆದಾಡುವಂತಾಗಿದೆ. ತಾಲೂಕಿನ ಅಧಿಕಾರಿಗಳು ನಿದ್ದೆಯಿಂದ ಎದ್ದು ಸೇವೆಯಲ್ಲಿ ತೊಡಗಿಕೊಳ್ಳಿ. ನಿಮ್ಮ ಕಾರ್ಯ ವೈಖರಿ ಬದಲಾಗದಿದ್ದರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ಅವರು ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಸದುಪಯೋಗ ಸೇರಿ ನಾನಾ ಕುಂದು, ಕೊರತೆ ನಿವಾರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚಿನ ಹೆಚ್ಚಿನ ಆದ್ಯತೆ ನೀಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ಸ್ಪಂದನೆ ಸಿಕ್ಕಂತಾಗಿದೆ. ತಾಲೂಕಿನ ಅಧಿಕಾರಿಗಳು ಜವಾಬ್ದಾರಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸವ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸಿ. ಜನತಾ ದರ್ಶನದಲ್ಲಿ ಬಂದಿರುವ ಅರ್ಜಿಗಳಿಗೆ ಶೀಘ್ರವೇ ಪರಿಹಾರ ಸಿಗಬೇಕು ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಗೋವಿಂದಗಿರಿ ತಾಂಡಾ ಕಂದಾಯ ಗ್ರಾಮ ಮಾಡುವುದು ಹಾಗೂ ಸ್ಥಗಿತವಾಗಿರುವ ಶುದ್ಧ ಕುಡಿವ ನೀರಿನ ಘಟಕ ಜನರಿಗೆ ಉಪಯೋಗವಾಗಲಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮಹದೇವಪುರ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡದ ಜಾಗ ಒತ್ತುವರಿಯಾಗಿದ್ದು, ಕೊಳಚೆ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಒತ್ತುವರಿ ತೆರವು ಮಾಡಿಸಲು ಗ್ರಾಪಂ ಸದಸ್ಯರು ಸೇರಿ ಮುಖಂಡರು ಮನವಿ ಸಲ್ಲಿಸಿದರು.

ಕುಡಿವ ನೀರು, ಪಿಂಚಣಿ, ಪಡಿತರ ಚೀಟಿ, ಮಾಸಾಶನ, ಜಮೀನಿಗೆ ದಾರಿ, ಸ್ಮಶಾನ, ವಸತಿ, ಅಂಗನವಾಡಿ ಸೇರಿ ನಾನಾ ಸಮಸ್ಯೆಗಳ ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವಾಕರ, ಕೆಲವು ಸ್ಥಳದಲ್ಲೇ ಪರಿಹಾರ ಸಿಗಲು ಸಂಬಂಧಿಸಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಸಹಾಯಕ ಆಯುಕ್ತ ಮಹಮ್ಮದ್ ಅಕ್ರಂ ಷಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸಲನ್, ತಹಸೀಲ್ದಾರ್ ಎಂ.ರೇಣುಕಾ, ತಾಪಂ ಇಒ ವೈ.ರವಿಕುಮಾರ್ ಇದ್ದರು.

ವೀಲ್‌ಚೇರ್‌ನಲ್ಲಿ ಬಂದಿದ್ದ ನಿವೃತ್ತ ಯೋಧ: ಎರಡೂ ಕಾಲು ಕಳೆದುಕೊಂಡು ವೀಲ್‌ಚೇರ್‌ನಲ್ಲಿ ಆಗಮಿಸಿದ್ದ ನಿವೃತ್ತ ಯೋಧ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಶಕೀಲ್ ಬಾಷಾ ರಾಜ್ಯ ಸರ್ಕಾರ ನಿವೇಶನ, ಮನೆ, ಜಮೀನು ನೀಡಿಲ್ಲ. ಇದರಿಂದ ಕುಟುಂಬ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಡಿಸಿಗೆ ದೂರು ನೀಡಿದರು.

ಅಕ್ರಮ ಸಕ್ರಮ ಅರ್ಜಿಗಳಿಗೆ ಶೀಘ್ರ ಪಟ್ಟಾ ನೀಡುವುದು, ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳ ತೀರ್ಮಾನ ಬಗೆಹರಿಸುವುದು ಸೇರಿ ಹಲವು ಸಮಸ್ಯೆಗಳ ಕುರಿತು ದಸಂಸ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ನೇತೃತ್ವದಲ್ಲಿ ಮುಖಂಡರು ಮನವಿ ಸಲ್ಲಿಸಿದರು.

ಬಿಇಒಗೆ ನೋಟಿಸ್ ಕೊಡಿ: ಶಾಲೆಗಳಲ್ಲಿ ಬಿಸಿಯೂಟ ವಿವರ ಸೇರಿ ಯಾವುದೇ ವಿಷಯದ ಕುರಿತು ಕೇಳಿದರೂ ಗೊತ್ತಿಲ್ಲ ಎಂದು ಹೇಳುತ್ತಿರುವ ಬಿಇಒಗೆ ನೋಟಿಸ್ ನೀಡುವಂತೆ ಶಿಕ್ಷಣ ಇಲಾಖೆ ಮೇಲಧಿಕಾರಿಗಳಿಗೆ ಡಿಸಿ ದಿವಾಕರ್ ಸೂಚಿಸಿದರು. ಮನೆ ಬಾಗಿಲಿಗೆ ಇ ಸ್ವತ್ತು ನೀಡದೇ ಇರುವ ಪಿಡಿಒಗಳ ವಿರುದ್ಧ ಗರಂ ಆದರು.