ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಾಶ್ವತ ನೀರಾವರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಿಲ್ಲದೆ ಅನ್ಯ ಮಾರ್ಗವಿಲ್ಲ. ನಮ್ಮ ಹೋರಾಟಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲುಪುವ ರೀತಿಯಲ್ಲಿ ಕಟ್ಟಿ ಬೆಳಸಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದರು.ನಗರದ ಕೆಇಬಿ ಸಮುದಾಯಭವನದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಯುವಶಕ್ತಿ ಹಮ್ಮಿಕೊಂಡಿದ್ದ, ''''ಜಲಾಗ್ರಹ'''' ಜಂಟಿ ಕ್ರಿಯಾ ಸಮಿತಿಗೆ ಚಾಲನೆ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬೇರೆ ರೀತಿಯ ಹೋರಾಟನೀರಾವರಿ ವಿಚಾರವಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ಮೂರು ದಶಕಗಳಿಂದ ಹೋರಾಟ ನಡೆದಿದೆ. ಆದರೆ ಇನ್ನು ಮುಂದೆ ಮತ್ತೊಂದು ರೀತಿಯ ಬೇರೆ ಮಾರ್ಗದ ಹೋರಾಟವು ನಡೆಯಲಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವೆ. ರೈತರು, ಕೃಷಿ ಕಾರ್ಮಿಕರು,ಕನ್ನಡ ಪರ ಹೋರಾಟಗಾರರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರೂ ಈ ಹೋರಾಟದಲ್ಲಿ ಜೊತೆಯಾಗಬೇಕು ಎಂದರು.
ಕಳೆದ ಮೂರು ದಶಕಗಳಿಂದ ನಾನಾ ರೀತಿಯ ಹೋರಾಟ ಮಾಡಿದ್ದೇವೆ ಇದರಿಂದ ಬೆಂಗಳೂರಿನ ತ್ಯಾಜ್ಯ ನೀರು, ಎತ್ತಿನಹೊಳೆ ಯೋಜನೆಯ ಖಾಲಿ ಪೈಪುಗಳ ಪ್ರದರ್ಶನವಾಗುತ್ತಿದೆ. ಪೈಪುಗಳ ಮೂಲಕ ಬಂದ ಸರ್ಕಾರಗಳ ಜನ ಪ್ರತಿನಿಧಿಗಳು ಹಣ ಹೊಳೆ ಹರಿಸಿಕೊಳ್ಳುತಿದ್ದಾರೆ. ಇಂತಹ ದಪ್ಪ ಚರ್ಮದ ಸರ್ಕಾರಗಳನ್ನ ಬಡಿದೆಬ್ಬಿಸಲು ನಮ್ಮ ಮುಂದಿನ ದಾರಿ ಕ್ರಾಂತಿಕಾರಿ ಹೋರಾಟದ ಮೂಲಕ ಸಂಘರ್ಷದ ಹಾದಿ ಹಿಡಿಯಬೇಕಾಗುತ್ತದೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರು ಮೂರು ಹಂತದಲ್ಲಿ ಶುದ್ದೀಕರಣ ಆಗಬೇಕು ಎಂದು ಹೇಳಿದರು.ಸರ್ಕಾರಕ್ಕೆ ನಾಚಿಕೆ ಆಗಬೇಕು
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೈಗಾರಿಕೆಗೆ ಭೂಮಿ ಸ್ವಾಧೀನ ವಿರೋಧಿಸಿ ರೈತರು ಮೂರು ವರ್ಷ ಹೋರಾಟ ನಡೆಸಿದರು. ರೈತ ನಾಯಕರ ಸಮಕ್ಷಮದಲ್ಲಿಯೇ ಈ ಅಧಿಸೂಚನೆ ವಾಪಸ್ ಪಡೆಯುತ್ತೇವೆ ಎಂದು ಹೇಳಿ ಸರ್ಕಾರ ಎರಡು ತಿಂಗಳಾಯಿತು. ಆದರೂ ಅಧಿಸೂಚನೆ ವಾಪಸ್ ಪಡೆದಿಲ್ಲ. ನಾಚಿಕೆ ಆಗಬೇಕು ಈ ಸರ್ಕಾರಕ್ಕೆ. ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್‌ನವರಿಗೆ ಗುಲಾಮಗಿರಿ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ನೀರಿನ ರಕ್ಷಣೆ, ಬಳಕೆಯ ಬಗ್ಗೆ ಪ್ರಜ್ಞೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಅಂಶಗಳನ್ನು ಕಳೆದುಕೊಳ್ಳುತ್ತೇವೆ. ನಮ್ಮ ಕೆರೆ, ನದಿಗಳು ಬತ್ತಿರಬಹುದು. ಆದರೆ ಹೋರಾಟದ ಪ್ರಜ್ಞೆ ಬತ್ತಿಲ್ಲ. ಅದನ್ನು ಮತ್ತೆ ಪುನಶ್ಚತನಗೊಳಿಸಬೇಕು. ಎಲ್ಲರೂ ಸೇರಿ ಈ ಜಿಲ್ಲೆಗಳ ನೀರಾವರಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯೋಣ ಎಂದು ಹೇಳಿದರು. ಒಂದಾಗಿ ಹೋರಾಡಬೇಕುಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿ, ಪ್ರತ್ಯೇಕ ಹೋರಾಟಗಳಿಂದ ನಾವು ನೀರಿನ ಹಕ್ಕು ಪಡೆಯಲು ಸಾಧ್ಯವಿಲ್ಲ. ಮೂರು ಜಿಲ್ಲೆಗಳ ಜನರು ಪೆನ್ನಾರು ನದಿಕೊಳ್ಳದ ವ್ಯಾಪ್ತಿಗೆ ಒಳಪಡುತ್ತೇವೆ. ಇಲ್ಲಿಂದ ನಮಗೆ ನೀರು ಕೊಡಬೇಕು ಎನ್ನುವ ಆಲೋಚನೆಯನ್ನು ಯಾವುದೇ ಸರ್ಕಾರಗಳು ಮಾಡಿಲ್ಲ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಎಚ್.ವಿ.ವಾಸು,ಕೃಷಿ ವಿಜ್ಞಾನಿ ವೆಂಕಟರೆಡ್ಡಿ, ಸಿಪಿಎಂನ ಅನಿಲ್ ಕುಮಾರ್, ಆವುಲಪ್ಪ, ಕಾಂಮ್ರೇಡ್ ಲಕ್ಷ್ಮಯ್ಯ, ಹೋರಾಟಗಾರರಾದ ಸುಲೋಚನಾ, ಎಂ.ಆರ್.ಲಕ್ಷ್ಮಿನಾರಾಯಣ್, ಹೊಳಲಿ ಪ್ರಕಾಶ್, ಅಬ್ಬಣಿ ಶಿವಪ್ಪ,ಬಾಗೇಪಲ್ಲಿ ರಾಜ್ಯ ರೈತಸಂಘದ ಅಧ್ಯಕ್ಷ ಜಿಜಿ ಹಳ್ಳಿ ನಾರಾಯಣಸ್ವಾಮಿ, ರೈತ ಜನಸೇನಾ ಸಂಸ್ಥಾಪಕಿ ಸಿ.ಎನ್.ಸುಷ್ಮಾಶ್ರೀನಿವಾಸ್, ನಿರಾವರಿ ಹೋರಾಟಗಾರರಾದ ಮಳ್ಳೂರು ಹರೀಶ್, ರಾಮೇಗೌಡ,ಲೋಕೇಶ್,ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮುನಿವೆಂಕಟರೆಡ್ಡಿ ಮತ್ತಿತರರು ಇದ್ದರು.