ವೈದ್ಯರಿಗೆ ಡಾ. ಬಿ.ಸಿ.ರಾಯ್‌ ಸಾಧನೆ ಮಾದರಿಯಾಗಲಿ

| Published : Jul 09 2024, 12:50 AM IST

ವೈದ್ಯರಿಗೆ ಡಾ. ಬಿ.ಸಿ.ರಾಯ್‌ ಸಾಧನೆ ಮಾದರಿಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರ ಆಗುತ್ತಿರುವುದು ಬೇಸರದ ಸಂಗತಿ. ಆದರೆ ಅದರ ಉದ್ದೇಶ ವ್ಯಾಪಾರ ಮಾಡುವುದವಲ್ಲ, ಸೇವೆ ಮಾಡುವುದಾಗಿದೆ. ಆದ್ದರಿಂದ ವೈದ್ಯರೆಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಬಿ.ಸಿ ರಾಯ್ ಅವರ ಉದ್ದೇಶ, ಸೇವೆ ವೈಖರಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಅವರು ಮುಖ್ಯಮಂತ್ರಿಯಾಗಿದ್ದರೂ, ತೋರಿದ ಸೇವಾ ಮನೋಭಾವ ಇಂದಿಗೂ ಪ್ರಸ್ತುತ ಎಂದು ಭಾರತೀಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್‌ಕುಮಾರ್ ಅಭಿಪ್ರಾಯಪಟ್ಟರು.

- ಹೊನ್ನಾಳಿಯಲ್ಲಿ ವೈದ್ಯರ ದಿನ ಕಾರ್ಯಕ್ರಮದಲ್ಲಿ ಡಾ. ಎಚ್.ಪಿ. ರಾಜ್‌ಕುಮಾರ್ ಸಲಹೆ- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವೃತ್ತಿ ವ್ಯಾಪಾರ ಆಗುತ್ತಿರುವುದು ಬೇಸರದ ಸಂಗತಿ. ಆದರೆ ಅದರ ಉದ್ದೇಶ ವ್ಯಾಪಾರ ಮಾಡುವುದವಲ್ಲ, ಸೇವೆ ಮಾಡುವುದಾಗಿದೆ. ಆದ್ದರಿಂದ ವೈದ್ಯರೆಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಬಿ.ಸಿ ರಾಯ್ ಅವರ ಉದ್ದೇಶ, ಸೇವೆ ವೈಖರಿಯನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು. ಅವರು ಮುಖ್ಯಮಂತ್ರಿಯಾಗಿದ್ದರೂ, ತೋರಿದ ಸೇವಾ ಮನೋಭಾವ ಇಂದಿಗೂ ಪ್ರಸ್ತುತ ಎಂದು ಭಾರತೀಯ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಎಚ್.ಪಿ. ರಾಜ್‌ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ವೈದ್ಯರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ತಾಲೂಕಿನ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿ, ಹಳ್ಳಿಯಲ್ಲಿ ಓದಿ, ಹಳ್ಳೂರು ಡಾಕ್ಟರ್ ಎಂದೇ ಖ್ಯಾತಿ ಪಡೆದ ಡಾ. ಚಿದಾನಂದ್ ಅವರ ಸೇವೆ ಶ್ಲಾಘನೀಯವಾಗಿದೆ. ಕೊರೋನಾ ಹಾವಳಿ ಸಂದರ್ಭ ಬಹಳಷ್ಟು ವೈದ್ಯರು ತಾವೇ ಕೊರೋನಾಕ್ಕೆ ತುತ್ತಾಗುವ ಅಪಾಯವಿದ್ದರೂ, ಅದನ್ನು ಲೆಕ್ಕಿಸದೇ ಹಲವರ ಪ್ರಾಣ ಉಳಿಸಿ ದೇವರಾಗಿದ್ದಾರೆ ಎಂದರು.

ಹಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಎಲ್.ಚಿದಾನಂದ್ ಮಾತನಾಡಿ, ಇಂದು ಶುಗರ್, ಬಿ.ಪಿ. ಸಮಸ್ಯೆ ಜನರಲ್ಲಿ ಹೆಚ್ಚಿನದಾಗಿ ಕಾಣಿಸಿಕೊಳ್ಳುತ್ತಿದೆ. ಇವುಗಳನ್ನು ಹತೋಟಿಯಲ್ಲಿಡಲು ಒಳ್ಳೆಯ ಆಹಾರ ಸೇವಿಸಬೇಕು. ಸಮತೋಲನ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಅತಿ ಮುಖ್ಯ ಎಂದರು.

ನ್ಯಾಮತಿಯ ಶ್ವಾಸಕೋಶ ತಜ್ಞ ಅಭಿಷೇಕ್ ನುಚ್ಚಿನ್ ಮಾತನಾಡಿ, ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿ ಪಾಠಕ್ಕಿಂತ ಆಟ ಬಹಳ ಮುಖ್ಯ. ಹೆಚ್ಚು ಹೆಚ್ಚು ಆಟವಾಡುವ ಮಕ್ಕಳು ಆರೋಗ್ಯವಾಗಿರುತ್ತಾರೆ. ಆದ್ದರಿಂದ ಪೋಷಕರು ಮಕ್ಕಳನ್ನು ಪ್ರತಿದಿನ ಒಂದಿಷ್ಟು ಕಾಲ ಆಟವಾಡಲು ಬಿಡುವಂತೆ ಸಲಹೆ ನೀಡಿದರು.

ಹೊನ್ನಾಳಿಯ ದಂತವೈದ್ಯ ಕುರುವ ಮಂಜುನಾಥ್ ಮಾತನಾಡಿ, ಹಲ್ಲುಗಳ ಆರೋಗ್ಯವು ಮುಖ್ಯವಾದದ್ದು. ಇಂದು ಚಾಕಲೇಟ್ ಹಾಗೂ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಹಲ್ಲುಗಳು ಹಾಳಾಗುತ್ತಿವೆ. ದಿನಕ್ಕೆ ಎರಡು ಸಲ ಬ್ರಷ್ ಮಾಡಬೇಕು. ರಾತ್ರಿ ಹಲ್ಲುಜ್ಜುವುದು ಬಹಳ ಮುಖ್ಯ. ಸಿಹಿ ತಿಂದಾಗ ಬಾಯಿ ಮುಕ್ಕುಳಿಸಿ ಹಲ್ಲಿನ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು. ಹಳ್ಳೂರಿನ ವೈದ್ಯ ಎಲ್. ಚಿದಾನಂದ್ ಅವರನ್ನು ಭಾರತೀಯ ವಿದ್ಯಾ ಸಂಸ್ಥೆ, ಹೊನ್ನಾಳಿಯ ಔಷಧಿ ವರ್ತಕರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೈದ್ಯರಾದ ಡಾ. ಶಕುಂತಲಾ ರಾಜ್ ಕುಮಾರ್, ಡಾ. ನರೇಂದ್ರ, ಡಾ. ಮಲ್ಲಿಕಾರ್ಜುನ್, ಡಾ. ರಾಜನಾಯ್ಕ್ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಶಿವಾನಂದ ಸ್ವಾಮಿ, ಕಾರ್ಯದರ್ಶಿ ಶೈಲೇಶ್, ಖಜಾಂಚಿ ಪ್ರಕಾಶ್ ಹೆಬ್ಬಾರ್, ವಿಶ್ವನಾಥ್, ದತ್ತಾತ್ರೆಯ ವೈಶ್ಯರ ಉಪಸ್ಥಿತರಿದ್ದರು.

- - -

ಬಾಕ್ಸ್‌ "ಸ್ವಾಸ್ಥ್ಯ ಸಮಾಜ ನಿರ್ಮಾಣ ವೈದ್ಯರ ಹೊಣೆ "ಹೊನ್ನಾಳಿಯ ವೈದ್ಯ ಜಗದೀಶ್ ಮಾತನಾಡಿ, ಬಿ.ಸಿ ರಾಯ್ ಸಾಧನೆ ಇಂದಿಗೂ ಸ್ಮರಣೀಯರು. ರಾಜಕೀಯ ಸೇವೆಗಿಂತ ಅವರ ವೈದ್ಯಕೀಯ ಸೇವೆಯು ನಮಗೆ ಆದರ್ಶವಾಗಿದೆ. ವೈದ್ಯರು ಸೇವಾ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಅದರಂತೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವ ಹೊಣೆಗಾರಿಕೆಯು ವೈದ್ಯರ ಮೇಲಿದೆ. ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ತಡೆಗಟ್ಟುವುದರಲ್ಲಿ ನಮ್ಮ ಪಾತ್ರ ಅತಿಮುಖ್ಯ ಎಂದರು.

- - - -8ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಹಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಡಾ. ಎಲ್.ಚಿದಾನಂದ್ ಅವರನ್ನು ಸನ್ಮಾನಿಸಲಾಯಿತು.