ವೈದ್ಯರು ಮೆದುಳು, ಶುಶ್ರೂಷಕರು ಹೃದಯವಿದ್ದಂತೆ

| Published : Jul 04 2025, 11:53 PM IST

ಸಾರಾಂಶ

ಚಾಮರಾಜನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ನಗರದ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಶುಶ್ರೂಷ ಪರೀಕ್ಷಾ ಮಂಡಳಿಯ ಪರೀಕ್ಷೆಯಲ್ಲಿ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಮಂಜುಳಾ ಹಾಗೂ ಫಾತೀಮಾ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರು ಮೆದುಳಾದರೆ ಶುಶ್ರೂಷಕರು ಹೃದಯವಿದ್ದಂತೆ ಎಂದು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದರು.

ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ನಗರದ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಜ್ಯೋತಿ ಬೆಳಗಿಸುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸಮಾಜದ ಆರೋಗ್ಯ ಸುಧಾರಿಸುವಲ್ಲಿ ಇಬ್ಬರ ಪಾತ್ರ ಮಹತ್ತರವಾದದ್ದು. ಮುಂದಿನ ಯಶಸ್ವಿ ಜೀವನಕ್ಕೆ ಪ್ರಾಯೋಗಿಕ ಜ್ಞಾನ ಅತಿ ಮುಖ್ಯವಾಗಿದ್ದು, ನಿಮ್ಮ ಸೇವಾವೃತ್ತಿಯಲ್ಲಿ ಕರುಣೆ, ಪ್ರೀತಿ ಹಾಗೂ ಉತ್ತಮ ಸಂವಹರವನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತರಾದರೆ ರೋಗಿಯ ಶೇ.20 ಕಾಯಿಲೆ ವಾಸಿಯಾಗುವುದರ ಜೊತೆಗೆ ಶ್ರೇಷ್ಠ ವ್ಯಕ್ತಿಗಳಾಗುತ್ತೀರಿ ಎಂದರು.

ಕಷ್ಟದಿಂದ ಬರುವ ಪ್ರತಿಯೊಬ್ಬ ರೋಗಿ ಹಾಗೂ ಅವರ ಪೋಷಕರನ್ನು ನಗುಮುಖದಿಂದ ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳನ್ನು ನಗುಮುಖದಿಂದ ಮಾತನಾಡಿಸಿದರೆ ಅವರಿಗೆ ಆತ್ಮಸ್ಥೈರ್ಯ ಬರುತ್ತದೆ ಎಂದರು.

ವಿದೇಶಗಳಲ್ಲಿ ನಮ್ಮ ದೇಶದ ಶುಶ್ರೂಷಕರ ಸೇವೆಗೆ ಬಹಳ ಮಹತ್ವವಿದೆ. ಜರ್ಮನ್ ದೇಶ ಒಂದೇ ವರ್ಷಕ್ಕೆ 5ಲಕ್ಷ ಭಾರತೀಯ ಶುಶ್ರೂಷಕರ ಸೇವೆಯನ್ನು ಬಯಸುತ್ತದೆ. ಅಲ್ಲಿಯ ಭಾಷೆ ಹಾಗೂ ಸಂವಹನ ಕಲೆ ಕಲಿತರೆ ತಿಂಗಳಿಗೆ ೫ ಲಕ್ಷದವರೆಗೂ ಸಂಬಳ ಪಡೆಬಹುದು. ನರ್ಸಿಂಗ್ ವೃತ್ತಿ ಆರಿಸಿಕೊಂಡರೆ ನೂರಕ್ಕೆ ನೂರು ಕೆಲಸ ಗ್ಯಾರಂಟಿ ಎಂದರು.

ನರ್ಸಿಂಗ್ ಜಗತ್ತಿನ ಶ್ರೇಷ್ಠ ವೃತ್ತಿ. ಜನರೊಂದಿಗೆ ಬೆರೆಯುವ, ನೋವು ನಲಿವುಗಳಿಗೆ ಸ್ಪಂದಿಸುವ ಸೇವಾಮನೋಭಾವನೆಯ ಶ್ರೇಷ್ಠ ವೃತ್ತಿ. ಪ್ರತಿಜ್ಞಾ ವಿಧಿ ಸ್ವೀಕರಿಸಿ ಅಧ್ಯಯನ ಮಾಡುವ ಯಾವುದಾದರೂ ಕೋರ್ಸ್ ಇದ್ದರೆ ಅದು ನರ್ಸಿಂಗ್ ಎಂದರು.

ಇದು ಮಲೆ ಮಹದೇಶ್ವರರಂತಹ ಸಂತರು ನೆಲೆಸಿದ ಪುಣ್ಯ ಭೂಮಿ. ಇಲ್ಲಿನ ಸಂಸ್ಕೃತಿ - ಸಂಪ್ರದಾಯ ಶ್ರೇ಼ಷ್ಠವಾದದು. ಮೈಸೂರು ವಿಭಾಗದ ಅತಿ ಹೆಚ್ಚು ಅಂಕಪಡೆದ 5 ವಿದ್ಯಾರ್ಥಿಗಳಲ್ಲಿ ಇಲ್ಲಿನ ಜೆಎಸ್‌ಎಸ್ ನರ್ಸಿಂಗ್ ಶಾಲೆಯ 3 ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದು ಹೆಮ್ಮೆ ಪಡುವ ವಿಚಾರ. ಇದು ನಿಮಗೆ ಪ್ರೇರಣೆಯಾಗಬೇಕು. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಯಶಸ್ಸು ಸಾಧಿಸಿ ಪೋಷಕರ ಕನಸನ್ನು ನನಸು ಮಾಡಿ ಎಂದರು.

ಸಮಾರಂಭ ಉದ್ಘಾಟಿಸಿದ ನಗರದ ಸಿಮ್ಸ್ ಬೋಧನಾ ಆಸ್ಪತ್ರೆ ಪ್ರಾಂಶುಪಾಲ ಡಾ. ಗಿರೀಶ್ ವಿ. ಪಾಟೀಲ್, ಪ್ರಸ್ತುತದಲ್ಲಿ ಒತ್ತಡದಿಂದ ಶೇ. 10ರಷ್ಟು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ನರ್ಸಿಂಗ್ ಮಾಡುವಾಗ ಒತ್ತಡಕ್ಕೆ ಒಳಗಾಗಬೇಡಿ ಎಂದರು.

ಒಳ್ಳೆಯ ಮನೋಭಾವನೆ, ಆತ್ಮವಿಶ್ವಾಸದಿಂದ ಯಶಸ್ಸನ್ನು ಸಾಧಿಸಬಹುದು, ಇಲ್ಲಿ ಪಡೆಯುವ ಅನುಭವ ನಿಮಗೆ ಮುಂದೆ ಸಹಾಯವಾಗುತ್ತದೆ. ಆದ್ದರಿಂದ ದೃಢ ಸಂಕಲ್ವದಿಂದ, ಉತ್ತಮವಾದ ಸ್ವಂತ ನಿರ್ಧಾರವನ್ನು ಕೈಗೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಈ ವೃತ್ತಿಯಲ್ಲಿ ಆಧುನಿಕತೆಗೆ ಹೊಂದಿಕೊಂಡರೆ ಉತ್ತಮ ಅವಕಾಶಗಳು ಇವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಜೆಎಸ್‌ಎಸ್ ವ್ಯದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕರಾದ ಆರ್. ಮಹೇಶ್ ಮಾತನಾಡಿ, ಇಲ್ಲಿ ಸಮರ್ಪಣಾ ಮನೋಭಾವನೆ ಅತಿ ಮುಖ್ಯ. ಫ್ಲಾರೆನ್ಸ್ ನೈಟಿಂಗ್‌ಹೇಲ್ ಅವರ ನಿಸ್ವಾರ್ಥ ಸೇವೆ, ಯುದ್ದದ ಸಮಯದಲ್ಲಿ ರಾತ್ರಿ ವೇಳೆ ವಿದ್ಯುತ್ ಇಲ್ಲದಿದ್ದಾಗ ಕ್ಯಾಂಡಲ್ ಹಿಡಿದು ಗಾಯಾಳುಗಳನ್ನು ಶುಶ್ರೂಷೆ ಮಾಡಿದ ಸೇವೆ ನಿಮಗೆ ಸ್ಫೂರ್ತಿಯಾಗಬೇಕು ಎಂದರು.

ಜ್ಯೋತಿ ಬೆಳಗುವಿಕೆ ನೆರವೇರಿಸಿದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶುಶ್ರೂಷಕ ಅಧೀಕ್ಷರಾದ ಗೀತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಶರತ್‌ಬಾಬು, ಡಾ. ಸುರೇಶ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವಿಗೆ ಮತ್ತು ನಿಸ್ವಾರ್ಥ ಸೇವೆ ಮಾಡುತ್ತೇವೆ ಎಂಬ ಪ್ರತಿಜ್ಞಾವಿಧಿಯನ್ನು ಪ್ರಾಂಶುಪಾಲ ವಿನಯಕುಮಾರ್ ಬೋಧಿಸಿದರು.ಇದೇ ಸಂದರ್ಭದಲ್ಲಿ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಪರೀಕ್ಷೆಯಲ್ಲಿ ಮೈಸೂರು ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಮಂಜುಳಾ ಹಾಗೂ ಫಾತೀಮಾ ಅವರನ್ನು ಸನ್ಮಾನಿಸಲಾಯಿತು ಉಪನ್ಯಾಸಕಿ ಉಷಾ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಿತಾ, ಮಾಧು, ಇತರರು ಇದ್ದರು.