ವೈದ್ಯರ ದಿನಾಚರಣೆ ಅಂಗವಾಗಿ ಶಿಕಾರಿಪುರದ ಬಾಪೂಜಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವೈದ್ಯಾಧಿಕಾರಿಗಳಿಗೆ ಶುಭ ಕೋರಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸಮಾಜದ ಒಳಿತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ ರಾತ್ರಿ-ಹಗಲು ಎಂಬ ಬೇಧವಿಲ್ಲದೇ ಜನರ ಸೇವೆಗಾಗಿ ಜೀವನ ಮುಡುಪಾಗಿಟ್ಟಿರುವ ವೈದ್ಯರು ಭಗವಂತನ ಪ್ರತಿರೂಪವಾಗಿದ್ದಾರೆ ಎಂದು ಇಲ್ಲಿನ ಬಾಪೂಜಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ, ನಿವೃತ್ತ ಮುಖ್ಯ ಶಿಕ್ಷಕ ಬಿ.ಪಾಪಯ್ಯ ತಿಳಿಸಿದರು.ಸ್ಥಳೀಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮೇಲು-ಕೀಳು ಎಂಬ ಬೇಧವಿಲ್ಲದೇ ಸಮಾಜದಲ್ಲಿನ ಪ್ರತಿಯೊಬ್ಬ ರೋಗಿಗೂ ಚಿಕಿತ್ಸೆ ನೀಡುವ ವೈದ್ಯರ ಸೇವೆ ಅತ್ಯಂತ ಶ್ರೇಷ್ಟವಾಗಿದ್ದು, ಸ್ವಹಿತ ತ್ಯಾಗದ ಮೂಲಕ ಸಮಾಜದ ಒಳಿತಿಗಾಗಿ ರಾತ್ರಿ- ಹಗಲು ಸೇವೆ ಸಲ್ಲಿಸುವ ವೈದ್ಯರು ನಡೆದಾಡುವ ದೇವರಾಗಿದ್ದಾರೆ. ವೈದ್ಯರ ಸ್ವಾರ್ಥ ರಹಿತ ಸೇವೆಯಿಂದಾಗಿಯೇ ಸಮಾಜ ಆರೋಗ್ಯಕರವಾಗಿದೆ ಎಂದು ತಿಳಿಸಿದರು.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಿವಾನಂದ್ ಮಾತನಾಡಿ, ಪ್ರೀತಿ ಮತ್ತು ಅಭಿನಂದನೆಯನ್ನು ನೋಡಿ ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ಕೃತಜ್ಞತೆಯನ್ನು ತಿಳಿಸಿದರು. ಭವಿಷ್ಯದಲ್ಲಿ ಪ್ರೀತಿ,ವಿಶ್ವಾಸ ಹೀಗೆ ಇರಲಿ ಎಂದು ಆಶಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ವತಿಯಿಂದ ವೈದ್ಯರಿಗೆ ಹಾಗೂ ಶುಶ್ರೂಷಕ ಸಿಬ್ಬಂದಿಗೆ ಹೂಗುಚ್ಛ ನೀಡಿ ಶುಭಾಶಯ ಕೋರಿ ಅಭಿನಂದಿಸಲಾಯಿತು. ಕಾರ್ಯದರ್ಶಿ ಪವಿತ್ರ, ವೈದ್ಯಾಧಿಕಾರಿ ಡಾ.ನವೀನ್, ಡಾ.ಬಸವರಾಜ್ ತಳವಾರ್, ಡಾ.ಪೂಜಾ, ಶುಶ್ರೂಷಕ ವೈಲೆಟ್ ಲೆನೋವ, ಕೋಕಿಲ, ಭಾಗೀರಥಿ, ಜಯಪ್ಪ ಸಿಬ್ಬಂದಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.