ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸತ್ತ ವ್ಯಕ್ತಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದ ಕಿಡಿಗೇಡಿಗಳು ವೈದ್ಯಕೀಯ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ, ಆಸ್ಪತ್ರೆಯ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದ ಘಟನೆಯನ್ನು ಖಂಡಿಸಿ ಅಥಣಿಯ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಔಷಧಿ ವ್ಯಾಪಾರಸ್ಥರು, ನರ್ಸಿಂಗ್ ಹೋಂ, ನರ್ಸಿಂಗ್ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಮಂಗಳವಾರ ಕೆಲಕಾಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸತ್ತ ವ್ಯಕ್ತಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದ ಕಿಡಿಗೇಡಿಗಳು ವೈದ್ಯಕೀಯ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಲ್ಲದೆ, ಆಸ್ಪತ್ರೆಯ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದ ಘಟನೆಯನ್ನು ಖಂಡಿಸಿ ಅಥಣಿಯ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಔಷಧಿ ವ್ಯಾಪಾರಸ್ಥರು, ನರ್ಸಿಂಗ್ ಹೋಂ, ನರ್ಸಿಂಗ್ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಮತ್ತು ಸಂಘಟನೆಯ ಪ್ರಮುಖರ ನೇತೃತ್ವದಲ್ಲಿ ಮಂಗಳವಾರ ಕೆಲಕಾಲ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಬುಧವಾರ ಪೇಟೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ವೈದ್ಯರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಪಟ್ಟಣದ ಹಿರಿಯ ವೈದ್ಯ ಡಾ.ಎ.ಎ.ಪಾಂಗಿ ಮಾತನಾಡಿ, ಪಟ್ಟಣದ ಗುಂಜಿಗಾವಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ನಡೆದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪೊಲೀಸ್ ಅಧಿಕಾರಿಗಳು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಆತನಿಗೆ ಕಾನೂನು ಶಿಕ್ಷೆ ವಿಧಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಈ ವೇಳೆ ಡಾ.ಎಂ.ಜಿ.ಹಂಜಿ, ಡಾ.ಅವಿನಾಶ ನಾಯಿಕ, ಡಾ.ರಾಮ ಕುಲಕರ್ಣಿ, ಡಾ.ಆನಂದ ಗುಂಜಿಗಾವಿ, ಐಎಂಎ ಅಧ್ಯಕ್ಷ ಡಾ.ಸ್ಮಿತಾ ಚೌಗಲಾ ಮಾತನಾಡಿ ಅಥಣಿ ಪಟ್ಟಣದ ಗುಂಜಿಗಾವಿ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಮೇಲಿನ ಹಲ್ಲೆ ಖಂಡನೀಯ. ನಾವು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆ ಮಾಡುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿಲ್ಲ, ಕೆಲಸ ಮಾಡುವ ವೈದ್ಯರಿಗೆ ಗೌರವ ನೀಡಬೇಕು. ಆಸ್ಪತ್ರೆಗಳಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಸಿದ್ದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಸಿ.ಎ.ಶಂಕ್ರಟ್ಟಿ, ಡಾ.ಮಹೇಶ್ ಕಾಪ್ಸೆ, ಡಾ.ಆನಂದ ಕುಲಕರ್ಣಿ, ಡಾ.ಜಿ.ಎಸ್.ಪಾಟೀಲ, ಡಾ.ಮುರುಗೇಶ ಅವಟಿ, ಡಾ.ರಮೇಶ್ ಗುಳ್ಳ, ಡಾ.ರಾಹುಲ್ ಬೋಸಲೆ, ಡಾ.ವಿಜಯ ಚೈನಿ, ಡಾ.ರವಿ ಪಾಂಗಿ, ಡಾ.ವಿಶ್ವನಾಥ ಕುಲಕರ್ಣಿ, ಡಾ.ಸಚಿನ್ ಮೀರಜ, ಡಾ.ರಮೇಶ್ ಕಾರೆ, ಡಾ.ನಂದೀಶ್ ತೇರದಾಳ, ಡಾ.ರವಿ ಚೌಗಲಾ, ಡಾ.ಸಂಗಮೇಶ್ ಮಮದಾಪುರ, ಡಾ.ಚಿದಾನಂದ ಮೇತ್ರಿ, ಡಾ.ಪ್ರಕಾಶ್ ಕುಮಠಳ್ಳಿ, ವಿಜಯಕುಮಾರ ಬುರ್ಲಿ, ಪ್ರಶಾಂತ ತೋಳ್ಕರ, ಮಹದೇವ ಹಳ್ಳದಮಳ ಸೇರಿ ವೈದ್ಯರು, ಔಷಧಿ ವ್ಯಾಪಾರಸ್ಥರು, ಆಸ್ಪತ್ರೆ ಸಿಬ್ಬಂದಿ, ಅಂಬುಲೆನ್ಸ್, ನರ್ಸಿಂಗ್, ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.-----
ಕೋಟ್ರೋಗಿಗಳಿಗೆ ಉತ್ತಮ ಸೇವೆ ನೀಡುವುದೇ ನಮ್ಮ ಕರ್ತವ್ಯ. ಆದರೆ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣಗಳು ನಡೆದರೆ ಆತಂಕದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಅಥಣಿಯಲ್ಲಿ ನಡೆದಿರುವ ಈ ಘಟನೆ ಖಂಡನೀಯ, ಸರ್ಕಾರ ಮತ್ತು ತಾಲೂಕು ಆಡಳಿತ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆಗಳು ನಿಲ್ಲಬೇಕು.
ಡಾ.ಮಲ್ಲಿಕಾರ್ಜುನ ಹಂಜಿ, ಹಿರಿಯ ವೈದ್ಯರು.