ವೈದ್ಯರು, ಪಿಎಚ್‌ಸಿ ಹೆಸರು ಹಾಳು ಮಾಡಲು ಹುನ್ನಾರ: ಸುರೇಂದ್ರ

| Published : Nov 14 2024, 12:57 AM IST

ವೈದ್ಯರು, ಪಿಎಚ್‌ಸಿ ಹೆಸರು ಹಾಳು ಮಾಡಲು ಹುನ್ನಾರ: ಸುರೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಅವಿನಾಶ ಅವರನ್ನು ವರ್ಗಾವಣೆ ಮಾಡಲು, ಪ್ರಾಥಮಿಕ ಕೇಂದ್ರದ ಹೆಸರು ಹಾಳು ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಅವಿನಾಶ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೇ ಅಂಗಡಿಯಲ್ಲೇ ಮುಂದುವರಿಸಬೇಕು ಎಂದು ಸುರೇಂದ್ರ ಗಾಂವಕರ ಆಗ್ರಹಿಸಿದರು.

ಕಾರವಾರ: ತಾಲೂಕಿನ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಾಗೂ ಅಲ್ಲಿನ ವೈದ್ಯ ಡಾ. ಅವಿನಾಶ ನಾಯಕ ಅವರ ಹೆಸರನ್ನು ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಜತೆಗೆ ಜನರಿಗೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿರುವ ಅವಿನಾಶ ಅವರನ್ನು ವರ್ಗಾವಣೆ ಮಾಡುವ ಹುನ್ನಾರ ನಡೆದಿದೆ ಎಂದು ಮುಡಗೇರಿ ಗ್ರಾಪಂ ಅಧ್ಯಕ್ಷ ಸುರೇಂದ್ರ ಗಾಂವಕರ ಆರೋಪಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಾ. ಅವಿನಾಶ ಅವರ ಟೇಬಲ್ ಮೇಲೆ ತಲೆ ಬುರುಡೆಯಿದೆ. ಅವಿನಾಶ ಮಹಿಳಾ ರೋಗಿಗಳ ಕೊಠಡಿಯಲ್ಲಿ ಒಳಉಡುಪು ಇಡುತ್ತಾರೆ. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿ ತಲೆಬುರುಡೆ ಇಟ್ಟರೆ ತಪ್ಪೇನಿದೆ? ಮಹಿಳಾ ಕೊಠಡಿಯಲ್ಲಿ ಇರುವ ಒಳಉಡುಪು ಅವರದ್ದೇ ಎಂದು ಸಾಬೀತಾಗಿದೆಯೇ? ಕಳೆದ ಒಂದೂವರೆ ವರ್ಷದಿಂದ ಡಾ. ಅವಿನಾಶ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮವಾಗಿ ಸೇವೆ ಒದಗಿಸುತ್ತಿದ್ದಾರೆ ಎಂದರು.ಡಾ. ಅವಿನಾಶ ಇಲ್ಲಿಗೆ ಬಂದ ಮೇಲೆಯೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಏನೆಲ್ಲ ಚಿಕಿತ್ಸೆಗಳು ದೊರೆಯುತ್ತವೆ ಎಂದು ಸಾರ್ವಜನಿಕರಿಗೆ ತಿಳಿದುಬಂದಿದೆ. ಕೇವಲ ಪ್ರಾಥಮಿಕ ಚಿಕಿತ್ಸೆಗಳಲ್ಲದೇ, ದಿನದ ಸಮಯದಲ್ಲಿ ಅಗತ್ಯವಿರುವ ಚಿಕಿತ್ಸೆ ನೀಡಲು ರೋಗಿಗಳನ್ನು ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಗಾಯಗಳಿಗೆ ಹೊಲಿಗೆ ಕೂಡಾ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಚಿಕ್ಕ ಚಿಕ್ಕ ವೈದ್ಯಕೀಯ ಸೇವೆಗೂ ನಗರದ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗುತ್ತಿತ್ತು. ಡಾ. ಅವಿನಾಶ ಅವರನ್ನು ವರ್ಗಾವಣೆ ಮಾಡಲು, ಪ್ರಾಥಮಿಕ ಕೇಂದ್ರದ ಹೆಸರು ಹಾಳು ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಅವಿನಾಶ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದೇ ಅಂಗಡಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ನಂದಕಿಶೋರ ನಾಯ್ಕ, ದೀಪಕ ನಾಯ್ಕ, ಗಣಪತಿ ನಾಯ್ಕ, ಕಿಶನ ಪಡವಳಕರ, ರಜತ ಠಕ್ಕರಕರ, ಶ್ಯಾಮ ನಾಯ್ಕ ಇದ್ದರು.ಗ್ರಾಪಂ ಉಪಚುನಾವಣೆ: ಸಂತೆ, ಜಾತ್ರೆ ನಿಷೇಧ

ಕಾರವಾರ: ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆಯ ಮತದಾನ ಕಾರ್ಯವು ಸುಸೂತ್ರವಾಗಿ ನಡೆಯಲು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಮತದಾನ ದಿನದಂದು ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ.ಕಾರವಾರ ತಾಲೂಕಿನ ಚಿತ್ತಾಕುಲಾ, ಅಂಕೋಲಾ ತಾಲೂಕಿನ ಸಗಡಗೇರಿ, ಕುಮಟಾ ತಾಲೂಕಿನ ಹನೇಹಳ್ಳಿ, ಬರ್ಗಿ, ಹೊನ್ನಾವರ ತಾಲೂಕಿನ ಮಾಗೋಡ, ಭಟ್ಕಳ ತಾಲೂಕಿನ ಶಿರಾಲಿ, ಶಿರಸಿ ತಾಲೂಕಿನ ಬಿಸಲಕೊಪ್ಪ, ಹುತ್ತಗಾರ, ಸಿದ್ಧಾಪುರ ತಾಲೂಕಿನ ದೊಡ್ಮನೆ, ಮುಂಡಗೋಡ ತಾಲೂಕಿನ ಹುನಗುಂದ, ಹಳಿಯಾಳ ತಾಲೂಕಿನ ಬೆಳವಟಗಿ, ಜನಗಾ, ಅರ್ಲವಾಡ, ದಾಂಡೇಲಿ ತಾಲೂಕಿನ ಅಂಬಿಕಾನಗರ ಮತ್ತು ಜೋಯಿಡಾ ತಾಲೂಕಿನ ಕಾತೇಲಿ(ಕುಂಬಾರವಾಡಾ) ವ್ಯಾಪ್ತಿಯಲ್ಲಿ ನ. 23ರಂದು ಸಂತೆ, ಜಾತ್ರೆ ಇತರೆ ಎಲ್ಲ ಜನಸಂದಣಿಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆದೇಶಿದ್ದಾರೆ.