ಗ್ರಾಮೀಣ ಪ್ರದೇಶಗಳಿಗೆ ಬರಲು ವೈದ್ಯರ ಹಿಂದೇಟು: ಡಿಸಿ ಬೇಸರ

| Published : Sep 03 2025, 01:01 AM IST

ಗ್ರಾಮೀಣ ಪ್ರದೇಶಗಳಿಗೆ ಬರಲು ವೈದ್ಯರ ಹಿಂದೇಟು: ಡಿಸಿ ಬೇಸರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ₹೧.೪೦ ಲಕ್ಷ ಸಂಬಳ ಕೊಡುತ್ತೇವೆ ಎಂದರೂ ಕೂಡ ವೈದ್ಯರು ಇಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ.

ಹಂಪಸಾಗರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಗ್ರಾಮೀಣ ಪ್ರದೇಶಗಳಿಗೆ ವೈದ್ಯರು ಬರಲು ಹಿಂದೇಟು ಹಾಕುತ್ತಿದ್ದಾರೆ. ₹೧.೪೦ ಲಕ್ಷ ಸಂಬಳ ಕೊಡುತ್ತೇವೆ ಎಂದರೂ ಕೂಡ ವೈದ್ಯರು ಇಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಹಂಪಸಾಗರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದಾಗ, ಸಾರ್ವಜನಿಕರು ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ದೂರಿದಾಗ ಜಿಲ್ಲಾಧಿಕಾರಿ ಉತ್ತರಿಸಿದರು. ಸ್ಥಳೀಯ ವೈದ್ಯರು ಇದ್ದರೆ ತಿಳಿಸಿ ಅವರನ್ನೇ ನೇಮಕ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ಶೀಘ್ರದಲ್ಲಿಯೇ ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು. ಶಾಲೆಗಳಿಗೆ ಭೇಟಿ:

ಹಂಪಸಾಗರ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲೀಯ ಮೂಲಭೂತ ಸೌಲಭ್ಯಗಳನ್ನು ನೋಡಿ ಜಿಲ್ಲಾಧಿಕಾರಿ ಖುಷಿಪಟ್ಟರು. ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಿ ಉತ್ತಮ ಅಂಕ ಗಳಿಸಲು ಸೂಚಿಸಿದರು. ಶಾಲೆಯ ಪ್ರಾಂಶುಪಾಲ ಯಮನೂರಸ್ವಾಮಿ ಶಾಲಾ ದಾಖಲಾತಿ ಸೌಲಭ್ಯಗಳ ಕುರಿತು ತಿಳಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ಗ್ರಾಮದ ಸರ್ಕಾರಿ ಪಿಎಂಶ್ರೀ ಶಾಲೆಗೆ ಭೇಟಿ ನೀಡಿ ತರಗತಿಗಳನ್ನು ವೀಕ್ಷಿಸಿದರು. ಶಾಲೆಯ ಸುತ್ತುಗೋಡೆ ನಿರ್ಮಾಣಕ್ಕೆ ಗ್ರಾಪಂ ಅನುದಾನ ಕಾಯ್ದಿರಿಸಿ ಎಂದು ಪಿಡಿಒ ಕೊಟ್ರೇಶ್ ಮತ್ತು ಗ್ರಾಪಂ ಸದಸ್ಯರಿಗೆ ತಿಳಿಸಿದರು. ಶಾಲಾ ಜಾಗವನ್ನು ಒತ್ತುವರಿ ಸರಿಪಡಿಸಿ ಹದ್ದುಬಸ್ತು ಮಾಡಿಸಿ ಎಂದು ಕಂದಾಯ ನಿರೀಕ್ಷಕರಿಗೆ ತಿಳಿಸಿದರು. ಇದಕ್ಕೂ ಮುನ್ನ ಗ್ರಾಮದ ನಾಡಕಾರ್ಯಾಲಯದಲ್ಲಿ ನಡೆದ ಕುಂದು-ಕೊರತೆ ಸಭೆಯಲ್ಲಿ ಸಾರ್ವಜನಿಕರ ನಾನಾ ಅರ್ಜಿಗಳನ್ನು ಸ್ವೀಕರಿಸಿ, ಕೆಲ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು. ಕೆಲ ಅರ್ಜಿಗಳಿಗೆ ಕೂಡಲೇ ಕ್ರಮವಹಿಸುವಂತೆ ತಹಶೀಲ್ದಾರ್ ಆರ್.ಕವಿತಾ, ಗ್ರಾಮಲೆಕ್ಕಿಗರಿಗೆ ಸೂಚಿಸಿದರು.ಗ್ರಾಮದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ಮುಗಿದಿದ್ದರೂ ಕೂಡ ಈವರೆಗೂ ಉದ್ಘಾಟನೆಗೊಂಡಿಲ್ಲ. ಕೂಡಲೇ ಉದ್ಘಾಟಿಸಿ ಓದುಗರಿಗೆ ಸಹಾಯ ಮಾಡಿ ಎಂದು ಸಾರ್ವಜನಿಕರು ದೂರಿದಾಗ, ಜಿಲ್ಲಾಧಿಕಾರಿ ಕೂಡಲೇ ಶಾಸಕರಿಗೆ ತಿಳಿಸಿ ಗ್ರಂಥಾಲಯ ಉದ್ಘಾಟಿಸಲು ತಿಳಿಸಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಿದರು. ಹಗರಿಬೊಮ್ಮನಹಳ್ಳಿ ಪಟ್ಟಣದಿಂದ ಹಂಪಸಾಗರ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್‌ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಪಂ ಸದಸ್ಯೆ ಮಮತಾ ತಳವಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ರೈತರು ದನಕರುಗಳಿಗೆ ಇಲ್ಲಿ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರಿದರು. ಕೂಡಲೇ ಚಿಕಿತ್ಸೆ ನೀಡುವಂತೆ ಪಶು ವೈದ್ಯರಿಗೆ ತಿಳಿಸುತ್ತೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಂತರ ಗ್ರಾಮದ ಸದ್ಗುರು ಮಹಾದೇವ ತಾತನ ಮಠಕ್ಕೆ ಭೇಟಿ ನೀಡಿದರು. ಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಆಶೀರ್ವದಿಸಿದರು.ಈ ಸಂದರ್ಭ ತಹಶೀಲ್ದಾರ್ ಆರ್.ಕವಿತಾ, ಶಿಕ್ಷಣ ಸಮನ್ವಯಾಧಿಕಾರಿ ಪ್ರಭಾಕರ, ಅಕ್ಷರ ದಾಸೋಹದ ರಾಜಕುಮಾರ ನಾಯ್ಕ, ಪಿಎಸ್‌ಐ ಗುರುಚಂದ್ರ ಯಾದವ, ಕೃಷಿ ಅಧಿಕಾರಿ ಗೀತಾ ಬೆಸ್ತರ್, ಗ್ರಾಪಂ ಉಪಾಧ್ಯಕ್ಷೆ ರೇಣುಕಮ್ಮ ಭಜಂತ್ರಿ, ಸದಸ್ಯ ಉಂಕಿ ಹರೀಶ್, ಮುಖಂಡರಾದ ಕರಂಗಿ ಸುಭಾಷ್, ಆನಂದ್, ಶಂಕರ್‌ನಾಯ್ಕ, ಮುನ್ನಾ ಇತರರಿದ್ದರು.