ಡೆಂಘೀ ವ್ಯಾಪಕ-ವೈದ್ಯರು ರೋಗಿಗಳಿಗೆ ಲಭ್ಯರಿರಬೇಕು: ಭೀಮಣ್ಣ ನಾಯ್ಕ

| Published : Jun 11 2024, 01:39 AM IST

ಡೆಂಘೀ ವ್ಯಾಪಕ-ವೈದ್ಯರು ರೋಗಿಗಳಿಗೆ ಲಭ್ಯರಿರಬೇಕು: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯಲ್ಲಿ ಆರೋಗ್ಯ ಸುರಕ್ಷಾ ಸಮಿತಿ ಸಭೆ ನಡೆಸಿದ ಶಾಸಕ ಭೀಮಣ್ಣ ನಾಯ್ಕ, ಸಾರ್ವಜನಿಕ ಆಸ್ಪತ್ರೆ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೆಂಘೀ ವ್ಯಾಪಕವಾಗುತ್ತಿದ್ದು, ವೈದ್ಯರು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಲಭ್ಯರಿರಬೇಕು ಎಂದು ಸೂಚಿಸಿದ್ದಾರೆ.

ಶಿರಸಿ: ತಾಲೂಕಿನ ಎಲ್ಲೆಡೆ ಡೆಂಘೀ ವ್ಯಾಪಕವಾಗಿ ಹಬ್ಬುತ್ತಿದೆ. ಪ್ರತಿ ವೈದ್ಯರೂ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ತಮ್ಮ ತಮ್ಮ ಕೇಂದ್ರಗಳಲ್ಲಿ ಉಪಸ್ಥಿತರಿದ್ದು, ರೋಗಿಗಳಿಗೆ ಲಭ್ಯರಿರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ವೈದ್ಯರಿಗೆ ಸೂಚಿಸಿದರು.

ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಆರೋಗ್ಯ ಸುರಕ್ಷಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಡೆಂಘೀ ಪ್ರಮಾಣ ಜಾಸ್ತಿ ಇದೆ. ಹೀಗಾಗಿ, ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದಿದ್ದರೆ ರೋಗಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಬನವಾಸಿ ಆಸ್ಪತ್ರೆಯ ಹೊರತಾಗಿ ತಾಲೂಕಿನ ಬೇರಾವ ಗ್ರಾಮೀಣ ಆಸ್ಪತ್ರೆಯಲ್ಲಿಯೂ ವೈದ್ಯರು ಅಲ್ಲೇ ವಾಸ್ತವ್ಯ ಮಾಡುತ್ತಿಲ್ಲ. ಸರ್ಕಾರ ವೈದ್ಯರ ಮನೆ ಬಾಡಿಗೆ ಹಣ ನೀಡುತ್ತಿದ್ದರೂ ವೈದ್ಯರು ಆಸ್ಪತ್ರೆಯಲ್ಲಿ ಸಿಗದಂತಾಗಿದೆ. ಹೀಗಾಗಿ ಪ್ರತಿ ದಿನ ಆಸ್ಪತ್ರೆಯ ನಿಗದಿತ ಸಮಯವಾದ ಬೆಳಗ್ಗೆ ೯ರಿಂದ ಸಂಜೆ ೪.೩೦ರ ವರೆಗೆ ವೈದ್ಯರು ಆಸ್ಪತ್ರೆಯಲ್ಲಿ ಇರಬೇಕು. ಆ ಬಳಿಕ ತುರ್ತು ಸ್ಥಿತಿ ಬಂದರೆ ಆಸ್ಪತ್ರೆಗೆ ಬಂದು ನಿಭಾಯಿಸಬೇಕು ಎಂದು ಸೂಚಿಸಿದರು.

ವೈದ್ಯರ ನಡುವೆ ಹೊಂದಾಣಿಕೆ ಇರಲಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವೈದ್ಯರ ನಡುವೆ ಹೊಂದಾಣಿಕೆ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ೧೪೯ ಸಿಬ್ಬಂದಿ ಇದ್ದರೂ ಸ್ವಚ್ಛತೆಯ ಕೊರತೆ ಕಾಣಿಸುತ್ತಿದೆ. ವೈದ್ಯರು ಹೊರಗಡೆ ಅಂಗಡಿಗೆ ಔಷಧ ಚೀಟಿ ಬರೆದುಕೊಡುತ್ತಿದ್ದಾರೆ. ಕೆಲವು ವೈದ್ಯರ ಮೇಲೆ ಲಂಚ ಪಡೆಯುವ ಆರೋಪ ಸಹ ಕೇಳಿಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಭೀಮಣ್ಣ, ಬಡವರು ಮತ್ತು ಆರ್ಥಿಕ ದುರ್ಬಲರೇ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅವರಿಂದಲೇ ಹಣ ಕೇಳಿದರೆ ಹೇಗೆ? ಆಸ್ಪತ್ರೆಯಲ್ಲಿ ಒಬ್ಬರನ್ನೊಬ್ಬರು ದೂಷಿಸುವ ಪದ್ಧತಿ ಬೆಳೆದುಬಂದಿದೆ. ವೇತನದ ಹೊರತಾಗಿ ತುರ್ತು ಸ್ಥಿತಿ ನಿಭಾಯಿಸುವ ಸಲುವಾಗಿ ಪ್ರತಿ ವೈದ್ಯರಿಗೆ ಸರ್ಕಾರ ₹೪೫ ಸಾವಿರ ಮಾಸಿಕ ಹೆಚ್ಚು ಹಣ ನೀಡುತ್ತಿದೆ. ಇಷ್ಟಾದರೂ ಆಸ್ಪತ್ರೆಯ ಸ್ಥಿತಿ ಉತ್ತಮವಾಗಿಲ್ಲ ಎಂದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಜಾನನ ಭಟ್, ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯೂ ಡ್ಯೂಟಿ ಡಾಕ್ಟರ್ ಇದ್ದೇ ಇರುತ್ತಾರೆ. ಯಾವುದೇ ವೇಳೆಯಲ್ಲಿಯೂ ರೋಗಿಗಳು ಆಗಮಿಸಿದರೂ ಅವರನ್ನು ನಿರ್ಲಕ್ಷಿಸಿಲ್ಲ. ಆಸ್ಪತ್ರೆಯಲ್ಲಿ ಫಿಸಿಶಿಯನ್ ವೈದ್ಯರಿಲ್ಲದ ಕಾರಣ ವಿಷ ಕುಡಿದ ಪ್ರಕರಣಗಳನ್ನು ಮಾತ್ರ ಅನಿವಾರ್ಯವಾಗಿ ಹೊರಗಡೆ ಶಿಫಾರಸು ಮಾಡಿದ್ದೇವೆ. ಪೊಕ್ಸೋ ಪ್ರಕರಣಗಳನ್ನು ಗ್ರಾಮೀಣ ಅಥವಾ ಸ್ಥಳೀಯ ಆಸ್ಪತ್ರೆಯಲ್ಲಿಯೇ ಪರೀಕ್ಷೆ ನಡೆಸಬಹುದಾಗಿದ್ದರೂ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದಾರೆ. ಈ ಪ್ರಕರಣ ಪರೀಕ್ಷಿಸಲು ಮಹಿಳಾ ವೈದ್ಯರೇ ಅಗತ್ಯವಾಗಿರುವುದು ಸಮಸ್ಯೆಯಾಗಿದೆ ಎಂದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಭೀಮಣ್ಣ, ಆಸ್ಪತ್ರೆಯಲ್ಲಿ ಖಾಲಿ ಇರುವ ಕಣ್ಣಿನ ವೈದ್ಯರು ಮತ್ತು ಫಿಸಿಶಿಯನ್ ವೈದ್ಯರ ಹುದ್ದೆಯನ್ನು ಶೀಘ್ರವಾಗಿ ತುಂಬಿಕೊಳ್ಳಲಾಗುವುದು. ಆಸ್ಪತ್ರೆಗೆ ಅಗತ್ಯವಿರುವ ಇನ್ನೊಂದು ಅಂಬುಲೆನ್ಸ್ ಸಹ ಶೀಘ್ರದಲ್ಲಿ ನೀಡಲಿದ್ದೇವೆ. ಆಸ್ಪತ್ರೆಗೆ ಪ್ರತಿ ದಿನ ೩೦ ಸಾವಿರ ಲೀ. ನೀರು ಅಗತ್ಯವಿದೆ. ಸೂಕ್ತ ಪ್ರಮಾಣದ ಬೋರ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಆರೋಗ್ಯ ಸುರಕ್ಷಾ ಸಮಿತಿ ಪ್ರಮುಖರಾದ ಎನ್.ವಿ. ನಾಯ್ಕ, ಶ್ರೀನಿವಾಸ ನಾಯ್ಕ, ಆರ್.ವೈ. ಖಾನ್, ಗಿರಿಜಾ ರಾಮಣ್ಣ, ಜಗದೀಶ ಗೌಡ ಇತರರಿದ್ದರು.ಕಾಮಗಾರಿ ತ್ವರಿತಗೊಳಿಸಲು ಸೂಚನೆ: ಪಂಡಿತ ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯನ್ನು ಶಾಸಕ ಭೀಮಣ್ಣ ನಾಯ್ಕ ವೀಕ್ಷಿಸಿದರು. ಬಳಿಕ ಎಂಜಿನಿಯರ್‌ಗಳೊಂದಿಗೆ ಮಾತನಾಡಿದ ಭೀಮಣ್ಣ, ಹೊಸ ಕಟ್ಟಡದ ಎದುರು ಇರುವ ಮಣ್ಣು ದಿಬ್ಬಗಳನ್ನು ತೆರವುಗೊಳಿಸಿ ಮುಖ್ಯ ರಸ್ತೆಯಿಂದ ಸುಲಭವಾಗಿ ಆಸ್ಪತ್ರೆಗೆ ತಲುವುಂತೆ ಮಾಡಬೇಕು. ಕಟ್ಟಡ ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ಸೂಚಿಸಿದರು.