ಸಾರಾಂಶ
ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ೨೦೧೮ರಲ್ಲಿ ಜಿಮ್ಸ್ ಕಾಲೇಜಿಗೆ ಪ್ರವೇಶ ಪಡೆದು, ಅಧ್ಯಯನ ಮಾಡಿ ಕೋರ್ಸನ್ನು ಮುಗಿಸಿದ ಉನ್ನತ ಬ್ಯಾಚಿನ ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ ಮಾಡಲಾಯಿತು.
ಗದಗ: ವೈದ್ಯರು ಚಿಕಿತ್ಸೆಯ ಕೌಶಲ್ಯ ವೃದ್ಧಿಸಿಕೊಳ್ಳಬೇಕು ಎಂದು ಪದ್ಮಶ್ರೀ ಪುರಸ್ಕೃತ, ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಹೇಳಿದರು.
ಇಲ್ಲಿಯ ಗದಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ವೈದ್ಯರು ಪ್ರಪಂಚದಲ್ಲಿಯೇ ಶ್ರೇಷ್ಠ ವೈದ್ಯರೆಂದು ಹೆಸರು ಪಡೆದಿದ್ದಾರೆ. ಒಬ್ಬ ಶ್ರೇಷ್ಠ ವೈದ್ಯನಾಗಲು ರೋಗಿಗಳ ಜತೆ ಆಡುಭಾಷೆಯಲ್ಲಿ ಮಾತನಾಡಬೇಕು. ಭಾವನೆಗಳನ್ನು ಹಾಗೂ ತೊಂದರೆಗಳನ್ನು ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಥಟ್ ಅಂತ ಹೇಳಿ ಕ್ವಿಜ್ ಖ್ಯಾತಿಯ ಡಾ. ನಾ. ಸೋಮೇಶ್ವರ ಮಾತನಾಡಿ, ಅವಿನೀರ್ ಎಂಬ ಶೀರ್ಷಿಕೆಗೆ ತಕ್ಕಂತೆ, ನೂತನ ವೈದ್ಯರು ಮುಂದಿನ ಭಾರತದ ಭವಿಷ್ಯ ಹಾಗೂ ಎಲ್ಲ ವೈದ್ಯರು ಉನ್ನತ ವ್ಯಾಸಂಗ ಮಾಡಿ ಉನ್ನತ ವೈದ್ಯರಾಗಿ ಎಂದರು.
ಜಿಮ್ಸ್ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಪಿ. ಬೊಮ್ಮನಹಳ್ಳಿ ಮಾತನಾಡಿದರು.ಈ ವೇಳೆ ೨೦೧೮ರಲ್ಲಿ ಜಿಮ್ಸ್ ಕಾಲೇಜಿಗೆ ಪ್ರವೇಶ ಪಡೆದು, ಅಧ್ಯಯನ ಮಾಡಿ ಕೋರ್ಸನ್ನು ಮುಗಿಸಿದ ಉನ್ನತ ಬ್ಯಾಚಿನ ವಿದ್ಯಾರ್ಥಿಗಳಿಗೆ ಡಾಕ್ಟರ್ ಪದವಿ ಪ್ರದಾನ ಮಾಡಲಾಯಿತು.
ಡಾ. ಈಶ್ವರ್ ಸಿಂಗ್ ಆರ್. ಹಿಪೋಕ್ರೆಟಿಸ್ ಪ್ರತಿಜ್ಞಾವಿಧಿ ಬೋಧಿಸಿದರು. ವೈದ್ಯಕೀಯ ವೃಂದ ಹಾಗೂ ವಿದ್ಯಾರ್ಥಿಗಳ ಪಾಲಕರು ಇದ್ದರು. ಕಾರ್ಯಕ್ರಮವನ್ನು ಡಾ. ಸಮತಾ, ಡಾ. ಪ್ರಮೋದ ಹಾಗೂ ಡಾ. ಶಂಭು ನಡೆಸಿಕೊಟ್ಟರು. ಡಾ. ಮಹಾಂತೇಶ ಪಾಟೀಲ ವಂದಿಸಿದರು.