ವೈದ್ಯರು ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸಿ

| Published : Jul 02 2024, 01:31 AM IST

ಸಾರಾಂಶ

ಜನತೆಯ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದ್ದು, ಅದನ್ನು ಸೇವಾಮನೋಭಾವದಿಂದ ಮಾಡುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಿಸಲು ವೈದ್ಯರು ಶ್ರಮಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಜನತೆಯ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದ್ದು, ಅದನ್ನು ಸೇವಾಮನೋಭಾವದಿಂದ ಮಾಡುವುದರೊಂದಿಗೆ ಆರೋಗ್ಯವಂತ ಸಮಾಜ ನಿರ್ಮಿಸಲು ವೈದ್ಯರು ಶ್ರಮಿಸಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡ ವೈದ್ಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ವೈದ್ಯರನ್ನು ಸತ್ಕರಿಸಿ ಮಾತನಾಡಿದ ಅವರು, ಕ್ಷೇತ್ರದ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡಿ ಜನರ ಆರೋಗ್ಯವನ್ನು ರಕ್ಷಿಸಬೇಕು. ತಾಲೂಕಿನ ಮಲ್ಲಾಪೂರ ಪಿಜಿ, ಕೊಣ್ಣೂರ, ಅಕ್ಕತಂಗೇರಹಾಳ ಹಾಗೂ ಘಟಪ್ರಭಾದಲ್ಲಿ ನೂತನ ನಮ್ಮ ಕ್ಲಿನಿಕ್‌ಗಳು ಶೀಘ್ರದಲ್ಲೆ ಕಾರ್ಯಾರಂಭಗೊಳ್ಳಲಿವೆ. ಜನತೆ ಇವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಕೆಟ್ ಇಂಡಿಯಾ ಪ್ರವೇಟ್ ಲಿ, ಗೋಕಾಕ ಇವರಿಂದ ರೋಗ ನಿರ್ಣಯ ಹಾಗೂ ಜೀವ ರಕ್ಷಕ ಸಲಕರಣೆಗಳನ್ನು ನೀಡಲಾಯಿತು. ರಕ್ತ ಭಂಡಾರ ಸ್ಥಾಪನೆಗೂ ಸಹಕಾರ ನೀಡುವುದಾಗಿ ರಾಕೆಟ್ ಇಂಡಿಯಾ ಪ್ರವೇಟ್‌ ಲಿ, ಕಂಪನಿ ತಿಳಿಸಿದರು.ಇದೇ ಸಂದರ್ಭದಲ್ಲಿ ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ತಾಲೂಕು ವೈದ್ಯಾಧಿಕಾರಿ ಡಾ.ಎಂ.ಎಸ್.ಕೊಪ್ಪದ, ತಜ್ಞ ವೈದ್ಯ ಡಾ.ಶಾಂತ.ಪಿ ಹಾಗೂ ರಾಕೇಟ್ ಇಂಡಿಯಾ ಪ್ರವೇಟ್ ಲಿ, ಕಂಪನಿಯ ರಾಜಶೇಖರ ಅವರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ, ಎಂ.ಎಲ್.ತೋಳಿನವರ, ಮುಖಂಡ ಲಕ್ಷ್ಮಣ ತಪಶಿ ಸೇರಿದಂತೆ ಗೋಕಾಕ ತಾಲೂಕಿನ ಅನೇಕ ವೈದ್ಯರು ಇದ್ದರು.