ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕಾಯಿಲೆಗಳನ್ನು ಗುಣಪಡಿಸಿ ನೋವುಗಳಿಂದ ಮುಕ್ತರನ್ನಾಗಿ ಮಾಡುವ ವೈದ್ಯರನ್ನು ದೇವರು ಮನುಕುಲಕ್ಕೆ ವರದಾನವಾಗಿ ನೀಡಿದ್ದಾನೆ ಎಂದು ಬಿಎಲ್‌ಡಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಆಯೋಜಿಸಿದ್ದ ಹಿರಿಯ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರು ಮಾನವನಿಗೆ ಆರೋಗ್ಯವೆಂಬ ಅಮೂಲ್ಯ ಸಂಪತ್ತನ್ನು ನೀಡಿದ್ದಾನೆ. ಈ ಸಂಪತ್ತನ್ನು ಬಾಧಿಸುವ ರೋಗಗಳನ್ನು ಗುಣಪಡಿಸಲು ವೈದ್ಯರ ರೂಪದಲ್ಲಿ ವರವನ್ನೂ ಕೊಟ್ಟಿದ್ದಾನೆ ಎಂದರು.
ಬಿಎಲ್‌ಡಿಇ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಇಂದು ಹೆಮ್ಮರವಾಗಿ ಬೆಳೆಯಲು ಸಂಸ್ಥೆ ಕಟ್ಟಿ ಬೆಳೆಸಿದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ, ಬಂಥನಾಳ ಶ್ರೀಗಳು, ಶ್ರೀಮತಿ ಬಂಗಾರಮ್ಮ ಸಜ್ಜನ, ಬಿ.ಎಂ.ಪಾಟೀಲ ಹಾಗೂ ಇಂದಿನ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ವಾರ್ಗದರ್ಶನ ಮತ್ತು ಹಿಂದಿನ ಹಾಗೂ ಇಂದಿನ ವೈದ್ಯರ ಸೇವೆ ಪ್ರಮುಖ ಕಾರಣವಾಗಿದೆ. ಇಲ್ಲಿನ ವೈದ್ಯರ ಸಮರ್ಪಣೆ ಭಾವನೆಯಿಂದಾಗಿ ಬಸವನಾಡಿನ ಆರೋಗ್ಯ ಸೇವೆಗಳಿಗಾಗಿ ನೆರೆಯ ಮಹಾರಾಷ್ಟ್ರಕ್ಕೆ ಅಲೆದಾಡುವುದು ತಪ್ಪಿದೆ. ವಿಜಯಪುರ ಈಗ ಆರೋಗ್ಯ ಸೇವೆಗಳ ಹಬ್ ಆಗಿದೆ. ಈ ಬಾರಿ ಎಂಬಿಬಿಎಸ್ ಕೋರ್ಸಿಗೆ 50 ಹೆಚ್ಚುವರಿಯಾಗಿ ಸೀಟುಗಳು ಲಭ್ಯವಾಗಿವೆ. ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಡೀಮ್ಡ್ ವಿವಿ ದೇಶದ ಟಾಪ್ 10 ಸಂಸ್ಥೆಗಳಲ್ಲಿ ಒಂದು ಎಂದು ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ ಮಾತನಾಡಿ, ಬಿಎಲ್‌ಡಿಇ ಸಂಸ್ಥೆಯ ವ್ಯಾಪ್ತಿ ಈಗ ದೇಶಕ್ಕೆ ವಿಸ್ತರಿಸಿದೆ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ, ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಉತ್ತರೋತ್ತರವಾಗಿ ಅಭಿವೃದ್ಧಿಯಾಗುತ್ತಿದೆ ಎಂದರು.
ಹಿರಿಯ ವೈದ್ಯ ಡಾ.ಆರ್.ಸಿ.ಬಿದರಿ, ಡಾ.ತೇಜಶ್ವಿನಿ ವಲ್ಲಭ, ಡಾ.ಎಸ್.ಎಸ್.ದೇವರಮನಿ, ಡಾ.ವಿಜಯಕುಮರ ಕಲ್ಯಾಣಪ್ಪಗೋಳ, ಡಾ.ಶೈಲಜಾ ಬಿದರಿ, ಡಾ.ಎಸ್.ಎನ್.ಬೆಂತೂರ, ಡಾ.ಎಸ್.ಆರ್.ಮುದನೂರ, ಡಾ.ಎಂ.ಎಸ್.ಮೂಲಿಮನಿ, ಡಾ.ಕುಸಾಲ ದಾಸ, ಡಾ.ವಲ್ಲಭ, ಡಾ.ಎಸ್.ಪಿ.ಚೌಕಿಮಠ, ಡಾ.ಅಶೋಕ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಿಎಲ್‌ಡಿಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಪಾಟೀಲ, ಕಾನೂನು ಕಾಲೇಜಿನ ಪ್ರಾಚಾರ್ಯ ರಘುವೀರ ಕುಲಕರ್ಣಿ ಸೇರಿದಂತೆ ನಾನಾ ಕಾಲೇಜುಗಳ ಪ್ರಾಚಾರ್ಯರು, ನಾನಾ ವಿಭಾಗಗಳ ಮುಖ್ಯಸ್ಥರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಡೀಮ್ಡ್ ವಿವಿ ಕುಲಪತಿ ಡಾ.ಅರುಣ ಇನಾಮದಾರ ಸ್ವಾಗತಿಸಿದರು. ಡಾ.ಉದಯಕುಮಾರ ನುಚ್ಚಿ ಪರಿಚಯಿಸಿದರು. ಡಾ.ತನುಜಾ ಪಠನಕರ, ಡಾ.ಲತಾ ಮುಲ್ಲೂರ, ಡಾ.ಚಂದ್ರಿಕಾ ದೂಡಿಹಾಳ, ಡಾ.ಶ್ರೀಲಕ್ಷ್ಮಿ ಬಗಲಿ, ಡಾ.ಅಶ್ವಿನಿ ನುಚ್ಚಿ ನಿರೂಪಿಸಿದರು. ಡಾ.ಗಿರೀಶ ಕುಲ್ಲೊಳ್ಳಿ ವಂದಿಸಿದರು.