ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಾಡಿನ ಜನರಿಗೆ ಮೋಸ ಮಾಡಿದ್ದಲ್ಲದೇ ಹಿಂದೂ ಸಂಸ್ಕೃತಿ ಬಗ್ಗೆ ಅರಿವಿಲ್ಲದ ವ್ಯಕ್ತಿಗಳಿಂದ ನಾಡಹಬ್ಬ ದಸರಾವನ್ನು ಉದ್ಘಾಟಿಸಿ ನಾಡಿಗೆ ದ್ರೋಹ ಮಾಡುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ಆರೋಪಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರವನ್ನು ಗಟ್ಟಿ ಮಾಡಿಕೊಳ್ಳಲು ನಾಡಿನ ಮತ್ತು ದೇಶದ ಸಂಸ್ಕೃತಿಯನ್ನು, ಸಂಪ್ರದಾಯವನ್ನು ಧಿಕ್ಕರಿಸಿ ಒಂದು ಸಮುದಾಯವನ್ನು ಓಲೈಸುವುದಕ್ಕಾಗಿ ನಾಡಿಗೆ ದ್ರೋಹ ಎಸುಗುವುದು ಶೋಭೆಯಲ್ಲ. ಹಿಂದೂ ಸಂಸ್ಕೃತಿ, ಸಂಪ್ರದಾಯ ಮಾಹಿತಿ ಇರುವ ವ್ಯಕ್ತಿಗಳಿಂದ ಉದ್ಘಾಟನೆ ಮಾಡಿಸಿದ್ದರೇ ಶೋಭೆ ತರುತ್ತಿತ್ತು ಎಂದರು. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಟಿತಗೊಂಡಿವೆ. ಈ ಮೋಸದ ಸರ್ಕಾರದಿಂದ ನಾಡಿನ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವರ ಒತ್ತಡದ ಆಡಳಿತಕ್ಕೆ ಅನೇಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಜಾತಿ ಸಮೀಕ್ಷೆ ಬಗ್ಗೆ ನಮ್ಮದ ವಿರೋಧವಿಲ್ಲ. ಆದರೆ, ಈ ಸಮೀಕ್ಷೆಯಲ್ಲಿ ಅನೇಕ ನ್ಯೂನ್ಯತೆಗಳು ಕಂಡುಬರುತ್ತವೆ. ಜಾತಿ ಜಾತಿಗಳಲ್ಲಿ ಮತ್ತು ಧರ್ಮಗಳಲ್ಲಿ ಗೊಂದಲ ಸೃಷ್ಟಿಸಿ ಒಡೆಯುವ ಕುತಂತ್ರ ಮಾಡುತ್ತಿದ್ದಾರೆ. ನಾವು ಹಿಂದುಸ್ಥಾನದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕರು ಹಿಂದೂ ಧರ್ಮವನ್ನು ಒಡೆಯುವ ವ್ಯವಸ್ಥಿತ ಕುತಂತ್ರ ನಡೆಯುತ್ತಿದೆ. ಸ್ವಾಭಿಮಾನದಿಂದ ಹಿಂದೂ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತಿದ್ದಾರೆ. ನಾಡಿನ ಜನರಲ್ಲಿ ಇಂತಹ ಜಾತಿ ಮತ್ತು ಧರ್ಮ ಒಡೆಯುವ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಅಥಣಿ ಮಂಡಲ ಬಿಜೆಪಿ ಅಧ್ಯಕ್ಷ ಗಿರೀಶ ಬುಟಾಳಿ, ಮುಖಂಡರಾದ ಸಿದ್ದಪ್ಪ ಮುದುಕಣ್ಣವರ, ಉಮೇಶ್ ಬಂಟೋಡಕರ, ಮಲ್ಲಪ್ಪ ಹಂಚಿನಾಳ, ಪ್ರಭಾಕರ ಚೌಹಾಣ, ರಮೇಶ್ ಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.