ಸಾರಾಂಶ
- ತನಿಖೆಯಿಂದಾಗಿ ಸತ್ಯ ಹೊರಬರುತ್ತಿದೆ । ನಮ್ಮಿಂದ ಯಾವ ತಪ್ಪು ನಡೆದಿಲ್ಲ ಅಂತ ಗೊತ್ತಾಗ್ತಿದೆ
---ಯಾವಾಗಲೂ ನಾವು ಒಳ್ಳೇದೇ ಮಾಡ್ತೇವೆನಾವು ಯಾವಾಗಲೂ ಒಳ್ಳೆಯದನ್ನೇ ಮಾಡುತ್ತೇವೆ. ಅದು ಬಿಟ್ಟು ಬೇರೆ ಏನೂ ಮಾಡಲ್ಲ.- ಸಿದ್ದರಾಮಯ್ಯ ಮುಖ್ಯಮಂತ್ರಿ---ಯಾರಿಗೂ ನಾವುತೊಂದರೆ ಕೊಟ್ಟಿಲ್ಲಧರ್ಮಸ್ಥಳ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಯಾವತ್ತೂ ಯಾರಿಗೂ ತೊಂದರೆ ನೀಡಿಲ್ಲ. - ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ
--ಕನ್ನಡಪ್ರಭ ವಾರ್ತೆ ಬೆಳ್ತಂಗಡಿ‘ಕೆಲವು ಸಮಯದಿಂದ ಧರ್ಮಸ್ಥಳ ಕ್ಷೇತ್ರದ ಮೇಲೆ ಸತತವಾಗಿ ಆರೋಪಗಳು ಕೇಳಿ ಬಂದು ದ್ವೇಷ ಪ್ರಸಾರ ಹರಡತೊಡಗಿತು. ಅದಕ್ಕೆ ಕಾರಣವೇನು ಎಂಬುದು ನನಗೆ ಇದುವರೆಗೂ ತಿಳಿದಿಲ್ಲ. ಈಗ ಸರ್ಕಾರ ನಡೆಸುತ್ತಿರುವ ಎಸ್‌ಐಟಿ ತನಿಖೆಯಲ್ಲಿ ಸತ್ಯಗಳು ಹೊರಬರುತ್ತಿವೆ. ನಮ್ಮಿಂದ ಯಾವ ತಪ್ಪುಗಳೂ ನಡೆದಿಲ್ಲ ಎಂಬ ಸಂಗತಿ ಹೊರಬರುತ್ತಿದೆ. ಇದಕ್ಕಾಗಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಮತ್ತು ಷಡ್ಯಂತ್ರ ಮಾಡಿದವರಿಗೆ ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿ ಹಾಗೂ ಉಲ್ಲಾಳ್ತಿ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಶುಕ್ರವಾರ ಗ್ರಾಮದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ಭಕ್ತಾದಿಗಳು ಧರ್ಮಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಪೂಜೆಯಲ್ಲಿ ಪಾಲ್ಗೊಂಡಿದ್ದ ಹೆಗ್ಗಡೆಯವರು, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಊರವರ, ಕ್ಷೇತ್ರದ ಭಕ್ತರೆಲ್ಲರ ಪ್ರೀತಿ, ವಿಶ್ವಾಸಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದರಿಂದಾಗಿ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸೇವೆ ಮಾಡಬೇಕೆಂಬ ಚೈತನ್ಯ ಮೂಡುತ್ತಿದೆ ಎಂದು ಹೇಳಿದರು.
ಇದುವರೆಗೂ ಅನೇಕರು ಕ್ಷೇತ್ರಕ್ಕೆ ಆಗಮಿಸಿ ಕ್ಷೇತ್ರದ ಜೊತೆಗೆ ನಾವಿದ್ದೇವೆ ಎಂದು ಹೇಳಿದ್ದಾರೆ. ಊರವರೂ ಕೂಡ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಕ್ಷೇತ್ರದ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.ಇತ್ತೀಚೆಗೆ ಸಿದ್ಧಗಂಗಾ ಮಠದ ಶ್ರೀಗಳ ಕೃತಿಯನ್ನು ಓದುತ್ತಿದ್ದೆ. ಒಂದು ಕಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ಹಾಗೂ ಅನೇಕ ಯೋಜನೆಗಳ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನು ಆಡಿರುವುದನ್ನು ನೋಡಿದೆ. ತುಂಬಾ ಸಂತೋಷವಾಯಿತು. ಕ್ಷೇತ್ರದ ಮೂಲಕ ಇಂತಹ ಸೇವಾ ಕಾರ್ಯ ನೆರವೇರಲು ನಾನು ನಿಮಿತ್ತ ಮಾತ್ರ ಆಗಿದ್ದೇನೆ. ಸ್ವಾಮಿಯ ಅನುಗ್ರಹ, ನಿಮ್ಮೆಲ್ಲರ ಹಾರೈಕೆ ಹಾಗೂ ಕುಟುಂಬಸ್ಥರ ಸಹಕಾರದಿಂದ ಗ್ರಾಮೀಣಾಭಿವೃದ್ಧಿ, ವಿದ್ಯಾಸಂಸ್ಥೆ, ಆಸ್ಪತ್ರೆ ಮುಂತಾದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ಡಾ.ಹೆಗ್ಗಡೆ ತಿಳಿಸಿದರು.ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಕೆ:
ಇದಕ್ಕೂ ಮೊದಲು, ಭಕ್ತರು ಮಂಜುನಾಥನ ಸನ್ನಿಧಿ ಮುಂದೆ ತೆಂಗಿನ ಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು. ನಂತರ, ಮೆರವಣಿಗೆ ಮೂಲಕ ಅಣ್ಣಪ್ಪ ಸ್ವಾಮಿ ಬೆಟ್ಟಕ್ಕೆ ಸಾಗಿ, ಅಲ್ಲಿಯೂ ಪ್ರಾರ್ಥನೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಮಹಿಳಾ ಭಕ್ತಾದಿಗಳು ಸೇರಿದ್ದರು. ನಂತರ, ಮೆರವಣಿಗೆ ಅಮೃತವರ್ಷಿಣಿಗೆ ಬಂತು. ಅಲ್ಲಿ ಸಹಸ್ರ ಲಲಿತಾ ಪಂಚಾಕ್ಷರಿ ನಾಮಪಠಣ ಪಠಿಸಲಾಯಿತು. ಈ ವೇಳೆ, ಮಹಿಳಾ ಭಕ್ತಾದಿಗಳಿಗೆ ಬಾಗಿನ ನೀಡಿ, ವಿಶೇಷವಾಗಿ ಗೌರವಿಸಲಾಯಿತು.ಹಿತರಕ್ಷಣಾ ಸಮಿತಿಯವರು ಕಳೆದ ಮಾ.27ರಂದು ನಡೆಸಿದ ಸಮಾವೇಶದಲ್ಲಿ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ಶಿಕ್ಷೆ ಆಗಬೇಕೆಂದು ಅಣ್ಣಪ್ಪ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕ್ಷೇತ್ರದ ವಿರುದ್ಧ ನಡೆದ ಎಲ್ಲಾ ಅಪಪ್ರಚಾರಗಳು ಒಂದೊಂದಾಗಿ ಹೊರಬರುತ್ತಿದ್ದು, ಎಲ್ಲಾ ಅಪಪ್ರಚಾರಗಳಿಗೂ ಮುಕ್ತಿ ಸಿಗಬೇಕು ಎಂದು ಗ್ರಾಮಸ್ಥರು ಪ್ರಾರ್ಥನೆ ಸಲ್ಲಿಸಿದರು.
--