ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಆಗಿ ಆಸ್ತಿ ನೋಂದಣಿ ನಿಯಮ ವಿರೋಧಿಸಿ ದಸ್ತುಪತ್ರ ಬರಹಗಾರರು ಹಾನಗಲ್ಲ ತಾಲೂಕು ಕಚೇರಿಯ ಬಳಿ ಬುಧವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಹಾನಗಲ್ಲ: ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಆಗಿ ಆಸ್ತಿ ನೋಂದಣಿ ನಿಯಮ ಜಾರಿಗೆ ತರಕೂಡದು ಎಂದು ಪರವಾನಗಿ ಪಡೆದ ದಸ್ತುಪತ್ರ ಬರಹಗಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬುಧವಾರ ತಾಲೂಕು ಕಚೇರಿಯ ಬಳಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಅಲ್ಲದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ಡಿಜಟಲೀಕರಣದ ಹೆಸರಿನಲ್ಲಿ ಕಾವೇರಿ 0.1, ಕಾವೇರಿ 0.2 ತಂತ್ರಾಂಶಗಳನ್ನು ಜಾರಿಗೆ ತಂದಿತ್ತು. ಈಗ ಕಾವೇರಿ 0.3 ಬರುತ್ತಿದೆ. ಫೇಸ್‌ಲೆಸ್ ಹಾಗೂ ಪೇಪರ್‌ಲೆಸ್ ಆಗಿ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆದಿದೆ. ಇದರಿಂದ ದಸ್ತಾವೇಜುಗಾರರಿಗೆ ಯಾವುದೇ ಬರಹದ ಕೆಲಸವೇ ಇಲ್ಲದಂತಾಗುತ್ತದೆ. ಅಲ್ಲದೆ ಇದನ್ನೇ ನಂಬಿಕೊಂಡ ದಸ್ತಾವೇಜುಗಾರರ ಕುಟುಂಬಗಳು ಬೀದಿಗೆ ಬೀಳುವ ಅಪಾಯವೂ ಇದೆ. ರಾಜ್ಯದಲ್ಲಿ ಇಂತಹ ಹತ್ತಾರು ಸಾವಿರ ದಸ್ತಾವೇಜು ಬರಹಗಾರರ ನಿರುದ್ಯೋಗಿಗಳಾಗಲಿದ್ದಾರೆ.ಈ ಸಂಗತಿಯನ್ನು ರಾಜ್ಯದ ಮಂತ್ರಿಗಳ ಗಮನಕ್ಕೆ ತರಲಾಗಿದೆ. ಇದರಿಂದಾಗುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ನಮ್ಮ ರಾಜ್ಯ ಸಂಘ ಮೂರು ಬಾರಿ ಭೇಟಿ ಮಾಡಿ ಈ ಸಂಗತಿಯನ್ನು ಮನವರಿಕೆ ಮಾಡಿದೆ. ಪರೋಕ್ಷವಾಗಿ ದಸ್ತಾವೇಜು ಬರಹಗಾರರನ್ನು ಮೂಲೆಗುಂಪು ಮಾಡುವ ಇಂತಹ ನಿಯಮ ಬೇಡ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲಿಯೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಪತ್ರ ಬರಹಗಾರರ ಅಥವಾ ವಕೀಲರ ದಸ್ತೂರನ್ನು ಕಡ್ಡಾಯಗೊಳಿಸಬೇಕು. ಅಧಿಕೃತ ವ್ಯಕ್ತಿಗಳನ್ನು ತಡಗಟ್ಟುವುದು ಮತ್ತು ಪತ್ರ ಬರಹಗಾರರಿಗೆ ಗುರುತಿನ ಚೀಟಿ ನೋಂದಣಿ ಇಲಾಖೆಯಿಂದ ನೀಡಬೇಕು ಎಂಬ ಬೇಡಿಕೆಯನ್ನು ಪ್ರತಿಭಟನಾಕಾರರು ಕೇಳಿದ್ದಾರೆ. ಪ್ರತಿಭಟನೆಯ ಅಂಗವಾಗಿ ಈ ದಿನ ನೋಂದಣಿ ಕಚೇರಿಯಲ್ಲಿ ಯಾವುದೇ ನೋಂದಣಿಗೆ ಅವಕಾಶವಾಗಲಿಲ್ಲ.ಎಂ.ಎಸ್. ಗಾಜಿಪುರ, ಎಂ.ಎಚ್. ಗುಲಾಮಲಿಶಾ, ಎನ್.ಎಸ್. ಪಾಟೀಲ, ಎನ್.ಐ. ಚಂದಾಪುರ, ಬಿ.ಎನ್. ಕಬ್ಬುರ, ಎ.ಎ. ಅತ್ತಾರ, ರಾಮಜಿ ಬಸವರಾಜ, ಸುರೇಶ ಮುಸರಿ, ರಾಘು ರಾಯಚೂರ, ಕೆ.ಎಸ್. ಕುಲಕರ್ಣಿ ಮೊದಲಾದ ದಸ್ತಾವೇಜು ಬರಹಗಾರರು ಇದ್ದರು.