ಸಾರಾಂಶ
ನರಸಿಂಹರಾಜಪುರದ ನೆನಪುಗಳ ಮೆರವಣಿಗೆ ಕೃತಿ ಬಿಡುಗಡೆ ಸಮಾರಂಭ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರನಮ್ಮ ನೆನಪುಗಳನ್ನು ದಾಖಲೆ ಮಾಡುವುದು ಒಂದು ವಿಶಿಷ್ಟ ಕಲೆಯಾಗಿದೆ. ಮುಂದಿನ ನಮ್ಮ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಕೊಡುಗೆಯಾಗಿ ನೀಡಬೇಕೆಂಬ ಒತ್ತಾಸೆಯೊಂದಿಗೆ ಕೃತಿ ಬಿಡುಗಡೆ ಮಾಡಲಾಗಿದೆ ಎಂದು ವಿದ್ವಾನ್ ವಿ.ಎಸ್.ಕೃಷ್ಣಭಟ್ ತಿಳಿಸಿದರು.
ಪಟ್ಟಣದ ಅಗ್ರಹಾರ ಶ್ರೀ ಉಮಾಮಹೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ನರಸಿಂಹರಾಜಪುರದ ನೆನಪುಗಳ ಮೆರವಣಿಗೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ನಾವು ನಡೆದು ಬಂದ ಜೀವನದ ಹಾದಿಯ ಸಿಂಹಾವಲೋಕನ ಮಾಡಿ ಕೊಳ್ಳಬೇಕು. ನಮ್ಮ ಈ ಅಗ್ರಹಾರ ಸಾಮಾಜಿಕ, ಧಾರ್ಮಿಕ, ಸಂಸ್ಕಾರವುಳ್ಳ ಸುಸಂಸ್ಕೃತವಾದ ಸ್ಥಳವಾಗಿದೆ. ಜೀವನದಲ್ಲಿ ಬದಲಾವಣೆಗಳು ಸಹಜ. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮಾತ್ರ ಬದಲಾಗಬಾರದು ಎಂದರು.ನರಸಿಂಹರಾಜಪುರದ ನೆನಪುಗಳ ಮೆರವಣಿಗೆ ಕೃತಿಯ ಪ್ರಧಾನ ಸಂಪಾದಕ ಶಂಕರ ಅಜ್ಜಂಪುರ ಮಾತನಾಡಿ, ಭೂಮಿ ಮೇಲೆ ನದಿಗಳು, ಬೆಟ್ಟಗುಡ್ಡಗಳು, ಸೂರ್ಯ ಚಂದ್ರರರು ಎಲ್ಲಿಯವರೆಗೂ ಇರುತ್ತವೆಯೋ ಅಲ್ಲಿಯವರೆಗೂ ರಾಮಾಯಣ, ಮಹಾಭಾರತದ ದಂತಹ ಕಥೆಗಳು ಪ್ರಚಲಿತವಾಗಿರುತ್ತವೆ. ನಮ್ಮ ಅಂತ್ಯಕಾಲದಲ್ಲಿ ಉಳಿಯುವುದು ನಮ್ಮ ನೆನಪುಗಳು ಮಾತ್ರ. ಸಾಂಸ್ಕೃತಿಕ ಪ್ರವಾಹ ಎಂದಿಗೂ ನಿಲ್ಲುವುದಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ನೆನಪುಗಳನ್ನು ದಾಖಲೆಯಾಗಿ ಇಡುವ ಮೂಲ ಉದ್ದೇಶದಿಂದ ಈ ಕೃತಿಯನ್ನು ಹೊರತರಲಾಗಿದೆ. ನಾವು ಊರಿನ ನೆನಪುಗಳನ್ನು ಮೆಲುಕು ಹಾಕುವ ಸದುದ್ದೇಶ ದಿಂದ ವ್ಯಾಟ್ಸಪ್ ಗ್ರೂಪ್‌ನ್ನು ಕೊರೊನಾ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಈ ಗ್ರೂಪಿನಲ್ಲಿ ಊರಿನ ಬಾಲ್ಯದ ನೆನಪುಗಳು, ಜೀವನದಲ್ಲಿ ಕಳೆದಂತಹ ಅಮೂಲ್ಯವಾದ ಸಮಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳು ತ್ತಿದ್ದೆವು. ಇಂತಹ ನೆನಪುಗಳನ್ನು ಕೃತಿಯಾಗಿಸಿ ಬಿಡುಗಡೆ ಮಾಡಲು ಈ ವ್ಯಾಟ್ಸಪ್ ಗ್ರೂಪ್ ಪ್ರೇರಣೆಯಾಯಿತು. ಈ ಕೃತಿ ಯಲ್ಲಿ 94 ಲೇಖನಗಳಿದ್ದು, 2 ಲೇಖಕರಿದ್ದಾರೆ. 24 ಮನೆತನಗಳ ಪಟ್ಟಿಯನ್ನು ಮಾಡಲಾಗಿದೆ. ಈ ಊರಿನಿಂದ ಕೆಲ ಕುಟುಂಬ ದವರು ವಲಸೆ ಹೋಗಲು ಆಗಿನ ಕಾಲದ ಭೂ ಸುಧಾರಣೆ ಕಾಯ್ದೆ ಕೂಡ ಕಾರಣವಾಗಿರಬಹುದೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಎಸ್.ಸುರೇಶ್ ಮಾತನಾಡಿ, ಜಾತಿ ಧರ್ಮಗಳನ್ನೂ ಮೀರಿದ ಕೃತಿ ಇದಾಗಿದೆ. ಈ ಕೃತಿ ಇನ್ನೂ ಸಂಪೂರ್ಣವಾಗಿಲ್ಲ. ಇಡೀ ತಾಲ್ಲೂಕನ್ನೇ ಕೇಂದ್ರೀಕರಿಸಿ ಇನ್ನಷ್ಟು ಸಂಚಿಕೆಗಳನ್ನು ಹೊರ ತರಲು ಎಲ್ಲರ ಸಹಕಾರ ಪ್ರೇರಣೆಯಾಗಿದೆ. ಇದು ಯಾರ ಪುಸ್ತಕವೂ ಅಲ್ಲ, ಇದು ನರಸಿಂಹರಾಜಪುರದ ಪುಸ್ತಕವಾಗಿದೆ. ಇದರಲ್ಲಿ ನಮ್ಮೆಲ್ಲರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲಾಗಿದೆ. ಇಂದು ಎಲ್ಲರೂ ಆಂಗ್ಲ ಮಾದ್ಯಮದ ಮೊರೆ ಹೋಗಿ ಕನ್ನಡವನ್ನೇ ಓದಲಾಗದ, ಅರ್ಥವಾಗದಂತಹ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಬ್ರಾಹ್ಮಣ ಸಮುದಾಯ ಕೇವಲ ಜ್ಞಾನಾಧಾರಿತ ಸಮುದಾಯವಾಗಿದೆ. ಆದರೆ ಜ್ಞಾನದ ಜೊತೆ, ಜೊತೆ ಕೌಶಲ್ಯಾಧಾರಿತ ಸಮುದಾಯವಾಗಬೇಕಿದೆ ಎಂದರು.ಹಾಸನವಾಣಿ ದಿನಪತ್ರಿಕೆ ಸಂಪಾದಕಿ ಲೀಲಾವತಿ ಮಾತನಾಡಿ, ಯಡೇಹಳ್ಳಿ ನರಸಿಂಹರಾಜಪುರವಾದದ್ದು ಈಗ ಇತಿಹಾಸ. ಭದ್ರಾ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿ ಅತಂತ್ರ ಸ್ಥಿತಿ, ಸಂಕಷ್ಟ, ಅಭದ್ರತೆ ಅನುಭವಿಸಿದ್ದು ಹಿಂದಿನ ವೈಭವ ಕಾಣೆಯಾಗಿದ್ದರೂ ಈಗಿನ ಮಲೆನಾಡಿನ ಐಸಿರಿ ಜೊತೆಗೆ ಭೂಮಿಯ ಫಲವತ್ತತೆ ವಲಸಿಗರನ್ನು ಕೈಬೀಸಿ ಕರೆದು ಊರು ವೇಗವಾಗಿ ಬೆಳೆದಿದ್ದು ಉಲ್ಲೇಖಾರ್ಹವಾಗಿದೆ. ವಿದ್ಯಾಭ್ಯಾಸ ಹಾಗೂ ಬದುಕಿನ ಭದ್ರತೆಗೆ ಪಟ್ಟಣದ ಸೇರುವುದು ಅನಿವಾರ್ಯ ಊರಿನ ಮಕ್ಕಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹಂಚಿ ಹೋಗಿರುವುದು ಅನಿವಾರ್ಯದ ಬದಲಾವಣೆಯಾಗಿದೆ ಎಂದರು.ವೇ.ಬ್ರ.ಶ್ರೀ ವಿ.ಎಸ್.ಕೃಷ್ಣಭಟ್ ನರಸಿಂಹರಾಜಪುರದ ನೆನಪುಗಳ ಮೆರವಣಿಗೆ ಕೃತಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೊನೋಡಿಗಣೇಶ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ವೇ.ಬ್ರ.ಶ್ರೀ ವಿ.ಎಸ್.ಕೃಷ್ಣಭಟ್, ಲೀಲಾವತಿ ಹಾಗೂ ಶಂಕರ ಅಜ್ಜಂಪುರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಎಚ್.ಎನ್.ಶಿವಶಂಕರ್, ಲೇಖಕಿ ಭಾಗ್ಯನಂಜುಂಡಸ್ವಾಮಿ ಇದ್ದರು.
--ಬಾಕ್ಸ್ಸ್--ಪ್ರಯತ್ನಗಳಿಂದ ಹೊರ ಬರುವ ಕಸುಬುದಾರಿಕೆಯೇ ಲೇಖನ
ನಾವೆಲ್ಲೇ ಇದ್ದರೂ ಮೂಲ ನರಸಿಂಹ ರಾಜಪುರದವರು. ನಮ್ಮೂರಿನ ನೆನಪಿನ ಬುತ್ತಿಯನ್ನು ಉಣಬಡಿಸುವ ಉದ್ದೇಶದಿಂದ ವ್ಯಾಟ್ಸಪ್ ಗ್ರೂಪ್ ರಚಿಸಿ 4 ವರ್ಷ ಸಂದಿದೆ ಕೃತಿಯ ಸಹ ಸಂಪಾದಕ ಎಸ್.ಎನ್.ಕುಮಾರಸ್ವಾಮಿ ಹೇಳಿದರು.130 ಜನ ಸದಸ್ಯರನ್ನು ಹೊಂದಿದ್ದೇವೆ. ಎಲ್ಲೆಲ್ಲೋ ವಾಸವಾಗಿರುವ ನಾವುಗಳು ನಮ್ಮೂರಿನ ಬಗ್ಗೆ ಕೃತಿಯ ಮೂಲಕ ವರ್ಣನೆ ಮಾಡಿ, ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡಬೇಕೆಂದು ಕೃತಿ ಬಿಡುಗಡೆಗೊಳಿಸಲಾಗಿದೆ. ಇದೊಂದು ಅಪರೂಪದ ಕೃತಿ. ಪ್ರಯತ್ನಗಳಿಂದ ಹೊರ ಬರುವ ಕಸುಬುದಾರಿಕೆಯೇ ಲೇಖನ, ಬರವಣಿಗೆಯಾಗಿದೆ. ಬರಹ ವನ್ನು ಬಹಳ ಬೇಗ ಸಮಾಜ ಗುರ್ತಿಸುತ್ತದೆ. ಈ ಕೃತಿಯಲ್ಲಿ ನಮ್ಮೂರಿನ ಸಾಧಕರ, ಹಿರಿಯರ, ದೇಗುಲಗಳ ಪರಿಚಯ ಮಾಡಿ ಕೊಡಲಾಗಿದೆ ಎಂದರು.