ದೊಡ್ಡಬಳ್ಳಾಪುರ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

| Published : Nov 07 2023, 01:31 AM IST

ದೊಡ್ಡಬಳ್ಳಾಪುರ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ದೊಡ್ಡಬಳ್ಳಾಪುರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಂಜೆ 5 ಗಂಟೆ ಬಳಿಕ ಆರಂಭವಾದ ಮಳೆ ಸತತವಾಗಿ 4 ಗಂಟೆಗೂ ಹೆಚ್ಚುಕಾಲ ಸುರಿದ ಪರಿಣಾಮ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು.

ದೊಡ್ಡಬಳ್ಳಾಪುರ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ದೊಡ್ಡಬಳ್ಳಾಪುರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸಂಜೆ 5 ಗಂಟೆ ಬಳಿಕ ಆರಂಭವಾದ ಮಳೆ ಸತತವಾಗಿ 4 ಗಂಟೆಗೂ ಹೆಚ್ಚುಕಾಲ ಸುರಿದ ಪರಿಣಾಮ ಬಹುತೇಕ ರಸ್ತೆಗಳು ಜಲಾವೃತವಾಗಿದ್ದವು.

ಸಂಜೆ ಬಳಿಕ ರಾತ್ರಿ 9 ಗಂಟೆವರೆಗೂ ದೊಡ್ಡಬಳ್ಳಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಸುಮಾರು 4 ಗಂಟೆ ಕಾಲ ಸುರಿದ ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ನೀರು ಹರಿದು ಸಂಚಾರ ಬಾಧಿತವಾಗಿತ್ತು. ಕಳೆದ ಕೆಲ ವಾರಗಳಿಂದ ಮಳೆ ಸುರಿಯದೆ ವ್ಯಾಪಕ ಬರಗಾಲದ ಮುನ್ಸೂಚನೆ ಇದ್ದ ವೇಳೆಯೇ ಸತತ 2 ದಿನಗಳಿಂದ ಮಳೆ ಸುರಿದು ಜನರಲ್ಲಿ ಹರ್ಷ ಮೂಡಿಸಿದೆ.

ನಗರ ಭಾಗದಲ್ಲಿ ಬಿರುಮಳೆಯ ಪರಿಣಾಮ ಚರಂಡಿಗಳು ಉಕ್ಕಿ ರಸ್ತೆಗಳಲ್ಲಿ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹತ್ತಾರು ದಿನಗಳಿಂದ ಸ್ವಚ್ಛಗೊಳಿಸದೇ ಇದ್ದ ಚರಂಡಿಗಳಲ್ಲೂ ಮಳೆ ನೀರು ರಭಸವಾಗಿ ಹರಿದ ಪರಿಣಾಮ ಚರಂಡಿಗಳು ಸ್ವಚ್ಛಗೊಂಡಿವೆ. ಆದರೆ ಕೊಚ್ಚೆ ನೀರು ರಸ್ತೆಗಳಲ್ಲಿ ಹರಿದು ರಸ್ತೆಗಳೇ ಚರಂಡಿಗಳಾಗಿ ಪರಿವರ್ತನೆಯಾದದ್ದು ವಿಪರ್ಯಾಸ. ನಗರಸಭೆ ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಇದು ಸಾಕ್ಷಿಯಾಗಿತ್ತು.

ಜನಜೀವನ ಅಸ್ತವ್ಯಸ್ತ:

ಸಂಜೆ 5 ಗಂಟೆ ಬಳಿಕ ಬಿರುಮಳೆಯಾಗಿದ್ದು, ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನಸವಾರರು ಪರಿತಪಿಸುವಂತಾಯಿತು. ಶಾಲಾ-ಕಾಲೇಜು, ಕೈಗಾರಿಕಾ ಪ್ರದೇಶ ಬಿಡುವ ಸಮಯಕ್ಕೆ ಮಳೆ ಹೆಚ್ಚಿದ್ದರಿಂದ ಬಸ್‌ ನಿಲ್ದಾಣ, ತಂಗುದಾಣಗಳಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರು ಆಶ್ರಯ ಪಡೆದರು. ಕೆಲವೆಡೆ ವಿದ್ಯುತ್‌ ವ್ಯತ್ಯಯ ಆಗಿತ್ತು. ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಚಾರಕ್ಕೆ ಜನ ಪರದಾಡುವಂತಾಗಿತ್ತು.

ನಿರಂತರ 4 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು ಮತ್ತೂ ತುಂತುರು ಮಳೆ ಸುರಿಯುತ್ತಲೇ ಇದ್ದದ್ದರಿಂದ ದೂರದೂರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು, ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಿತ್ತು. ನಗರದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಸಮಸ್ಯೆ ಉಂಟಾಗಿತ್ತು.

ರಾತ್ರಿ 9 ಗಂಟೆಯಾದರೂ ತುಂತುರು ಮಳೆ ಮುಂದುವರೆದೇ ಇತ್ತು. ಭಾರೀ ಮಳೆಯಿಂದ ರಸ್ತೆಗಳಲ್ಲಿ ಚರಂಡಿ ನೀರು ಹರಿದು, ಜನ, ವಾಹನ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಿತ್ತು. ಈಗಲಾದರೂ ನಗರಸಭೆ ಎಚ್ಚೆತ್ತುಕೊಂಡು ಚರಂಡಿಗಳು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿದೆ.

ದೊಡ್ಡಬಳ್ಳಾಪುರ ಸುತ್ತಮುತ್ತಲ ತೂಬಗೆರೆ, ದೊಡ್ಡಬೆಳವಂಗಲ, ಕನಸವಾಡಿ, ಸಾಸಲು, ನಗರ ಹೊರವಲಯದ ರಘುನಾಥಪುರ, ನಾಗದೇನಹಳ್ಳಿ, ಕೊಡಿಗೇಹಳ್ಳಿ, ಕಂಟನಕುಂಟೆ ಮೊದಲಾದೆಡೆ ವ್ಯಾಪಕ ಮಳೆಯಾಗಿದೆ.

6ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ಭಾರಿ ಮಳೆ ಪರಿಣಾಮ ರಸ್ತೆಗಳಲ್ಲಿ ಚರಂಡಿ ನೀರು ಹರಿಯುತ್ತಿರುವುದು.