ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಗರಸಭೆ 2025-26ನೇ ಸಾಲಿಗೆ ₹1.01 ಕೋಟಿ ಉಳಿತಾಯ ಬಜೆಟ್ ಅನ್ನು ಮಂಡಿಸುತ್ತಿರುವುದಾಗಿ ನಗರಸಭೆ ಅಧ್ಯಕ್ಷೆ ಕೆ.ಸುಮಿತ್ರ ತಿಳಿಸಿದರು.ಇಲ್ಲಿನ ನಗರಸಭೆ ಆಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಅವರು ಆಯವ್ಯಯ ಪತ್ರವನ್ನು ಮಂಡಿಸಿದರು.
ಪ್ರಸಕ್ತ ಸಾಲಿನಲ್ಲಿ ಎಲ್ಲ ಮೂಲಗಳಿಂದ ಒಟ್ಟು ಅಂದಾಜು ₹75.70 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ವಿವಿಧ ಯೋಜನೆಗಳಿಗೆ ₹74.69 ಕೋಟಿ ಖರ್ಚು ಅಂದಾಜಿಸಲಾಗಿದೆ. ಹಾಗಾಗಿ 1 ಕೋಟಿ 1 ಲಕ್ಷದ 46 ಸಾವಿರ ರುಪಾಯಿಗಳ ಉಳಿತಾಯ ಬಜೆಟ್ ಇದಾಗಿದೆ ಎಂದು ವಿವರಿಸಿದರು.ಆಯವ್ಯಯ ತಯಾರಿಕೆಗಾಗಿ ಸಾರ್ವಜನಿಕ ಸಮಾಲೋಚನಾ ಸಭೆಗಳಲ್ಲಿ ನೀಡಿರುವ ಸಲಹೆಗಳನ್ನು ನಗರಸಭೆಯ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಹಾಗೂ ಹಂತ ಹಂತವಾಗಿ ಆಯವ್ಯಯದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗಿದೆ. ನಗರದ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಪೂರಕವಾದ ಜನಪರ ಮುಂಗಡ ಪತ್ರವನ್ನು ಮಂಡಿಸಲಾಗುತ್ತಿದೆ. ಸಮಗ್ರ ಅಭಿವೃದ್ಧಿ, ಜ್ವಲಂತ ಸಮಸ್ಯೆಗಳಿಗೆ ಸ್ಪಂದನೆ ನಾಗರಿಕರ ಆಶೋತ್ತರಗಳ ಈಡೇರಿಕೆ ಪ್ರಧಾನ ಆದ್ಯತೆಯಾಗಿದೆ ಎಂದರು.
9 ವಿವಿಧ ಯೋಜನೆಗಳಡಿ ಅಭಿವೃದ್ದಿ:ಪ್ರಸಕ್ತ ಆಯವ್ಯಯದಲ್ಲಿ ಪ್ಲಾಸ್ಟಿಕ್ ಮುಕ್ತ ಹಾಗೂ ನಿರ್ಮಲ ದೊಡ್ಡಬಳ್ಳಾಪುರ ನಿರ್ಮಾಣ, ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕ ವ್ಯವಸ್ಥೆ, ಅಭಿವೃದ್ದಿ ಕಾಮಗಾರಿ, ವಿದ್ಯುತ್ ದೀಪ ನಿರ್ವಹಣೆ, ನಾಡ ಹಬ್ಬ, ಸ್ಥಳೀಯ ಹಬ್ಬಗಳ ಆಚರಣೆ, ಪರಿಶಿಷ್ಟ ಜಾತಿ-ಪಂಗಡ-ಇತರೆ ವರ್ಗಗಳ ಕಲ್ಯಾಣ, ಸ್ಮಶಾನ ಅಭಿವೃದ್ದಿ, ವಿಶೇಷ ಕಾರ್ಯಕ್ರಮಗಳು ಹಾಗೂ ನಗರ ರಾತ್ರಿ ವಸತಿರಹಿತ ನಾಗರಿಕರ ಪುನರ್ವಸತಿ ಯೋಜನೆ ಸೇರಿದಂತೆ 9 ಯೋಜನೆಗಳಡಿ ಅಭಿವೃದ್ದಿ ಕಾಮಗಾರಿಗಳನ್ನು ಯೋಜಿಸಲಾಗಿದೆ.
ಹೊಸ ಯೋಜನೆಗಳು:ನಗರದ 10 ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಿನಿ ಬಸ್ ತಂಗುದಾಣಗಳ ನಿರ್ಮಾಣ, ರಸ್ತೆಗಳ ಅಗಲೀಕರಣ ಯೋಜನಾ ವರದಿ ತಯಾರಿಸಿ ಹಂತ ಹಂತವಾಗಿ ಯೋಜನೆ ಕೈಗೊಳ್ಳಲು ₹1.5 ಕೋಟಿ, ನಾಗರಕೆರೆಯಲ್ಲಿ ಹಾದುಹೋಗಿರುವ ಒಳಚರಂಡಿ ಪೈಪ್‌ಲೈನ್ ಡಿಕ್ರಾಸ್ ರಸ್ತೆಗೆ ಸ್ಥಳಾಂತರ, ನಗರದ ವೃತ್ತಗಳ ಅಭಿವೃದ್ದಿ ಮತ್ತು ಸೌಂದರ್ಯೀಕರಣ ಸೇರಿದಂತೆ ವಿವಿಧ ಹೊಸ ಯೋಜನೆಗಳನ್ನು ಪ್ರಕಟಿಸಲಾಗಿದೆ.
ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ:ಅಧ್ಯಕ್ಷೆ ಸುಮಿತ್ರ ಅವರು ಮಂಡಿಸಿದ ಬಜೆಟ್ ಅನ್ನು ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸ್ವಾಗತಿಸಿ, ಇದೊಂದು ದೂರದೃಷ್ಟಿಯ ಆಯವ್ಯಯವಾಗಿದ್ದು, ಸರ್ವಾಂಗೀಣ ಪ್ರಗತಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದರೆ, ಕಾಂಗ್ರೆಸ್ ಸದಸ್ಯರು ಇದು ಅಂಕಿ-ಸಂಖ್ಯೆಗಳ ತೋರ್ಪಡಿಕೆಯಷ್ಟೇ ಆಗಿದ್ದು, ವಾಸ್ತವದಿಂದ ದೂರ ಉಳಿದಿದೆ. ದೂರಗಾಮಿ ಯೋಜನೆಗಳ ಕೊರತೆ ಇದೆ ಎಂದು ಪ್ರತಿಕ್ರಿಯಿಸಿದೆ.
ಸಭೆಯಲ್ಲಿ ಪೌರಾಯುಕ್ತ ಕಾರ್ತೀಕೇಶ್ವರ್, ಉಪಾಧ್ಯಕ್ಷ ಎನ್.ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ವೇದಿಕೆಯಲ್ಲಿದ್ದರು.ಫೋಟೋ-
14ಕೆಡಿಬಿಪಿ6- ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡನೆ ನಡೆಯಿತು.--
14ಕೆಡಿಬಿಪಿ7- ದೊಡ್ಡಬಳ್ಳಾಪುರ ನಗರಸಭೆ ಬಜೆಟ್ ಮಂಡನೆಗೂ ಮುನ್ನ ನಗರಸಭೆ ಆವರಣದಲ್ಲಿ ಅಧ್ಯಕ್ಷೆ ಸುಮಿತ್ರ ಆಯವ್ಯಯ ಪ್ರತಿಯನ್ನು ಪ್ರದರ್ಶಿಸಿದರು.