ಪ್ರಾಣ ಪಣಕ್ಕಿಟ್ಟು 12 ಜನರನ್ನು ರಕ್ಷಿಸಿದ ದೊಡ್ಡಬಳ್ಳಾಪುರದ ವಿದ್ಯಾರ್ಥಿ

| Published : Oct 31 2025, 01:30 AM IST

ಪ್ರಾಣ ಪಣಕ್ಕಿಟ್ಟು 12 ಜನರನ್ನು ರಕ್ಷಿಸಿದ ದೊಡ್ಡಬಳ್ಳಾಪುರದ ವಿದ್ಯಾರ್ಥಿ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಬೆಂಕಿ ಹೊತ್ತಿಕೊಂಡಿದ್ದ ಬಸ್‌ನಲ್ಲಿ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ನರಳಾಡುತ್ತಿದ್ದವರಿಗೆ ಆಪದ್ಬಾಂಧನವಾಗಿ ಬಂದ ಆ ವ್ಯಕ್ತಿ ತನ್ನ ಸ್ನೇಹಿತನ ಜೊತೆಗೂಡಿ ಬರೋಬ್ಬರಿ 12 ಜನರ ಪ್ರಾಣ ಉಳಿಸಿದ ಎಂದರೆ ನಂಬಲೇ ಬೇಕು. ಕಳೆದ ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಕರ್ನೂಲಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ ಬೆಂಕಿ ಅನಾಹುತಕ್ಕೀಡಾದ ಘಟನೆಯಲ್ಲಿ ಈತ ಮೆರೆದ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಆಂಧ್ರಪ್ರದೇಶ ಸರ್ಕಾರ ಅಭಿನಂದಿಸಿದೆ.

ದೊಡ್ಡಬಳ್ಳಾಪುರ: ಬೆಂಕಿ ಹೊತ್ತಿಕೊಂಡಿದ್ದ ಬಸ್‌ನಲ್ಲಿ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ನರಳಾಡುತ್ತಿದ್ದವರಿಗೆ ಆಪದ್ಬಾಂಧನವಾಗಿ ಬಂದ ಆ ವ್ಯಕ್ತಿ ತನ್ನ ಸ್ನೇಹಿತನ ಜೊತೆಗೂಡಿ ಬರೋಬ್ಬರಿ 12 ಜನರ ಪ್ರಾಣ ಉಳಿಸಿದ ಎಂದರೆ ನಂಬಲೇ ಬೇಕು. ಕಳೆದ ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಕರ್ನೂಲಿನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ ಬೆಂಕಿ ಅನಾಹುತಕ್ಕೀಡಾದ ಘಟನೆಯಲ್ಲಿ ಈತ ಮೆರೆದ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಆಂಧ್ರಪ್ರದೇಶ ಸರ್ಕಾರ ಅಭಿನಂದಿಸಿದೆ.

ಈತನ ಹೆಸರು ಹರೀಶ್‌ಕುಮಾರ್‌ ರಾಜು. ಮೂಲತಃ ಧರ್ಮಾವರಂ ಜಿಲ್ಲೆಯ ಯುವಕ. ಸದ್ಯ ಬೆಂಗಳೂರಿನಲ್ಲಿ ಹೊಸ ಕೆಲಸಕ್ಕೆ ಸೇರಿದ್ದ. ಈತ ಎಂಜಿನಿಯರಿಂಗ್‌ ಪದವಿ ಪಡೆದದ್ದು ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ. 2017ರಲ್ಲಿ ಮೆಕಾನಿಕಲ್‌ ಎಂಜಿಯರಿಂಗ್‌ ಪದವಿಗೆ ದಾಖಲಾಗಿದ್ದ ಹರೀಶ್‌, ಕಾಲೇಜಿನ ಪ್ರಾಧ್ಯಾಪಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯೂ ಆಗಿದ್ದ. ಪದವಿ ಪಡೆದ ಬಳಿಕ ಹೈದರಾಬಾದ್‌ನಲ್ಲಿ ಕೆಲ ಕಾಲ ಕೆಲಸ ಮಾಡಿ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಂದರ್ಶನಕ್ಕೆ ಹಾಜರಾಗಿ, ಆಯ್ಕೆಯಾಗಿದ್ದರು.

ಬೆಂಕಿ ಕೆನ್ನಾಲಗೆಯ ನಡುವೆ ಭಯಾನಕ ಹೋರಾಟ..

ಕನ್ನಡಪ್ರಭದೊಂದಿಗೆ ಮಾತನಾಡಿದ ಹರೀಶ್‌ಕುಮಾರ್‌ ರಾಜು, ಬೆಂಕಿ ಕೆನ್ನಾಲಗೆಯ ನಡುವೆ ಆ ನಡುರಾತ್ರಿ ತಾನು ಮತ್ತು ತನ್ನ ಸ್ನೇಹಿತ ನಡೆಸಿದ ಹೋರಾಟದ ಭಯಾನಕ ಚಿತ್ರಣವನ್ನು ತೆರೆದಿಟ್ಟರು. ತನ್ನ ಕಾರಿನಲ್ಲಿ ಬೆಂಗಳೂರಿನತ್ತ ಬರುತ್ತಿದ್ದ ವೇಳೆ, ದೂರದಿಂದಲೇ ದಟ್ಟ ಹೊಗೆ ಕಣ್ಣಿಗೆ ಬಿತ್ತು. ಹತ್ತಿರ ಬಂದು ನೋಡಿದರೆ, ರಸ್ತೆ ಮಧ್ಯದಲ್ಲಿ ಬಸ್ಸಿಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ಬಸ್‌ನ ಮುಂಭಾಗದಲ್ಲಿ ಬೆಂಕಿ ತೀವ್ರವಾಗಿತ್ತು. ಹಿಂಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ನಾವು ತಡ ಮಾಡಲಿಲ್ಲ, ಕಾರಿನಲ್ಲಿದ್ದ ಸ್ಟೆಪ್ಲಿ ಬದಲಿಸುವ ರಾಡ್‌ ಮತ್ತು ಕಬ್ಬಿಣದ ಸ್ಟಾಂಡ್‌ ಅನ್ನು ತೆಗೆದುಕೊಂಡು ಹೋಗಿ ಬಸ್‌ನ ಗಾಜುಗಳನ್ನು ಒಡೆದು ಒಡೆದು ಪುಡಿ ಮಾಡಿದೆ. ಅರೆ ಬರೆ ಒಡೆದ ಗಾಜುಗಳ ಮಧ್ಯದಲ್ಲಿ ನುಸುಳುತ್ತಿದ್ದ ಪ್ರಯಾಣಿಕರನ್ನು ಎಳೆದುಕೊಂಡು ಹೊರಬರಲು ಅನುವು ಮಾಡಿಕೊಟ್ಟೆವು. ಕೆಲವರು ಸುಟ್ಟಗಾಯಗಳಿಂದ ನರಳುತ್ತಿದ್ದರು. ಮತ್ತೆ ಕೆಲವರು, ನಾನು ಒಡೆದ ಗಾಜುಗಳ ನಡುವೆ ನುಸುಳಿ ಬರುವ ವೇಳೆ ತರಚಿ ಗಾಯಗೊಂಡಿದ್ದರು ಎಂದು ಆ ಸಂದರ್ಭದ ಭಯಾನಕ ಕ್ಷಣಗಳನ್ನು ವಿವರಿಸಿದರು.

ಈ ವೇಳೆ ನವೀನ್‌ ಎಂಬ ಯುವಕ ಕೂಡ ತಮ್ಮೊಂದಿಗಿದ್ದರು. ಈ ಎಲ್ಲದರ ನಡುವೆ ಮಹಿಳೆಯೊಬ್ಬರು ತನ್ನ ಮಗುವನ್ನು ತಬ್ಬಿಕೊಂಡು ಸುಡುಬೆಂಕಿಯ ನಡುವೆ ನರಳಿ, ಸುಟ್ಟುಕರಕಲಾದ ಧಾರುಣ ದೃಶ್ಯವನ್ನು ನೋಡಿಯೂ ಅವರನ್ನು ರಕ್ಷಿಸಲಾಗದ ಅಸಹಾಯಕತೆ ನನ್ನದಾಗಿತ್ತು ಎಂದು ಭಾವುಕರಾದರು.

ಆಂಧ್ರ ಸರ್ಕಾರದಿಂದ ಅಭಿನಂದನೆ:

ಹರೀಶ್‌ ಅವರ ಮಾನವೀಯ ಅಂತಃಕರಣವನ್ನು ಗುರುತಿಸಿರುವ ಆಂಧ್ರಪ್ರದೇಶ ಸರ್ಕಾರ ಅವರನ್ನು ಅಭಿನಂದಿಸಿದೆ. ಅಲ್ಲಿನ ಆರೋಗ್ಯ ಸಚಿವ ಸತ್ಯಕುಮಾರ್‌, ಹರೀಶ್‌ ಮತ್ತು ನವೀನ್‌ ಅವರ ಮನೆಗೆ ಆಗಮಿಸಿ ಗೌರವಿಸಿದ್ದಾರೆ. ಆಂಧ್ರ ಪ್ರದೇಶದ ಹಲವು ಸಂಘಟನೆಗಳ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.

ಆರ್‌ಎಲ್‌ಜೆಐಟಿಯಲ್ಲಿ ಅಭಿನಂದನೆ:

ಇಂತಹ ಮಾನವೀಯ ಕಾರ್ಯದ ಮೂಲಕ ಗುರುತಿಸಿಕೊಂಡ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಹರೀಶ್‌ಕುಮಾರ್‌ ರಾಜು ಅವರನ್ನು ಆರ್‌ಎಲ್‌ಜೆಐಟಿಯಲ್ಲಿ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ, ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ಡೀನ್‌ ಡಾ.ಶ್ರೀನಿವಾಸರೆಡ್ಡಿ, ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ.ಕೆ.ಸುನಿಲ್‌ಕುಮಾರ್‌, ಮಾನವ ಸಂಪನ್ಮೂಲ ನಿರ್ದೇಶಕ ಬಾಬುರೆಡ್ಡಿ, ಎಇಇ ರಮೇಶ್‌ಕುಮಾರ್‌ ಮತ್ತಿತರರು ಹರೀಶ್‌ ಅವರನ್ನು ಸನ್ಮಾನಿಸಿದರು. ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದಲೂ ಅಭಿನಂದನೆ ಸಲ್ಲಿಸಲಾಯಿತು. ಅಧ್ಯಕ್ಷ ಪ್ರೊ.ರವಿಕಿರಣ್, ಖಜಾಂಚಿ ಕೆ.ಸಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ-

30ಕೆಡಿಬಿಪಿ3- ಹರೀಶ್‌ಕುಮಾರ್‌ ರಾಜು.

--

30ಕೆಡಿಬಿಪಿ4- ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹರೀಶ್‌ಕುಮಾರ್‌ ರಾಜು ಅವರನ್ನು ಸನ್ಮಾನಿಸಲಾಯಿತು.