ಸಾರಾಂಶ
ಬಿಜೆಪಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 3ನೇ ಬಾರಿಗೆ ಗೆದ್ದಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ. ಈ ಕುರಿತು ಕೊಪ್ಪಳ ಜಿಲ್ಲೆಯ ಹಲವೆಡೆಗಳಿಂದ ಬಿಜೆಪಿ ಕಾರ್ಯಕರ್ತರ ಹರ್ಷ ವ್ಯಕ್ತವಾಗಿದೆ.
ಕುಷ್ಟಗಿ: ಬಿಜೆಪಿಯಿಂದ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 3ನೇ ಬಾರಿಗೆ ಗೆದ್ದಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾಗೂ ದೊಡ್ಡನಗೌಡ ಪಾಟೀಲ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.ದೊಡ್ಡನಗೌಡ ಆಯ್ಕೆಯಿಂದ ಬಿಜೆಪಿಗೆ ಮತ್ತಷ್ಟು ಬಲ: ರಾಜ್ಯ ವಿಧಾನಸಭೆಯ ಮುಖ್ಯ ಸಚೇತಕರಾಗಿ ಆಯ್ಕೆಯಾದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಆಯ್ಕೆ ಬಿಜೆಪಿಗೆ ಮತ್ತಷ್ಟು ಬಲತುಂಬಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಕುನಕೂರಿನಲ್ಲಿ ಹೇಳಿದ್ದಾರೆ.
ಶಾಸಕ ದೊಡ್ಡನಗೌಡ ಅವರು ರಾಜ್ಯ ವಿಧಾನಸಭೆಯ ಸಚೇತಕರಾಗಿ ಆಯ್ಕೆಯಾದ ಹಿನ್ನೆಲೆ ಹರ್ಷ ವ್ಯಕ್ತಪಡಿಸಿದ ಅವರು, ರಾಜ್ಯ ಬಿಜೆಪಿ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಮತ್ತಷ್ಟು ದಿಟ್ಟ ಹೆಜ್ಜೆ ಇಡುತ್ತಿದೆ. ಬಿಜೆಪಿ ಸಂಘಟನೆ, ಜನಪರ ನಿಲುವು, ರಾಜ್ಯದ ಹಿತಕ್ಕಾಗಿ ಪಕ್ಷದಲ್ಲಿ ಕ್ರಿಯಾಶೀಲ ವ್ಯಕ್ತಿಗಳಿಗೆ ಮತ್ತಷ್ಟು ಜವಾಬ್ದಾರಿ ನೀಡಿದೆ. ಶಾಸಕ ದೊಡ್ಡನಗೌಡ ಪಾಟೀಲ್ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಹಲವಾರು ಜನಪರ ಕಾರ್ಯ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಪೂರ್ಣಾವಧಿ ಮೀಸಲು ಇಟ್ಟಿದ್ದ ವ್ಯಕ್ತಿ ಅವರು. ಅಂತಹ ವ್ಯಕ್ತಿಯನ್ನು ವಿಧಾನಸಭೆ ಸಚೇತಕರಾಗಿ ಆಯ್ಕೆ ಮಾಡಿರುವುದು ಅರ್ಹ ವ್ಯಕ್ತಿಗೆ ಸಂದ ಸ್ಥಾನಮಾನ ಆಗಿದೆ ಎಂದರು. ಅಲ್ಲದೆ ಜಿಲ್ಲೆಯ ಬಿಜೆಪಿ ಯುವ ಮುಖಂಡ ಶರಣು ತಳ್ಳಿಕೇರಿ ಅವರನ್ನು ಸಹ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಜಿಲ್ಲೆಗೆ ನೀಡಿದ ಪ್ರಾಧಿನಿತ್ಯ ಆಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.