ಉಡುಪಿ: ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 20ನೇ ಪ್ರತಿಷ್ಠಾವರ್ಧಂತಿ ಮಹೋತ್ಸವದ ಪೂರ್ವಭಾವಿ ಕಾರ್ಯಕ್ರಮ ಹಾಗೂ ಪರಿವಾರ ದೇವರುಗಳ ಕಲಶಾಭಿಷೇಕ ಕಾರ್ಯಕ್ರಮವು ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇ ಮೂ ಗಣೇಶ್ ಸರಳಾಯರ ನೇತೃತ್ವದಲ್ಲಿ ಸಂಪನ್ನಗೊಂಡಿತು.ಈ ಕಾರ್ಯಕ್ರಮದಲ್ಲಿ ಋತ್ವಿಜರ ಆಗಮನ, ದೀಪ ಪ್ರಜ್ವಲನೆ, ಸಾಮೂಹಿಕ ದೇವತಾ ಪ್ರಾರ್ಥನೆ, ಕ್ಷೇತ್ರದಲ್ಲಿ ತೋರಣ ಮಹೂರ್ತ, ಉಗ್ರಾಣ, ತರಕಾರಿ ಮುಹೂರ್ತಗಳು, ಬಳಿಕ ಸಪ್ತಶುದ್ಧಿ, ಪ್ರಾಸಾದ ಶುದ್ದಿ, ವಾಸ್ತು ರಾಕ್ಷೋಘ್ನಾದಿ ಪ್ರಕ್ರಿಯೆಗಳು, ಪ್ರಸನ್ನ ಪೂಜೆಗಳೂ ನೆರವೇರಿದವು.
ಬೆಳಿಗ್ಗೆ ಸ್ವಸ್ತಿ ಪುಣ್ಯಹವಾಚನ, ಆದ್ಯ ಗಣಪತಿಯಾಗ, ಪ್ರಸನ್ನ ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಗಂಧರ್ವ ಕನ್ಯೆ. ಮುಖ್ಯಪ್ರಾಣ ದೇವರು, ಯಕ್ಷೇಶ್ವರಿ ಯಕ್ಷಕನ್ನಿಕ ಹಾಗೂ ಕಾಲಭೈರವರ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕವು, ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ಪಂಚವಿಂಶತಿ ಕಲಶಾಭಿಷೇಕ ನೆರವೇರಿತು.ಮಧ್ಯಾಹ್ನ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ ಹಾಗೂ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ಸಂಪನ್ನಗೊಂಡಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ. ಇಂದು ನಾಗದೇವರ ಪ್ರತಿಷ್ಠಾ ವರ್ಧಂತಿ: ಶ್ರೀ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿರುವ ನಾಗಾಲಯದಲ್ಲಿ ಇಂದು ಸರ್ವ ಪ್ರಾಯಶ್ಚಿತ್ತ ಪೂರ್ವಕ ಆಶ್ಲೇಷ ಬಲಿ, ದಾನ, ವಟು ಆರಾಧನೆ, ಷಟ್ ಶಿರಾ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪಂಚವಿಂಶತಿ ಕಲಶಾಭಿಷೇಕ,ಕಾಮಧೇನು ಸಹಿತ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ನವಕ ಕಲಶ ಪ್ರಧಾನ ಹೋಮ ಕಲಶಾಭಿಷೇಕ, ಪಂಚಮುಖಿ ಗಾಯತ್ರಿ ದೇವಿಯ ಸನ್ನಿಧಾನದಲ್ಲಿ ಪಂಚವಿಂಶತಿ ಕಲಶಾಭಿಷೇಕ, ಸುವಾಸಿನಿ ಆರಾಧನೆ ಕನ್ನಿಕರಾಧನೆ ಹಾಗೂ ಮಹಾಪೂಜೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ.