ಹಿಂದೂಗಳಿಗೆ ಹಣ ನೀಡಿದರೆ ಹಿಂದೂ ವಿರೋಧಿ ಆಗ್ತೇವಾ?: ಗುಂಡೂರಾವ್‌

| Published : Mar 03 2024, 01:31 AM IST

ಸಾರಾಂಶ

3.70 ಲಕ್ಷ ಕೋಟಿ ರು. ಬಜೆಟ್‌ ಮೊತ್ತದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು ಕೇವಲ 3 ಸಾವಿರ ಕೋಟಿ ರುಪಾಯಿ. ಅದೇ ರೀತಿ 3 ಸಾವಿರ ಕೋಟಿ ರು.ಗಳನ್ನು ಮೀನುಗಾರರಿಗೆ ನೀಡಿದ್ದೇವೆ. ಎಸ್ಸಿಎಸ್ಟಿ ಸಮುದಾಯಕ್ಕೆ 39 ಸಾವಿರ ಕೋಟಿ ರು. ನಿಗದಿ ಮಾಡಲಾಗಿದೆ. ಇವರು ಹಿಂದೂಗಳಲ್ವಾ ಎಂದು ಗುಂಡೂರಾವ್‌ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಕೇವಲ 3 ಸಾವಿರ ಕೋಟಿ ರು. ನೀಡಿದ್ದಕ್ಕೆ ಬಿಜೆಪಿಯವರ ಕಣ್ಣು ಕೆಂಪಾಗಿದೆ. ಆದರೆ ಸಾವಿರಾರು ಕೋಟಿ ರು.ಗಳನ್ನು ಹಿಂದೂಗಳು, ದೇವಾಲಯಗಳ ಅಭಿವೃದ್ಧಿಗೆ ನೀಡಿದ್ದೇವೆ. ಹಿಂದೂ ವಿರೋಧಿ ಆಗಿದ್ದರೆ ದೇವಾಲಯಗಳಿಗೆ ಅನುದಾನ ನೀಡ್ತಿದ್ವಾ? ಹಿಂದೂಗಳಿಗೆ ಅನುದಾನ ನೀಡಿದರೆ ಹಿಂದೂ ವಿರೋಧಿ ಆಗ್ತೇವಾ ಎಂದು ಆರೋಗ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3.70 ಲಕ್ಷ ಕೋಟಿ ರು. ಬಜೆಟ್‌ ಮೊತ್ತದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದು ಕೇವಲ 3 ಸಾವಿರ ಕೋಟಿ ರುಪಾಯಿ. ಅದೇ ರೀತಿ 3 ಸಾವಿರ ಕೋಟಿ ರು.ಗಳನ್ನು ಮೀನುಗಾರರಿಗೆ ನೀಡಿದ್ದೇವೆ. ಎಸ್ಸಿಎಸ್ಟಿ ಸಮುದಾಯಕ್ಕೆ 39 ಸಾವಿರ ಕೋಟಿ ರು. ನಿಗದಿ ಮಾಡಲಾಗಿದೆ. ಇವರು ಹಿಂದೂಗಳಲ್ವಾ ಎಂದು ಗುಂಡೂರಾವ್‌ ಪ್ರಶ್ನಿಸಿದರು.ಹಿಂದೂ ವಿರೋಧಿ ನೀತಿಯಾ?:

ಯಡಿಯೂರಪ್ಪ ಸಿಎಂ ಆಗಿದ್ದಾಗ ಧಾರ್ಮಿಕ ದತ್ತಿ ಇಲಾಖೆ ಹಣವನ್ನು ಬೇರೆ ಧರ್ಮದವರಿಗೆ ನೀಡಬಹುದು ಎಂಬ ನಿಯಮವಿತ್ತು. ಈ ಹಣ ಹಿಂದೂ ಧರ್ಮಕ್ಕೆ ಮಾತ್ರ ಮೀಸಲಾಗಿರಬೇಕು ಎಂದು ತಿದ್ದುಪಡಿ ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಈಗ ಒಂದು ರು. ಕೂಡ ಬೇರೆ ಧರ್ಮಕ್ಕೆ ಕೊಡಲಾಗದು. ಇದು ಹಿಂದೂ ವಿರೋಧಿ ನೀತಿಯಾ ಎಂದು ಗುಂಡೂರಾವ್‌ ಹೇಳಿದರು.

ಅಭಿವೃದ್ಧಿಗೆ ಕೊರತೆ ಆಗಿಲ್ಲ:

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಆಗಲ್ಲ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆದರೆ ಕಳೆದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರು. ಮೀಸಲಿಡುವುದರ ಜತೆಗೆ ಉಳಿದ ಅಭಿವೃದ್ಧಿ ಯೋಜನೆಗಳಿಗೆ ಒಟ್ಟು 1.20 ಲಕ್ಷ ಕೋಟಿ ರು. ಒದಗಿಸಲಾಗಿದೆ. ಅಭಿವೃದ್ಧಿಗೆ ಯಾವುದೇ ಕೊರತೆ ಆಗಿಲ್ಲ ಎಂದರು.

ಒಂದೇ ಒಂದು ರು. ಭ್ರಷ್ಟಾಚಾರವಿಲ್ಲದೆ ಗ್ಯಾರಂಟಿ ಯೋಜನೆಯ ಇಷ್ಟು ದೊಡ್ಡ ಮೊತ್ತ ಜನರ ಖಾತೆ ಸೇರುತ್ತಿದೆ. ಇದರಿಂದಾಗಿ ಜನರ ವೆಚ್ಚ ಮಾಡುವ ಸಾಮರ್ಥ್ಯ ಹೆಚ್ಚಾಗಿದ್ದು, ಬಿಜೆಪಿ ಅವಧಿಗಿಂತ ಶೇ.18ರಷ್ಟು ಅಧಿಕ ತೆರಿಗೆ ಸಂಗ್ರಹವಾಗಿದೆ. 2023-24ರಲ್ಲಿ ಗುಜರಾತ್‌ನಲ್ಲಿ ಕೇವಲ 2.2 ಬಿಲಿಯನ್‌ ಡಾಲರ್‌ ನೇರ ಹೂಡಿಕೆ ಆಗಿದ್ದರೆ, ಕರ್ನಾಟಕದಲ್ಲಿ 20.4 ಬಿ. ಡಾಲರ್‌ ಹೂಡಿಕೆ ಆಗಿದೆ. ಅಭಿವೃದ್ಧಿ ಎಲ್ಲಿ ಕುಂಠಿತವಾಗಿದೆ ಎಂದು ಹೇಳಿದರು.

ಕೇಂದ್ರ ಯೋಜನೆಯಲ್ಲಿ ರಾಜ್ಯ ಬಹುಪಾಲು:

ಕೇಂದ್ರದ ಯೋಜನೆಗಳಲ್ಲಿ ಕೇಂದ್ರದ ಪಾಲು ಇರುವುದು ಅತೀ ಕಡಿಮೆ ಆದರೂ ಕೇಂದ್ರದ್ದೇ ಕೊಡುಗೆ ಎನ್ನುತ್ತಾರೆ. ಸಾಮಾಜಿಕ ಭದ್ರತಾ ಯೋಜನೆಗೆ ಕೇಂದ್ರದ ಪಾಲು 525 ಕೋಟಿ ರು. ಇದ್ದರೆ, ರಾಜ್ಯದ ಪಾಲು 17 ಪಟ್ಟು 9 ಸಾವಿರ ಕೋಟಿ ರು., ಆಯುಷ್ಮಾನ್‌ಗೆ ಕೇಂದ್ರದ್ದು 187 ಕೋಟಿ ರು. ಆದರೆ ರಾಜ್ಯ ನೀಡೋದು 748 ಕೋಟಿ ರು., ಪ್ರಧಾನಮಂತ್ರಿ ಆವಾಜ್‌ ಯೋಜನೆ ಕೇವಲ 72 ಲಕ್ಷ ರು. ಕೇಂದ್ರ ನೀಡಿದರೆ, 2.48 ಲಕ್ಷ ರು. ನೀಡೋದು ರಾಜ್ಯ ಸರ್ಕಾರ. ಪಿಎಂ ಆವಾಜ್‌ (ನಗರ)ಗೆ ಕೇಂದ್ರ 1.50 ಲಕ್ಷ ರು. ನೀಡಿದರೆ, ರಾಜ್ಯದಿಂದ ಈ ಬಾರಿ 5.60 ಲಕ್ಷ ರು. ನೀಡಲು ತೀರ್ಮಾನ ಮಾಡಲಾಗಿದೆ. ರಾಜ್ಯ ಹಲವು ಪಟ್ಟು ಹೆಚ್ಚು ಅನುದಾನ ನೀಡಿದರೂ ಕೇಂದ್ರಕ್ಕೆ ಕ್ರೆಡಿಟ್‌ ನೀಡ್ತಾರೆ ಎಂದು ಗುಂಡೂರಾವ್‌ ಟೀಕಿಸಿದರು.ಕಾಂಗ್ರೆಸ್‌ ಮುಖಂಡರಾದ ಹರೀಶ್‌ ಕುಮಾರ್‌, ಮಮತಾ ಗಟ್ಟಿ, ಎ.ಸಿ. ವಿನಯರಾಜ್‌, ಭರತ್‌ ಮುಂಡೋಡಿ, ಟಿ.ಕೆ. ಸುಧೀರ್‌, ಜೋಕಿಂ ಮತ್ತಿತರರು ಇದ್ದರು.---------------ಸಿಎಂ ವಿವೇಚನಾ ಕೋಟಾದಡಿ ಲೂಟಿ ಆರೋಪ

ರಾಜ್ಯದಲ್ಲಿ ಬಿಜೆಪಿ ಅವಧಿಯಲ್ಲಿ ಸಿಎಂ ವಿವೇಚನಾ ಕೋಟಾದಡಿ ಬರೋಬ್ಬರಿ 1.66 ಲಕ್ಷ ಕೋಟಿ ರು. ನೀಡಲಾಗಿದೆ. ಇಷ್ಟು ದೊಡ್ಡ ಮೊತ್ತಕ್ಕೆ ಹಣ ಹೊಂದಿಸದೆ ಟೆಂಡರ್ ಮಾಡಿ ಹೋಗಿದ್ದಾರೆ. ಇದನ್ನು ಮಾಡಿದ್ದೇ ಲೂಟಿ ಹೊಡೆಯಲು ಎಂದು ಸಚಿವ ದಿನೇಶ್ ಗುಂಡೂರಾವ್‌ ಆರೋಪಿಸಿದರು. ಈ ಯೋಜನೆಗಳಿಗೆ ಹಣ ಹೊಂದಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಐದಾರು ವರ್ಷಗಳೇ ಬೇಕು ಎಂದರು. ---

ಎಫ್‌ಎಸ್‌ಎಲ್‌ ವರದಿ ಬಳಿಕ ಕ್ರಮಕ್ಕೆ ಬದ್ಧ: ಗುಂಡೂರಾವ್‌

ಮಂಗಳೂರು: ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್‌ ವರದಿ ಬಂದ ಬಳಿಕ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧವಾಗಿದೆ. ಅಧಿಕೃತ ವರದಿ ಹೊರಬಾರದೆ ಊಹಾಪೋಹದ ಮೇಲೆ ಚರ್ಚೆ ಸರಿಯಲ್ಲ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ವಿಚಾರಗಳಿಗೆ ಯಾರೂ ಬೆಂಬಲ ನೀಡುವುದಿಲ್ಲ. ಅಂತಹ ಘಟನೆ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಒಂದಾಗಿರಬೇಕಾದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡೋದು ಸರಿಯಲ್ಲ ಎಂದರು.

ಹಿಂದೆ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ಶ್ರೀರಾಮ ಸೇನೆ ಕಾರ್ಯಕರ್ತರು ಎನ್ನುವುದು ಸಾಬೀತಾಗಿದೆ. ಅವರ ಮೇಲೂ ಕ್ರಮ ಆಗಬೇಕು. ಅದೇ ರೀತಿ ಪಾಕಿಸ್ತಾನ ಜಿಂದಾಬಾದ್‌ ಎಂದಿದ್ದರೆ ಅವರ ಮೇಲೂ ಕ್ರಮ ಆಗಬೇಕು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಬಿಜೆಪಿಯವರಿಗೆ ರಾಜಕೀಯ ಮಾಡೋದೆ ಕೆಲಸ. ಕೇಂದ್ರ ಸರ್ಕಾರ ಬರ ಪರಿಹಾರದ ಒಂದು ರುಪಾಯಿ ಕೊಟ್ಟಿಲ್ಲ. ಲಕ್ಷಾಂತರ ರೈತರಿಗೆ ತೊಂದರೆ ಆಗಿದೆ. ಇದರ ಬಗ್ಗೆ ಬಿಜೆಪಿಗೆ ಗಮನ ಇಲ್ಲ. ಜಮ್ಮು ಕಾಶ್ಮೀರ, ಮಣಿಪುರದಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆದಿವೆ. ಬಿಜೆಪಿಯವರು ನಮಗೆ ಪಾಠ ಹೇಳಿಕೊಡುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿದರು.

ರಾಮೇಶ್ವರಂ ಕೆಫೆ ಸ್ಫೋಟ ಸ್ಥಳಕ್ಕೆ ನಾಯಕರು ಭೇಟಿ ನೀಡಿದ್ದಾರೆ. ಎಲ್ಲ ದಿಕ್ಕಿನಿಂದಲೂ ತನಿಖೆ ನಡೆಯುತ್ತಿದೆ. ಇದರಲ್ಲಿ ಊಹಾಪೋಹ ಮಾಡುವುದು ಸರಿಯಲ್ಲ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿಯೇ ಇರುವವರು. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಇಂತಹ ಅನೇಕ ಘಟನೆಗಳು ನಡೆದಿವೆ. ಪುಲ್ವಾಮ ದಾಳಿ ಆಗಿದ್ದು ಕೇಂದ್ರದಲ್ಲಿ ಬಿಜೆಪಿ ಸ್‌ಕಾರ ಇರುವಾಗಲೇ ಎಂದು ಗುಂಡೂರಾವ್‌ ಹೇಳಿದರು.

ಈ ವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ: ಲೋಕಸಭಾ ಚುನಾವಣೆಗೆ ಸಂಬಂದಿಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್‌ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.