ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದಕ್ಕೆ ಬಿಡುವುದಿಲ್ಲ: ಹರತಾಳು ಹಾಲಪ್ಪ

| Published : Aug 27 2024, 01:36 AM IST

ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದಕ್ಕೆ ಬಿಡುವುದಿಲ್ಲ: ಹರತಾಳು ಹಾಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ವಿರೋಧಿಸಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುತ್ತೇವೆ. ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಸಿದ್ಧ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ.

ಭಟ್ಕಳ: ಶರಾವತಿ ನದಿ ನೀರನ್ನು ರಾಜಧಾನಿ ಬೆಂಗಳೂರು ಸೇರಿದಂತೆ ಬೇರೆ ಕಡೆಗೆ ಒಯ್ಯುವುದಕ್ಕೆ ಈ ಭಾಗದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ 15 ದಿನಗಳೊಳಗೆ ಈ ಬಗ್ಗೆ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಭಟ್ಕಳದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ನದಿಯಿಂದ ಬೆಂಗಳೂರು 2800 ಅಡಿ ಎತ್ತರದಲ್ಲಿದೆ. ಇಲ್ಲಿಂದ ರಾಜಧಾನಿಗೆ ನೀರು ಒಯ್ಯಲು ನಾನಾ ರೀತಿಯ ತೊಂದರೆ ಉಂಟಾಗಲಿದೆ. 480 ಕಿಮೀ ದೂರ ಇರುವ ಬೆಂಗಳೂರಿಗೆ ವಾಹನ ತೆಗೆದುಕೊಂಡು ಹೋಗುವುದೇ ಕಷ್ಟ. ಇನ್ನು ನೀರನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಇದೊಂದು ₹22 ಸಾವಿರ ಕೋಟಿ ವೆಚ್ಚದ ಯೋಜನೆ ಆಗಿದೆ. ಈ ಯೋಜನೆಗಾಗಿ ಪಶ್ವಿಮಘಟ್ಟದ ಭೂಮಿಯನ್ನು ಕೊರೆಯುವುದು, ಅಗೆಯುವುದು, ಮುಚ್ಚುವುದು ಮಾಡಲಾಗುತ್ತದೆ. ಪೈಪ್‌ಲೈನ್ ಅಳವಡಿಸಲು ಎಷ್ಟೋ ಮರಗಿಡಗಳು ನಾಶವಾಗುತ್ತದೆ. ಇದರಿಂದ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಕೆಲವರಿಗೆ ₹22 ಸಾವಿರ ಕೋಟಿ ಮತ್ತು ಮರಗಳ ಮೇಲೆ ಕಣ್ಣು ಬಿದ್ದಿದ್ದು, ಇದರಿಂದಾಗಿಯೇ ಈ ಯೋಜನೆ ಜಾರಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಈ ಯೋಜನೆಯ ಸರ್ವೆಗಾಗಿ ₹73 ಲಕ್ಷ ಟೆಂಡರ್‌ ಕೂಡ ಆಗಿದೆ ಎಂದ ಅವರು, ಈ ಹಿಂದೆ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಾವು ಸಮರ್ಪಕವಾಗಿ ಮನವರಿಕೆ ಮಾಡಿ, ಯೋಜನೆ ಕೈಬಿಡುವಂತೆ ಮಾಡಿದ್ದೇವು. ಆದರೆ ಈ ಸರ್ಕಾರದಲ್ಲಿ ಈ ಯೋಜನೆಗೆ ಮತ್ತೆ ಜೀವ ಬಂದಿದ್ದು, ಕೆಲವರು ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ರಕ್ತಪಾತದ ಬಗ್ಗೆ ಭಾಷಣ ಮಾಡಿದವರು ಇಂದು ಯೋಜನೆ ಬಗ್ಗೆ ಮೃದು ಧೋರಣೆ ತಾಳಿ, ತಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಹಾಲಪ್ಪ ಹೇಳಿದರು.

ಸರ್ಕಾರಕ್ಕೆ ಒಂದು ವೇಳೆ ಬೆಂಗಳೂರಿಗೆ ನೀರು ಒಯ್ಯಲೇಬೇಕಾದರೆ ಮೇಕೆದಾಟು ಯೋಜನೆಯಿಂದ ನೀರು ಕೊಂಡೊಯ್ಯುವ ಕೆಲಸ ಮಾಡಲಿ. ಅದನ್ನು ಬಿಟ್ಟು ನಮ್ಮ ಶರಾವತಿ ನದಿ ನೀರನ್ನು ಒಯ್ಯುವುದು ಯಾವುದೇ ಕಾರಣಕ್ಕೂ ಬೇಡ. ಈ ಯೋಜನೆಗೆ ಪಕ್ಷಾತೀತವಾಗಿ ಜನರು ವಿರೋಧ ವ್ಯಕ್ತಪಡಿಸಬೇಕು. ಅಗತ್ಯ ಬಿದ್ದರೆ ಯೋಜನೆಯ ರದ್ದತಿಗೆ ತೀವ್ರ ಹೋರಾಟಕ್ಕೂ ಮುಂದಾಗಬೇಕು ಎಂದು ಕರೆ ನೀಡಿದ ಅವರು, ₹16 ಸಾವಿರ ಕೋಟಿ ವೆಚ್ಚದ ಮೇಕೆದಾಟು ಯೋಜನೆಯೇ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲಿ ಬಹಳಷ್ಟು ಕೆಲಸವಾದರೂ ನೀರು ಒಯ್ಯುವ ಕಾರ್ಯ ಆಗಿಲ್ಲ. ಮೇಕೆದಾಟು ಯೋಜನೆಯಿಂದ ಅಲ್ಲಿನ ಪರಿಸರ ಮತ್ತು ಜನರ ಮೇಲೆ ಯಾವ ರೀತಿ ಪರಿಣಾಮ ಆಗಿದೆ ಎನ್ನುವುದು ಅಲ್ಲಿನ ವಾಸ್ತವ ಪರಿಸ್ಥಿತಿ ಅರಿತಾಗ ಮಾತ್ರ ಅರ್ಥವಾಗುತ್ತದೆ ಎಂದರು.

ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ವಿರೋಧ ಮಾಡುವ ಕುರಿತು ನಾವು ಚರ್ಚೆ ಮಾಡಿದ್ದೇವೆ. ಶರಾವತಿಯ ಒಡಲನ್ನು ಅಗೆದು-ಬಗೆದು-ಸೀಳಿ ಪಶ್ಚಿಮ ಘಟ್ಟದಲ್ಲಿ ತೊಂದರೆ ಉಂಟಾಗಬಹುದು. ಕಾನೂನಿನ ಪ್ರಕಾರ ಈ ಯೋಜನೆ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ. ಸರ್ಕಾರ ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ ಎಂದ ಅವರು, ಹಸಿರು ನ್ಯಾಯಾಧಿಕರಣ, ಸರ್ವೋಚ್ಚ ನ್ಯಾಯಾಲಯದ ತನಕವೂ ನಾವು ನ್ಯಾಯಕ್ಕಾಗಿ ಹೋರಾಟ ಮಾಡುವವರಿದ್ದೇವೆ ಎಂದರು.

ಈಗಾಗಲೇ ಪಶ್ಚಿಮಘಟ್ಟ ಪ್ರದೇಶದಲ್ಲಿ ನಾವು ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಶರಾವತಿಯಿಂದ ೩೦-೪೦ ಟಿಎಂಸಿ ನೀರನ್ನು ಬೆಂಗಳೂರಿಗೆ ಒಯ್ದರೆ ಹೊಳೆಯಲ್ಲಿ ಸಮುದ್ರದಿಂದ ಉಪ್ಪು ನೀರು ನುಗ್ಗಿ ನದಿ ಪಾತ್ರದಲ್ಲಿರುವ ಸಾವಿರಾರು ಎಕರೆ ಜಮೀನಿಗೆ ತೊಂದರೆ ಆಗಲಿದೆ. ಅಧಿಕಾರಿಗಳಲ್ಲಿಯೇ ಈ ಯೋಜನೆ ಬಗ್ಗೆ ಗೊಂದಲವಿದೆ ಎಂದು ಹೇಳಿದರು.

ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಹೊನ್ನಾವರದ ಮಂಡಲದ ಮಾಜಿ ಅಧ್ಯಕ್ಷ ರಾಜು ಭಂಡಾರಿ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಪ್ರಮುಖರಾದ ಕೇದಾರ ಕೊಲ್ಲೆ, ಶ್ರೀನಿವಾಸ ನಾಯ್ಕ, ಉಮೇಶ ನಾಯ್ಕ ಮುಂತಾದವರಿದ್ದರು.