ಮೋದಿ ಎದುರು ಮಾತಾಡುವ ಧೈರ್ಯ ಶೆಟ್ಟರಗೆ ಇದ್ಯಾ?

| Published : Apr 29 2024, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಕಳೆದ ಅವಧಿಯಲ್ಲಿ ರಾಜ್ಯದ 25 ಬಿಜೆಪಿ ಸಂಸದರು ಕೇಂದ್ರದಲ್ಲಿ ಮಾತನಾಡಿಲ್ಲ. ಹೀಗಿರುವಾಗ, ಜಗದೀಶ ಶೆಟ್ಟರ ಅವರಿಗೆ ಮೋದಿ ಎದುರು ಮಾತಾಡುವ ಧೈರ್ಯ ಇದ್ಯಾ? ಮೋದಿ ಕಂಡರೇ ಅವರಿಗೆ ಭಯ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಳೆದ ಅವಧಿಯಲ್ಲಿ ರಾಜ್ಯದ 25 ಬಿಜೆಪಿ ಸಂಸದರು ಕೇಂದ್ರದಲ್ಲಿ ಮಾತನಾಡಿಲ್ಲ. ಹೀಗಿರುವಾಗ, ಜಗದೀಶ ಶೆಟ್ಟರ ಅವರಿಗೆ ಮೋದಿ ಎದುರು ಮಾತಾಡುವ ಧೈರ್ಯ ಇದ್ಯಾ? ಮೋದಿ ಕಂಡರೇ ಅವರಿಗೆ ಭಯ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.

ಜಿಲ್ಲೆಯ ಯರಗಟ್ಟಿ ಪಟ್ಟಣದ ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕರ್ನಾಟಕದಿಂದ 25 ಜನ ಬಿಜೆಪಿಯಿಂದ ಗೆದ್ದಿದ್ದರು. ಸುರೇಶ ಅಂಗಡಿ‌ ಮಂತ್ರಿ ಆಗಿದ್ದರು. ಬಳಿಕ ಅವರ ಪತ್ನಿ ಕೂಡ ಗೆದ್ದಿದ್ದರು. ಬಿಜೆಪಿಯ 25 ಜನ ಎಂಪಿಗಳು ಮಾತಾಡಿಲ್ಲ. ಹೀಗಿರುವಾಗ, ಜಗದೀಶ್ ಶೆಟ್ಟರ್ ಅವರಿಗೆ ಮೋದಿ ಎದುರು ಮಾತಾಡುವ ಧೈರ್ಯ ಇದ್ಯಾ ಎಂದು ಪ್ರಶ್ನಿಸಿದರು.ಮಂಗಲ ಅಂಗಡಿಗೆ ಟಿಕೆಟ್ ಕೊಟ್ಟರೇ ಗೆಲ್ಲೋದಿಲ್ಲವೆಂದು ಈ ಬಾರಿ ಜಗದೀಶ್ ಶೆಟ್ಟರ್ ಅವರನ್ನು ಹುಬ್ಬಳ್ಳಿಯಿಂದ ನಿಲ್ಲಿಸಿದ್ದಾರೆ. ಜಗದೀಶ್ ಶೆಟ್ಟರ್ ಚಂಚಲ ಮನಸಿನ ವ್ಯಕ್ತಿ, ಬದ್ಧತೆ ಇಲ್ಲದ ಮನುಷ್ಯ. ಕಳೆದ ಬಾರಿ ಬಿಜೆಪಿಯವರು ಟಿಕೆಟ್ ಕೊಡದ್ದಕ್ಕೆ ಕಾಂಗ್ರೆಸ್‌ಗೆ ಬಂದಿದ್ದರು. ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಶೆಟ್ಟರ್ ಸೋತರು.‌ ಇದೀಗ ಬೆಳಗಾವಿಯಲ್ಲಿ ಮಂಗಲ ಅಂಗಡಿ ಬದಲಿಗೆ ಶೆಟ್ಟರ್ ಅವರನ್ನು ನಿಲ್ಲಿಸಲಾಗಿದೆ. ಕರ್ನಾಟಕದಲ್ಲಿ 12, ದೇಶಾದ್ಯಂತ 100 ಹಾಲಿ ಎಂಪಿಗಳಿಗೆ ಬಿಜೆಪಿ ಕೊಟ್ಟಿಲ್ಲ. ಇನ್ನೂ ಹುಬ್ಬಳ್ಳಿಯಲ್ಲಿ ಗೆಲ್ಲದ ಶೆಟ್ಟರ್ ಇಲ್ಲಿ ನಿಜವಾಗಿಯೂ ಗೆಲ್ತಾರಾ ಎಂದು ಪ್ರಶ್ನಿಸಿದರು.ಪ್ರಧಾನಿ ಮೋದಿ ಮಾತಾಡಿದರೇ ಹಸಿ‌ ಸುಳ್ಳು. ಶಿವಾಜಿ, ಕಿತ್ತೂರು ರಾಣಿ ಚನ್ನಮ್ಮಗೆ ಕಾಂಗ್ರೆಸ್ ಅವಮಾನಿಸಿದೆ ಎಂದು‌ ಮೋದಿ ಸುಳ್ಳು ಹೇಳಿದ್ದಾರೆ. ಈ ಮಹನೀಯರನ್ನು ಅತ್ಯಂತ ಗೌರವಯುತವಾಗಿ ಕಾಂಗ್ರೆಸ್ ನೋಡಿಕೊಂಡಿದೆ. ಭಕ್ತರ ಅನುಕೂಲಕ್ಕೆ ಯಲ್ಲಮ್ಮನ ಪ್ರಾಧಿಕಾರ ಮಾಡುತ್ತೇವೆ ಎಂದು ಭರವಸೆ ನೀಡಿದರು. 10‌ ವರ್ಷಗಳಿಂದ ಮೋದಿ ಪ್ರಧಾನಿ ಆಗಿದ್ದರೂ ಜನ ಸಾಮಾನ್ಯರಿಗೆ ಏನು ಪ್ರಯೋಜನ ಆಗಿಲ್ಲ. ಅಗತ್ಯ ಬೆಲೆ ಇಳಿಯಲಿಲ್ಲ‌‌. ಅಗತ್ಯ‌ ವಸ್ತುಗಳ ಬೆಲೆ ದುಪ್ಪಟ್ಟು ಆಗಿದೆ. ಎಲ್ಲಿ ಹೋಯಿತು ಮೋದಿ ಹೇಳಿದ ಅಚ್ಛೆ ದಿನ್?.‌ 2014ರಲ್ಲಿ ಡಿಸೇಲ್ ₹48 ಇವತ್ತು ₹ 95 ಆಗಿದೆ. ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಬಿಜೆಪಿ ಅಂದರೆ ಸುಳ್ಳಿನ ಫ್ಯಾಕ್ಟರಿ, ಸುಳ್ಳೇ ಅವರ ಮನೆ ದೇವರು ಎಂದು ವ್ಯಂಗ್ಯವಾಡಿದರು.ಲೋಕಸಭಾ ಚುನಾವಣಾ ನಂತರ‌ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಇದಕ್ಕಾಗಿ ₹50 ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ನಮ್ಮ ಖಜಾನೆ ಖಾಲಿ‌ ಆಗಿಲ್ಲ, ಆಗೋದು‌ ಇಲ್ಲ‌. ಬರ ಪರಿಹಾರ ನೀಡಲು‌ ವಿಳಂಬ ಮಾಡಿದ ಕೇಂದ್ರ ಸರ್ಕಾರ ₹100 ಕೇಳಿದರೇ ಕೇವಲ ₹19 ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದುವರೆಗೆ 200 ಕೋಟಿ‌ ಮಹಿಳೆಯರು ಫ್ರೀ ಆಗಿ ಪ್ರಯಾಣ ಮಾಡಿದ್ದಾರೆ. ಈ ಹಿಂದಿನ ನಮ್ಮ ಸರ್ಕಾರ ಅನ್ನಭಾಗ್ಯ ಕಾರ್ಯಕ್ರಮದಡಿ 7 ಕೆಜಿ ನೀಡುತ್ತಿದ್ದೇವು, ಬಿಎಸ್ ಯಡಿಯೂರಪ್ಪ 5 ಕೆಜಿಗೆ ಇಳಿಸಿದ್ದರು. 2023 ರಲ್ಲಿ 10 ಕೆಜಿ ಅಕ್ಕಿಯನ್ನು ಉಚಿತ ಕೊಡುವುದಾಗಿ ಹೇಳಿದ್ದೇವು, ಅದರಂತೆ ನಾವು ದುಡ್ಡು ಕೊಟ್ಟರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅಕ್ಕಿ ಬದಲಿಗೆ ತಿಂಗಳಿಗೆ ₹170 ಕೊಡುತ್ತಿದ್ದೇವೆ. ಗೃಹ ಜ್ಯೋತಿ 200 ಯುನಿಟ್‌ರವರೆಗೆ ಎಲ್ಲರಿಗೂ ಫ್ರೀ, ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಮನೆಯ ಒಡತಿಯರಿಗೆ ತಿಂಗಳಿಗೆ ₹2 ಸಾವಿರ ನೀಡಲಾಗುತ್ತಿದೆ. ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ಪ್ರತಿ ಕುಟುಂಬಕ್ಕೆ ₹5 ರಿಂದ‌ ₹6 ಸಾವಿರ ಸಿಗುತ್ತಿದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ. ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಪಕ್ಷ. ಮನೆ ಮಗ ಮೃಣಾಲ್‌ ಹೆಬ್ಬಾಳಕರ ಬೇಕಾ, ಬೀಗರು ಬೇಕಾ ಎಂದು ಪ್ರಶ್ನಿಸಿದರು.

ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದ ಜನರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಅಧಿಕಾರಕ್ಕೆ ಬಂದ ತಕ್ಷಣ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಯೋಜನೆಗಳಿಂದ ಅನುಕೂಲ ಆಗಿದೆಯೇ‌ ಹೊರತು,‌ ಯಾವ ಹೆಣ್ಣು ಮಕ್ಕಳು ದಾರಿ ತಪ್ಪಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಬ್ರಿಟಿಷರು ಇಡೀ ದೇಶವನ್ನು ಕೊಳ್ಳೆ ಹೊಡೆದು ಹೋಗಿದ್ದ ಸಂದರ್ಭದಲ್ಲಿ ಬಡ ಜನರಿಗೆ ನೆರವಾಗಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷ ಎಂದರೇ ಬದ್ಧತೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬಡಜನರ ಹಸಿವನ್ನು ನೀಗಿಸಿದೆ ಎಂದರು. ಬೆಳಗಾವಿಗೆ ಶೆಟ್ಟರ್ ಅವರ ಕೊಡುಗೆ ಶೂನ್ಯ.ಐಐಟಿ ಕಾಲೇಜು, ಹೈಕೋರ್ಟ್, ಐಟಿ ಬಿಟಿ ಕಂಪನಿಗಳು ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಇವತ್ತು ಬೆಳಗಾವಿ ಕರ್ಮಭೂಮಿ ಎಂದು ಹೇಳುವ ಮೂಲಕ ಮೊಸಳೆ ಕಣ್ಣೀರು ಹಾಕ್ತಿದ್ದಾರೆ. ಮನೆ ಮಗ ಬೇಕಾ, ಹೊರಗಿನವರು ಬೇಕಾ ಎಂದು ಪ್ರಶ್ನಿಸಿದರು. ನಮಗೆ ಬಾಡಿಗೆ ಮನೆ ಬೇಡ, ಸ್ವತಃ ಮನೆ ಬೇಕು. ಬೀಗರು ಮನೆಗೆ ಬಂದು ಊಟ ಮಾಡಿ‌ಹೋಗ್ತಾರೆ ಅಂದ್ರೆ, ಇಲ್ಲೆ ಯಜಮಾನ ಆಗಲು ಬಂದಿದ್ದಾರೆ ಎಂದು‌ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು.ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದರೇ, ಪ್ರಧಾನಿ ನರೇಂದ್ರ ಮೋದಿ‌ ಚುನಾವಣೆಗೆ ಒಂದು ಭಾಷಣ ಮಾಡುತ್ತ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದರು.ಸವದತ್ತಿ ಶಾಸಕ ವಿಶ್ವಾಸ ವೈದ್ಯ ಪ್ರಾಸ್ತಾವಿಕ ಮಾತನಾಡಿ, ಯಲ್ಲಮ್ಮ ದೇವಿಯ ದೇವಸ್ಥಾನ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸವದತ್ತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಿಗುವುದು ಗ್ಯಾರಂಟಿ ಎಂದು ತಿಳಿಸಿದರು.ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಮಾತನಾಡಿ, ಕ್ಷೇತ್ರದಾದ್ಯಂತ ಕಾಂಗ್ರೆಸ್ ವಾತಾವರಣವಿದ್ದು, ಗೆಲ್ಲಲು ಉತ್ತಮ ವಾತಾವರಣವಿದೆ. ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್ ಅವರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ಕೋರಿದರು.ಸಮಾವೇಶದಲ್ಲಿ ಸಚಿವ ಬೈರತಿ ಸುರೇಶ್, ಶಾಸಕರಾದ ರಾಜು ಸೇಠ್, ಮಹಾಂತೇಶ್ ಕೌಜಲಗಿ, ಬಾಬಾ ಸಾಹೇಬ್ ಪಾಟೀಲ, ವಿನಯ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ವಕ್ತಾರೆ ತೇಜಸ್ವಿನಿ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ‌ವಿವಿಧ ಘಟಕಗಳ, ಬ್ಲಾಕ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್‌...ಸಿಎಂ ಭಾಷಣದುದ್ದಕ್ಕೂ ಹೌದು ಹುಲಿಯಾ..

ಯರಗಟ್ಟಿಯಲ್ಲಿ ಭಾನುವಾರ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ-2 ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಅಧಿಕ ಜನರು ಹಾಜರಿದ್ದರು. ಸುಮಾರು ಒಂದೂವರೆ ಗಂಟೆ ತಡವಾಗಿ ಕಾರ್ಯಕ್ರಮ ಆರಂಭಗೊಂಡರೂ ಸಮಾಧಾನಚಿತ್ತದಿಂದ ಕುಳಿತಿದ್ದ ಜನರು, ನೆಚ್ಚಿನ ನಾಯಕ ಸಿದ್ದರಾಮಯ್ಯ ನವರನ್ನು ನೋಡುತ್ತಿದ್ದಂತೆ ಶಿಳ್ಳೆ ಹೊಡೆದು ಸಂಭ್ರಮಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೂಡ ಹಾಜರಿದ್ದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿ ಜನರತ್ತ ಕೈ ಬೀಸಿದರು. ಸುಮಾರು‌ 25 ನಿಮಿಷಗಳ ಕಾಲ ಮಾತನಾಡಿದರು. ಸಿಎಂ ಭಾಷಣದುದ್ದಕ್ಕೂ ಹೌದು ಹುಲಿಯಾ..ಎಂದು ಜನರು ಉದ್ಗರಿಸಿದರು.ಕೋಟ್‌......

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನೇ ಸ್ಪರ್ಧಿಸಿದ್ದೇನೆ ಎಂದು ತಿಳಿದುಕೊಳ್ಳಿ. ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದರೇ ನನಗೆ ಮತ ಹಾಕಿದಂತೆ. ಈ ಮೂಲಕ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಮೇ.7 ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು.

-ಸಿದ್ದರಾಮಯ್ಯ, ಸಿಎಂ.

-----------------------------ಬಿಜೆಪಿಯವರು ಬರಿ ಆಶ್ವಾಸನೆಗಳಲ್ಲೇ ಕಾಲ ಕಳೆಯುತ್ತ ಬಂದಿದೆ. ಕೇಂದ್ರ ಸರ್ಕಾರದಿಂದ ಬಡತನ ನಿರ್ಮೂಲನೆ ಆಗಲಿಲ್ಲ. ಮಹಾದಾಯಿ ಯೋಜನೆಗೆ ಪರಿಹಾರ ಸಿಗಲಿಲ್ಲ. ಯುವಕರಿಗೆ ಉದ್ಯೋಗ ಸಿಗಲಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಬಡ ಕುಟುಂಬಗಳಿಗೆ ತಿಂಗಳಿಗೆ ₹ 1 ಲಕ್ಷ ನೀಡಲಾಗುವುದು.-ಡಿ.ಕೆ.ಶಿವಕುಮಾರ, ಉಪಮುಖ್ಯಮಂತ್ರಿ.

ಮುಂಬರುವ ಲೋಕಸಭಾ ಚುನಾವಣೆ ಜಿಲ್ಲೆಯ ಪಾಲಿಗೆ ಪ್ರತಿಷ್ಠೆಯಾಗಿದೆ. ಬೆಳಗಾವಿ ಜಿಲ್ಲೆಯ ಜನ ಸ್ವಾಭಿಮಾನಿಗಳು, ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿರುವ ಜಿಲ್ಲೆಯನ್ನು ಬೇರೆ ಜಿಲ್ಲೆಯವರು ಪ್ರತಿನಿಧಿಸುವುದು‌ ಬೇಡ.

-ಲಕ್ಷ್ಮೀ ಹೆಬ್ಬಾಳಕರ್‌, ಸಚಿವೆ.

ಕಾಂಗ್ರೆಸ್ ಪಕ್ಷವನ್ನು ಈ ಬಾರಿ ಬೆಂಬಲಿಸಿ ಸವದತ್ತಿ ಕ್ಷೇತ್ರದಲ್ಲಿ ಅತೀ ಹೆಚ್ಚು ಲೀಡ್ ಕೊಡಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಸರ್ಕಾರಕ್ಕೆ ಶಕ್ತಿ ತುಂಬಬೇಕು.-ಸತೀಶ ಜಾರಕಿಹೊಳಿ, ಸಚಿವ.

-----------