ಸಾರಾಂಶ
ಮಂಜುನಾಥ ಸಾಯೀಮನೆ
ಶಿರಸಿ:ತಾಲೂಕಿನಲ್ಲಿ ಕಳೆದೊಂದು ವರ್ಷದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಬರೋಬ್ಬರಿ ಎರಡು ಸಾವಿರಕ್ಕೂ ಅಧಿಕ ಜನಕ್ಕೆ ಕಚ್ಚಿದೆ. ಪಾಪದ ದಾರಿಹೋಕರು ಹಲ್ಲು ನಾಟಿಸಿಕೊಂಡು ಮನೆ ತಲುಪಿದ್ದಾರೆ!
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ವರ್ಷ ಬೀದಿ ನಾಯಿಗಳ ಕಾಟ ಜೋರಾಗಿದೆ. ಶಾಲೆಯಿಂದ ಮನೆಗೆ ಬರುವ ಪುಟಾಣಿಗಳು, ಯುವತಿಯರು, ಓಡಾಡಲು ಸಾಧ್ಯವಾಗದೇ ಊರುಗೋಲು ಮೂಲಕ ಸಾಗುತ್ತಿರುವ ಮುದುಕರೂ ನಾಯಿ ಬಾಯಿಗೆ ತುತ್ತಾಗಿದ್ದಾರೆ.ಕಳೆದ ಒಂದು ತಿಂಗಳಿನಲ್ಲಿ ನಗರ ಪ್ರದೇಶದಲ್ಲಿ ೨೪೪ ನಾಯಿ ಕಚ್ಚಿದ ಪ್ರಕರಣ ವರದಿಯಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ೯೧ ಜನರಿಗೆ ನಾಯಿ ಹಲ್ಲು ನಾಟಿಸಿದೆ. ೨೦೨೩ರ ಜನವರಿಯಿಂದ ಈ ವರೆಗೆ ೨೦೫೬ ಜನಕ್ಕೆ ನಾಯಿಗಳು ಕಡಿದಿವೆ. ಹಾಗೆ ನೋಡಿದರೆ ಈ ವರ್ಷ ಮುಕ್ತಾಯಕ್ಕೆ ಇನ್ನೂ ಒಂದುವರೆ ತಿಂಗಳು ಬಾಕಿ ಇದ್ದರೂ ಕಳೆದ ವರ್ಷ ನಾಯಿ ಕಚ್ಚಿದ ಪ್ರಕರಣಕ್ಕಿಂತ ಈ ವರ್ಷ ಜಾಸ್ತಿ ಆಗಿದೆ. ಕಳೆದ ವರ್ಷ ಒಟ್ಟೂ ೧೫೧೮ ಜನರಿಗೆ ನಾಯಿಗಳು ಕಡಿದಿದ್ದವು. ಈ ವರ್ಷ ಈಗಾಗಲೇ ೫೩೮ ಪ್ರಕರಣಗಳು ಜಾಸ್ತಿ ಆಗಿವೆ.ನಿಯಂತ್ರಣಕ್ಕಿದೆ ಹಲವು ತೊಡಕು:ನಾಯಿ ಕಚ್ಚುವ ಪ್ರಮಾಣ ನಿಯಂತ್ರಿಸಬೇಕೆಂದರೆ ಬೀದಿ ನಾಯಿಗಳ ನಿಯಂತ್ರಣ ಒಂದೇ ಸೂಕ್ತ ದಾರಿ. ಕೆಲ ವರ್ಷಗಳ ಹಿಂದೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಆದಾಗ ನಗರಸಭೆ ಈ ನಾಯಿಗಳನ್ನು ಹಿಡಿದು ಮಾಯ ಮಾಡಿತ್ತು. ಪ್ರಾಣಿ ದಯಾ ಸಂಘಟನೆಗಳು ನಗರಸಭೆಯ ಈ ಕ್ರಮ ಖಂಡಿಸಿದ್ದರು. ಸಾಕಿರುವ ನಾಯಿಗಳಿಗೆ ಬೆಲ್ಟ್ ಕಟ್ಟಿ. ಉಳಿದ ನಾಯಿಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ನಗರಸಭೆಯೂ ಸೂಚಿಸಿತ್ತು. ಆದರೆ, ಪ್ರಾಣಿಪ್ರಿಯರು ಬೀದಿ ನಾಯಿಗಳಿಗೂ ಬೆಲ್ಟ್ ಕಟ್ಟಿದ್ದರಿಂದ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ.ಕಳೆದ ಮೂರು ವರ್ಷಗಳಿಂದ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ನಡೆಸುವ ಪ್ರಯತ್ನ ಕೂಡ ನಗರಸಭೆಯಿಂದ ನಡೆದಿತ್ತು. ಒಂದು ಪ್ರದೇಶದಲ್ಲಿ ಹಿಡಿದ ನಾಯಿಯನ್ನು ಚಿಕಿತ್ಸೆ ಬಳಿಕ ಬೇರೆ ಪ್ರದೇಶದಲ್ಲಿ ಬಿಟ್ಟು, ಅಲ್ಲಿಯ ಜನತೆಗೆ ಈ ಹೊಸ ನಾಯಿ ಬಾಯಿ ಹಾಕಿದ ಪ್ರಕರಣಗಳೂ ನಡೆದಿವೆ. ಹೀಗಾಗಿ, ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಬೀದಿ ನಾಯಿಗಳ ಬಗ್ಗೆ ಕಾವೇರಿದ ಚರ್ಚೆ ನಡೆದರೂ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ.
ಅನುದಾನದಲ್ಲಿ ೨%:ಗ್ರಾಮೀಣ ಮಟ್ಟದಲ್ಲಿ ನಾಯಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಅನುದಾನವನ್ನೂ ಒದಗಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಜಿಪಂನಿಂದ ಬಿಡುಗಡೆ ಆಗುವ ಅನುದಾನದಲ್ಲಿ ಶೇ. ೨ರಷ್ಟನ್ನು ನಾಯಿಗಳ ನಿಯಂತ್ರಣಕ್ಕೆ ಬಳಸಬೇಕು ಎಂಬ ಸೂಚನೆಯನ್ನು ಜಿಪಂ ನೀಡಿದೆ. ನಾಯಿ ಸಂತಾನಹರಣ, ನಾಯಿ ಕಚ್ಚಿಸಿಕೊಂಡವರಿಗೆ ಚಿಕಿತ್ಸೆಗೆ ಈ ಹಣ ಬಳಕೆ ಮಾಡಲು ಸೂಚಿಸಲಾಗಿದೆ.ನಾಯಿಗಳನ್ನು ಹಿಡಿದರೂ ಸಂತಾನಹರಣ ಮಾಡಿಸುವುದು ಹೇಗೆ? ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ೨೪ ಪಶು ಆಸ್ಪತ್ರೆ, ಕೇಂದ್ರಗಳಿದ್ದರೂ ಇಡೀ ತಾಲೂಕಿಗೆ ಇರುವ ವೈದ್ಯರ ಸಂಖ್ಯೆ ಕೇವಲ ಮೂರು. ಗ್ರಾಮ ಪಂಚಾಯಿತಿಗಳು ಅವರದೇ ಆದ ಕಾರ್ಯದಲ್ಲಿ ಮಗ್ನರಾಗಿದ್ದು, ನಾಯಿಗಳ ನಿಯಂತ್ರಣವಿಲ್ಲದೇ ಸಾರ್ವಜನಿಕರದ್ದು ನಾಯಿಪಾಡಾಗಿದೆ.
ಅನುದಾನದಲ್ಲಿ ಶೇ. ೨ರಷ್ಟು ಹಣವನ್ನು ನಾಯಿಗಳ ನಿಯಂತ್ರಣಕ್ಕೆ ಬಳಸುವಂತೆ ಈಗಾಗಲೇ ಗ್ರಾಮ ಪಂಚಾಯಿತಿಗಳಿಗೆ ತಿಳಿಸಿದ್ದೇವೆ ಎಂದು ತಾಪಂ ಇಒ ಸತೀಶ ಹೆಗಡೆ ತಿಳಿಸಿದ್ದಾರೆ.