ಸಾರಾಂಶ
ಯೋಗ,ಧ್ಯಾನ, ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಯೋಗ ಗುರು ನಾಗರಾಜ್ ಗುರೂಜಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರತಿ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಹಾಗೂ ಆಯಸ್ಸು ವೃದ್ಧಿಯಾಗಲಿದೆ ಎಂದು ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ನ ಯೋಗ ಗುರು ಡಿ.ನಾಗರಾಜ್ ಗುರೂಜಿ ಹೇಳಿದರು.ಬುಧವಾರ ಸಂಜೆ ಗುರುಭವನದಲ್ಲಿ ಹಿರಿಯ ನಾಗರಿಕ ಸಮಿತಿ, ರೋಟರಿ ಕ್ಲಬ್,ಲಯನ್ಸ್ ಕ್ಲಬ್, ಗೆಳೆಯರ ಬಳಗ ಮತ್ತು ಸೀನಿಯರ್ ಚೇಂಬರ್ ಆಶ್ರಯದಲ್ಲಿ ಕಳೆದ 15 ದಿನಗಳಿಂದ ನಡೆದ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯೋಗದ ಆಸನಗಳನ್ನು ಮಾಡುವುದರಿಂದ ರಕ್ತದೊತ್ತಡ, ಮಧುಮೇಹ, ಬೆನ್ನುನೋವು ನಿವಾರಣೆ ಮಾಡಬಹುದು. ಮಧು ಮೇಹವಿದ್ದರೂ ನಿಯಂತ್ರಣದಲ್ಲಿಟ್ಟು ಕೊಳ್ಳಬಹುದು. ಪ್ರಾಣಾಯಾಮದಿಂದ ಆಯಸ್ಸು ಹೆಚ್ಚುತ್ತದೆ. ಲವಲವಿಕೆಯಿಂದ ಕೆಲಸ ಮಾಡಬಹುದು. ಯೋಗದ ಮಹತ್ವ ಅರಿತ ಪ್ರಪಂಚದ 192 ರಾಷ್ಟ್ರಗಳಲ್ಲಿ ಜನರು ಯೋಗದ ಕಡೆ ಒಲವು ತೋರುತ್ತಿದ್ದಾರೆ. ಹಲವು ರೋಗಗಳಿಂದ ಯಾವುದೇ ಔಷಧಿಗಳನ್ನು ಪಡೆಯದೆ ಮುಕ್ತಿಪಡೆಯಬೇಕಾದರೆ ಪ್ರತಿ ನಿತ್ಯ ಕನಿಷ್ಠ ಅರ್ಧಗಂಟೆ ಯೋಗ ಮಾಡಬೇಕು. ಹಸಿರು ತರಕಾರಿ, ಮೊಳಕೆ ಬರಿಸಿದ ಕಾಳುಗಳನ್ನು, ನಾರಿನ ಪದಾರ್ಥವಿರುವ ತರಕಾರಿಗಳನ್ನು ಸೇವಿಸಬೇಕು. ಪ್ರತಿ ನಿತ್ಯ ಬೆಳಿಗ್ಗೆ ಕಾಫಿ ಆಯ್ತ ಎಂದು ಕೇಳುವ ಬದಲು ಯೋಗ ಆಯ್ತ ಎಂದು ಕೇಳುವ ಸ್ಥಿತಿ ನಿರ್ಮಾಣವಾದರೆ ರೋಗ ಮುಕ್ತ ಜೀವನ ನಡೆಸಬಹುದು ಎಂದರು.ಯೋಗ ಶಿಬಿರಾರ್ಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ನಾಗೇಶ್ ಗೌಡ ಅನಿಸಿಕೆ ವ್ಯಕ್ತಪಡಿಸಿ, ಭಾರತೀಯ ಸಂಸ್ಕೃತಿ ಭವ್ಯಪರಂಪರೆ ಹೊಂದಿದ್ದು ಭಾರತೀಯ ಋಷಿ ಮುನಿಗಳೇ ಚರಕ, ಶುಶ್ರೋಷ ವೈದ್ಯಕೀಯ ಪದ್ಧತಿ , ಪಂತಜಲಿ ಯೋಗವನ್ನು ಪ್ರಪಂಚಕ್ಕೇ ಪರಿಚಯಿಸಿದರು. ಯೋಗದ ಮಹತ್ವ ಅರಿತ ವಿಶ್ವಸಂಸ್ಥೆ ಯೋಗ ದಿನ ವನ್ನು ಆಚರಿಸುತ್ತಿದೆ. ಪ್ರತಿಯೊಬ್ಬರ ಆರೋಗ್ಯ ಕೈಯಲ್ಲಿ ಹಾಗೂ ಅಡುಗೆ ಮನೆಯಲ್ಲಿದೆ. ಯುವ ಜನಾಂಗಕ್ಕೆ ಉತ್ತಮ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಸರ್ಕಾರ ನೀಡಿದರೆ ಇದು ದೊಡ್ಡ ಕೊಡುಗೆಯಾಗಲಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ರವಿಚಂದ್ರ ಮಾತನಾಡಿ, ಆಧುನಿಕ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಮುಖ್ಯ ಎಂದರು. ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಕೆ.ಕಿರಣ್ ಮಾತನಾಡಿ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆಯಿದೆ. ಹಾಗಾಗಿ ಶಿಕ್ಷಕರು ಯೋಗದ ತರಬೇತಿ ಪಡೆದು ಮಕ್ಕಳಿಗೆ ಪ್ರತಿ ನಿತ್ಯ ಯೋಗ ಹೇಳಿಕೊಟ್ಟರೆ ಮಕ್ಕಳ ಏಕಾಗ್ರತೆ ಹೆಚ್ಚಿ ಕಲಿಕೆಗೆ ಪೂರಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಯೋಗ ಗುರು ಡಿ.ನಾಗರಾಜ್ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ್ , ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷ ದಿನೇಶ್ವ, ಶಿಬಿರಾರ್ಥಿಗಳಾದ ಎಸ್.ಎಸ್. ಶಾಂತ ಕುಮಾರ್, ಜಿ.ದಿವಾಕರ್, ಜಗದೀಶ್, ವಿಜಯಕುಮಾರ್, ಶಾಂತಕುಮಾರಿ,ಲಂಕೇಶ್, ಪ್ರಶಾಂತ್ ಶೆಟ್ಟಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಹಿರಿಯ ನಾಗರಿಕ ಸಮಿತಿ ಹಿರಿಯ ಸದಸ್ಯ ಚಕ್ರಪಾಣಿ, ರೋಟರಿ ಸಂಸ್ಥೆ ಕಾರ್ಯದರ್ಶಿ ವಿದ್ಯಾನಂದ ಕುಮಾರ್, ಕೆ.ಎಸ್.ರಾಜಕುಮಾರ್, ಜಯಂತಿ ಪಾಲ್ಗೊಂಡಿದ್ದರು.