ಚನ್ನಗಿರಿ: ಪಟ್ಟಣದ ಬೀದಿಬದಿಯ ತಿಂಡಿ ಅಂಗಡಿಗಳು, ಹೋಟೆಲ್, ಬೇಕರಿಗಳಲ್ಲಿ ಗೃಹ ಬಳಕೆಯ ಅನಿಲವನ್ನು ಬಳಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಉಪವಿಭಾಗಾಧಿಕಾರಿ ಚನ್ನಪ್ಪ ನೇತೃತ್ವದಲ್ಲಿ ತಹಸೀಲ್ದಾರ್ ಎನ್.ಜೆ.ನಾಗರಾಜ್ ಸೇರಿದಂತೆ ಅಧಿಕಾರಿಗಳ ತಂಡ ಬುಧವಾರ ದಾಳಿ ನಡೆಸಿ ಹೋಟೆಲ್‌ಗಳಲ್ಲಿ ಬಳಸುತ್ತಿದ್ದ ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡ ಘಟನೆ ನಡೆಯಿತು.

ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಅವರು, ಮಧ್ಯಪ್ರಾಚ್ಯ ದೇಶಗಳ ಯುದ್ದದಿಂದಾಗಿ ಅಡುಗೆ ಅನಿಲ ಸಿಲಿಂಡರ್‌ಗಳ ಅಭಾವ ಉಂಟಾಗಿದೆ. ಅಲ್ಲದೆ, ಗೃಹ ಬಳಕೆಯ ಅಡುಗೆ ಅನಿಲವನ್ನು ವಾಣಿಜ್ಯಕ್ಕೆ ಉಪಯೋಗಿಸುವುದನ್ನು ಸರ್ಕಾರ ಸಂಪೂರ್ಣ ನಿಷೇಧ ಮಾಡಿದೆ. ಚನ್ನಗಿರಿ ಪಟ್ಟಣದ ಕೆಲ ಹೊಟೇಲ್‌ಗಳಲ್ಲಿ ಗೃಹ ಬಳಕೆ ಅನಿಲ ಉಪಯೋಗಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆ ದಾಳಿ ನಡೆಸಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಲಾಗುತ್ತಿದೆ ಎಂದರು.

ಸಿಲಿಂಡರ್ ದುಬಾರಿ ಬೆಲೆಗೆ ಮಾರಾಟ ಬಗ್ಗೆ ದೂರುಗಳು ಬಂದಿಲ್ಲ. ದೂರು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಗೃಹ ಬಳಕೆ ಸಿಲಿಂಡರ್ ವಾಣಿಜ್ಯಕ್ಕೆ ಬಳಕೆ ಕಂಡುಬಂದರೆ ಆ ಅಂಗಡಿಗಳ ಮಾಲೀಕರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದರು.

ತಹಸೀಲ್ದಾರ್ ಎನ್.ಜೆ.ನಾಗರಾಜ್ ಮಾತನಾಡಿದರು. ಪಟ್ಟಣ ವ್ಯಾಪ್ತಿಯಲ್ಲಿ ವಾಣಿಜ್ಯ ಬಳಕೆಯ 1 ಸಾವಿರ ಸಿಲಿಂಡರ್ ಬೇಡಿಕೆ ಇದೆ. ಆದರೆ, 300 ಸಿಲಿಂಡರ್ ಪೂರೈಕೆ ಆಗುತ್ತಿವೆ. ಮೊದಲಿನಿಂದಲೂ ವಾಣಿಜ್ಯ ಸಿಲಿಂಡರ್ ಬಳಕೆ ಮಾಡಿಕೊಳ್ಳುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಲೋಕೇಶ್, ಆಹಾರ ಇಲಾಖೆಯ ಶಿರಾಸ್ತೆದಾರ್ ಗಂಗಾಧರ್, ರಾಜಸ್ವನಿರೀಕ್ಷಕ ಸಿದ್ರಾಮೇಶ್, ಗ್ರಾಮ ಲೆಕ್ಕಾಧಿಕಾರಿ ಸೋಮಶೇಖರ್ ಮೊದಲಾದವರು ಹಾಜರಿದ್ದರು.