ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಣೆಕಟ್ಡು ನಿರ್ಮಾಣ ಕಷ್ಟಕರ ಎಂಬುದು ತಿಳಿದಿರುವ ವಿಷಯ, ಅಣೆಕಟ್ಟು ಸಂರಕ್ಷಣೆ ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದ್ದು, ಅಣೆಕಟ್ಟೆಗೆ ಸಣ್ಣ ಅಪಾಯವಾಗಲೂ ಬಿಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಜಿಪಂನ ಕಾವೇರಿ ಸಭಾಂಗಣದಲ್ಲಿ ರೈತ ಮುಖಂಡರೆಲ್ಲರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿ, ಟ್ರಯಲ್ ಬ್ಲಾಸ್ಟ್ ಕುರಿತಂತೆ ಜಿಲ್ಲೆಯ ಆಸಕ್ತಿ, ರೈತರ ಅಭಿಪ್ರಾಯ ಹಾಗೂ ಕೆ.ಆರ್.ಎಸ್ ಅಣೆಕಟ್ಟೆಯ ಅವಶ್ಯಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಣೆಕಟ್ಟೆಗೆ ಸಣ್ಣ ತೊಂದರೆಯಾಗದಂತೆ ಎಚ್ಚರ ವಹಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಕೆಆರ್‌ಎಸ್ ಅಣೆಕಟ್ಟೆ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಬೇಕಿದ್ದು, ಟ್ರಯಲ್ ಬ್ಲಾಸ್ಟ್ ಮಾಡುವುದೋ ಅಥವಾ ಬೇಡವೋ ಎಂಬ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಕಳೆದ ವಾರದಿಂದ ರೈತರು ಪ್ರತಿಭಟನೆ ಮಾಡುವ ಮೂಲಕ ಟ್ರಯಲ್ ಬ್ಲಾಸ್ಟ್ ನಿಂದ ಅಣೆಕಟ್ಟಿಗೆ ತೊಂದರೆಯಾಗುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರವು ಟ್ರಯಲ್ ಬ್ಲಾಸ್ಟ್ ಗೆ ಯಾವುದೇ ದಿನಾಂಕವನ್ನು ನಿಗಧಿ ಮಾಡಿಲ್ಲ ಎಂದರು.ಟ್ರಯಲ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಕಾನೂನು ಇಲಾಖೆ ಜೊತೆ ಗಂಭೀರ ಹಾಗೂ ನಿರಂತರವಾಗಿ ಚರ್ಚೆ ನಡೆಸುತ್ತಿದ್ದೇನೆ. ನ್ಯಾಯಾಲಯದ ವಿಚಾರಣೆ ಜು.15ರಂದು ನಡೆಯಲಿದೆ. ಅಲ್ಲಿಯವರೆಗೂ ಬರುವ ರೈತರ ಅಭಿಪ್ರಾಯಗಳನ್ನು ಪಡೆದು, ತಾಂತ್ರಿಕವಾಗಿ, ಅಧಿಕೃತವಾಗಿ ಮುಖ್ಯ ಮಂತ್ರಿಗಳು ಹಾಗೂ ಅಡ್ವೋಕೇಟ್ ಜನರಲ್ ಜೊತೆ ಮಾತನಾಡಿ ಈ ಬಗ್ಗೆ ಸ್ಪಷ್ಟ ನಿಲುವನ್ನು ಕೋರ್ಟ್ ಮುಂದೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಟ್ರಯಲ್ ಬ್ಲಸ್ಟ್ ನಡೆಸಲು ರೈತರ ವಿರೋಧವಿರುವುದಾಗಿ ರೈತ ಮುಖಂಡರು ಅಭಿಪ್ರಾಯ ನೀಡಿದ್ದಾರೆ. ಇದರೊಂದಿಗೆ ಅಡ್ವೋಕೇಟ್ ಜನರಲ್ ಅಭಿಪ್ರಾಯ, ಅಣಕಟ್ಟು ಸುರಕ್ಷತಾ ಸಮಿತಿ, ಉನ್ನತಾಧಿಕಾರಿಗಳ ಅಭಿಪ್ರಾಯವನ್ನು ಪಡೆದು ಜು. 15 ರಂದು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು. ಗೊಂದಲ ಬಗೆಹರಿಯದಿದ್ದರೆ ಸಮಯಾವಕಾಶ ಕೇಳಲಾಗುವುದು ಎಂದು ನುಡಿದರು.ಮುಖ್ಯಮಂತ್ರಿಗಳೊಂದಿಗೆ ಸಭೆ ರೈತರ ಅಭಿಪ್ರಾಯ ಕುರಿತಂತೆ ಚರ್ಚಿಸಲು ಸಭೆ ಆಯೋಜಿಸಲಾಗುವುದು. ಸಭೆ ನಡೆಯುವ ದಿನದಂದು ಆಯ್ದ ಐದು ರೈತ ಮುಖಂಡರು ಬೆಂಗಳೂರಿಗೆ ಆಗಮಿಸಿ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು.