ಪ್ರತಿ ವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿ, ಮೂಢನಂಬಿಕೆ ತೊಲಗಿಸಿ, ಜನರಲ್ಲಿ ಆರೋಗ್ಯಪೂರ್ಣ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ
ಕೊಪ್ಪಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಧಿಕಾರಿಗಳ ಕಚೇರಿ, ಜಿಲ್ಲಾ ಎನ್‌ಸಿಡಿ ಕೋಶ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮತ್ತು ಕೊಪ್ಪಳದ ಬಸವಶ್ರೀ ಪ್ಯಾರಾಮೆಡಿಕಲ್ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜನ ಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಎಚ್. ಮಾತನಾಡಿ, ಪ್ರತಿ ವರ್ಷ ಫೆ. 4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿ, ಮೂಢನಂಬಿಕೆ ತೊಲಗಿಸಿ, ಜನರಲ್ಲಿ ಆರೋಗ್ಯಪೂರ್ಣ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಕ್ಯಾನ್ಸರ್ ಹರಡುವ ರೀತಿ, ಲಕ್ಷಣಗಳು ಅದರ ಮುಂಜಾಗ್ರತಾ ಕ್ರಮಗಳ ಕುರಿತು, ಸಾರ್ವಜನಿಕರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.ಮುಖ್ಯವಾಗಿ ಈ ರೋಗವು ಅಸಾಂಕ್ರಾಮಿಕ ರೋಗಗಳಲ್ಲಿ ಒಂದಾಗಿದ್ದು, ಸಾಮಾನ್ಯವಾಗಿ ಪುರುಷರಲ್ಲಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಅನ್ನನಾಳ ಕ್ಯಾನ್ಸರ್ ಹಾಗೂ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ವಾಸಿಯಾಗದ ಗಾಯ, ಅಸಹಜ ರಕ್ತಸ್ರಾವ, ಬಹಳ ದಿನಗಳ ಕೆಮ್ಮು, ನೋವಿಲ್ಲದ ಗಡ್ಡೆ, ಊತ ಇವು ಕ್ಯಾನ್ಸರ್ ರೋಗದ ಲಕ್ಷಣಗಳಾಗಿದ್ದು, ಇವುಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರ ಹತ್ತಿರ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಜೀವನಶೈಲಿಯಿಂದ ಬರುವ ಅಸಾಂಕ್ರಾಮಿಕ ರೋಗಗಳಲ್ಲಿ ಕ್ಯಾನ್ಸರ್ ಒಂದಾಗಿದ್ದು, ವಿಶಿಷ್ಟತೆಯಿಂದ ಏಕತೆ ಎಂಬ ಈ ವರ್ಷದ ಘೋಷವಾಕ್ಯದೊಂದಿಗೆ ಕ್ಯಾನ್ಸರ್ ನಿಯಂತ್ರಣ ಕುರಿತು, ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 9-14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಯಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್‌ಪಿವಿ ಲಸಿಕೆ ನೀಡಲಾಗುತ್ತದೆ. ನಾವು ಸೇವಿಸುವ ಆಹಾರ ಪದಾರ್ಥಗಳ ಮೂಲಕ ಮತ್ತು ಪ್ಲಾಸ್ಟಿಕ್ ನೀರಿನ ಬಾಟಲಿಗಳ ಮೂಲಕ ಕ್ಯಾನ್ಸರ್ ಹರಡುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಯುವಕರು ತಂಬಾಕು, ಮದ್ಯ ಸೇವನೆಗಳಿಂದ ದೂರವಿರಬೇಕು. ಕ್ಯಾನ್ಸರ್ ಹರಡುವ ಬಗ್ಗೆ ಮತ್ತು ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸುವಂತೆ ಕೋರಿದರು.ಜಾಥಾ ನಡೆಸಲಾಯಿತು. ಜಿಲ್ಲಾ ಆಸ್ಪತ್ರೆಯ ಎನ್‌ಸಿಡಿ ಕಾರ್ಯಕ್ರಮದ ಫಿಜಿಷಿಯನ್ ಡಾ. ಶರಣಪ್ಪ, ಎನ್‌ಸಿಡಿ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಡಾ. ಜಯಶ್ರೀ ಎಂ.ಎಚ್., ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಮಹೇಶ ಉಮಚಗಿ, ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ. ಸಜ್ಜನರ್ ಭಾಗವಹಿಸಿದ್ದರು.