ಕನ್ನಡಪ್ರಭ ವಾರ್ತೆ ತುಮಕೂರು

ಉಗ್ರಾಣದಲ್ಲಿರುವ ಪ್ರತಿಯೊಂದು ಚೀಲ ಧಾನ್ಯವೂ ಒಂದು ಮಗುವಿನ ಆರೋಗ್ಯ, ಶಿಕ್ಷಣ ಮತ್ತು ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಹಾಗಾಗಿ ಆಹಾರ ಸುರಕ್ಷತೆಯಲ್ಲಿ ಅಸಡ್ಡೆ ಮಾಡದೆ ಸಂವೇದನಾಶೀಲತೆಯಿಂದ ಎಲ್ಲ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನಿಯಮಿತ ಮೇಲ್ವಿಚಾರಣೆ ಹಾಗೂ ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಮಕ್ಕಳ ಪೋಷಣಾ ಹಕ್ಕುಗಳನ್ನು ಬಲಪಡಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅಭಿಪ್ರಾಯಪಟ್ಟರು.

ತುಮಕೂರು ನಗರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯಾಪ್ತಿಯ ಉಗ್ರಾಣಗಳಿಗೆ ಭೇಟಿ ನೀಡಿ ಆಹಾರ ಸಂರಕ್ಷಣೆ, ಗುಣಮಟ್ಟ ಹಾಗೂ ವಿತರಣಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಪರಿಶೀಲನೆಯ ಮುಖ್ಯ ಉದ್ದೇಶ ಮಕ್ಕಳಿಗೆ ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ದೊರಕುವಂತೆ ವ್ಯವಸ್ಥೆಗಳನ್ನು ಬಲಪಡಿಸುವುದಾಗಿತ್ತು.

ಭೇಟಿಯ ಸಂದರ್ಭದಲ್ಲಿ ಉಗ್ರಾಣಗಳ ಸ್ವಚ್ಛತೆ, ಧಾನ್ಯಗಳ ಸಂಗ್ರಹ ವಿಧಾನ, ಕೀಟ, ಇಲಿ ನಿಯಂತ್ರಣ ವ್ಯವಸ್ಥೆ, ಪಾಲನೆ, ಸ್ಟಾಕ್ ದಾಖಲೆಗಳು ಹಾಗೂ ಶಾಲೆ ಮತ್ತು ವಸತಿ ನಿಲಯಗಳಿಗೆ ಹೋಗುವ ಆಹಾರದ ಗುಣಮಟ್ಟವನ್ನು ಗಮನಿಸಲಾಯಿತು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾರ್ಗಸೂಚಿಗಳಂತೆ ಆಹಾರ ಸುರಕ್ಷತೆ ಕಡ್ಡಾಯವಾಗಿ ಪಾಲನೆಯಾಗಬೇಕು ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ - 2006 ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಆಶಯಕ್ಕೆ ಅನುಗುಣವಾಗಿ ಪ್ರತಿಯೊಂದು ಹಂತದಲ್ಲೂ ಜವಾಬ್ದಾರಿಯುತ ಕಾರ್ಯ ನಿರ್ವಹಣೆ ಅಗತ್ಯ ಎಂದು ತಿಳಿಸಿದರು. ಹಾಳಾದ ಅಥವಾ ತೇವಾಂಶ ಹಿಡಿದ ಆಹಾರ ಕಂಡುಬಂದಲ್ಲಿ ತಕ್ಷಣ ಬೇರ್ಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಇದಲ್ಲದೆ ಭಾರತ ಬದ್ಧವಾಗಿರುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ ಮಕ್ಕಳಿಗೆ ಸಮರ್ಪಕ ಪೋಷಣೆ ಒದಗಿಸುವುದು ರಾಜ್ಯದ ಕರ್ತವ್ಯವಾಗಿದ್ದು, ಆಹಾರ ಸಂಗ್ರಹಣೆ ಅಥವಾ ವಿತರಣೆಯಲ್ಲಿನ ಯಾವುದೇ ಲೋಪವು ಮಕ್ಕಳ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮಾನ ಎಂದು ಅಧಿಕಾರಿಗಳಿಗೆ ನೆನಪಿಸಿದರು.


ಜಿಲ್ಲೆಯ ಎಲ್ಲಾ ಉಗ್ರಾಣಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಮಕ್ಕಳ ಸಹಾಯವಾಣಿ 1098 ಅನ್ನು ಶಾಶ್ವತ ಫಲಕದಲ್ಲಿ ಪ್ರಕಟಿಸಿ ಆಯೋಗಕ್ಕೆ ವರದಿ ನೀಡಲು ಡಾ.ತಿಪ್ಪೇಸ್ವಾಮಿ ಸೂಚಿಸಿದರು.

ಭೇಟಿಯ ಸಮಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಪವಿತ್ರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಶಿರಸ್ತೇದಾರ್ ರವರು ಹಾಗೂ ಉಗ್ರಾಣದ ಮ್ಯಾನೇಜರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಜರಿದ್ದರು.