ಸಾರಾಂಶ
- ಆನಗೋಡು ಗ್ರಾಮ ಸರ್ಕಾರಿ ಶಾಲೆಯಲ್ಲಿ ‘ಮಕ್ಕಳ ಕಲಿಕಾ ಹಬ್ಬ’ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ಕಾರಿ ಶಾಲೆಗಳು ಅಂದರೆ ಸಾಕು, ಕೆಲ ಜನರಿಗೆ ಅಸಡ್ಡೆ. ಅಲ್ಲಿ ಮಕ್ಕಳು ಕಲಿಯೋದಿಲ್ಲ, ಸರಿಯಾಗಿ ಕಲಿಸೋರು ಇರಲ್ಲ, ಸೌಲಭ್ಯಗಳಂತೂ ಇಲ್ಲವೇ ಇಲ್ಲ ಎನ್ನುವ ಪೋಷಕರಿದ್ದಾಎರ. ಅಂಥವರ ಆರೋಪಕ್ಕೆ ಆನಗೋಡು ಗ್ರಾಮದ ಸರ್ಕಾರಿ ಶಾಲೆ ಶೈಕ್ಷಣಿಕ ಪ್ರಗತಿ, ಮಕ್ಕಳ ಹಾಜರಾತಿಯಲ್ಲಿ ಹೆಚ್ಚು ಮೇಲುಗೈ ಸಾಧಿಸಿದೆ ಎಂದು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ತಾಲೂಕಿನ ಆನಗೋಡು ಗ್ರಾಮದಲ್ಲಿ ಉತ್ತರ ವಲಯದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಮಕ್ಕಳ ಕಲಿಕಾ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ಕಾಣುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಅತಿ ಹೆಚ್ಚು ಖಾಸಗಿ ಶಾಲೆಗಳು ಇದ್ದರೂ, ಕೂಡ ಈ ಸರ್ಕಾರಿ ಶಾಲೆಯಲ್ಲಿ 450 ಮಕ್ಕಳ ಹಾಜರಾತಿ ಇದೆ. ಎಲ್ಲ ಸರ್ಕಾರಿ ಶಾಲೆಗಳಿಗೆ ಆನಗೋಡು ಶಾಲೆ ಮಾದರಿಯಾಗಿದೆ ಎಂದರು.ಆನಗೋಡು ಸರ್ಕಾರಿ ಶಾಲೆಯಲ್ಲಿ ಉತ್ತಮ ಪರಿಸರ, ಪರಿಣಿತ ಶಿಕ್ಷಕರು, ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಇದರಿಂದಾಗಿ ಪೋಷಕರು ಈ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹೀಗಾಗಿ ನವೋದಯ, ಮೊರಾರ್ಜಿ, ಸೈನಿಕ ಶಾಲೆ ಸೇರಿದಂತೆ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿವರ್ಷ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಶಾಲೆಯಿಂದ 10ರಿಂದ 15 ವಿದ್ಯಾರ್ಥಿಗಳು ಆಯ್ಕೆಯಾಗುತ್ತಾರೆ. ಇದು ಇಲ್ಲಿನ ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಪರಿಶ್ರಮ ಎಷ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಕ್ಕಳನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಮ್ಮ, ಉಪಾಧ್ಯಕ್ಷ ಕಲ್ಲೇಶ್, ಸದಸ್ಯರಾದ ಕರಿಬಸಪ್ಪ, ಬಸಣ್ಣ, ಮಾಜಿ ಗ್ರಾಪಂ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಸವಿತಾ, ಮುಖಂಡರಾದ ನಸರುಲ್ಲ, ಸಿರಾಜ್, ಶಾಲಾ ಮುಖ್ಯೋಪಾಧ್ಯಾಯ ಸೋಮಶೇಖರಪ್ಪ ಇನ್ನಿತರರಿದ್ದರು.- - -
ಕೋಟ್ ಆನಗೋಡು ಸರ್ಕಾರಿ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಇದೆ. 9 ಮತ್ತು 10 ತರಗತಿ ಆರಂಭಿಸಿ ಶಾಲೆ ಮೇಲ್ದರ್ಜೇಗೆ ಏರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರೌಢಶಾಲೆಯನ್ನಾಗಿ ಮಾಡುತ್ತೇನೆ. ಪ್ರತ್ಯೇಕ ಬಿಸಿಯೂಟ ಕೊಠಡಿ, ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳ ಕಲ್ಪಿಸುತ್ತೇನೆ- ಕೆ.ಎಸ್. ಬಸವಂತಪ್ಪ, ಶಾಸಕ
- - - -8ಕೆಡಿವಿಜಿ31: ದಾವಣಗೆರೆ ತಾ. ಆನಗೋಡು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.