ಆಡಂಬರ ಬೇಡ, ಸರಳ ಜೀವನ ನಡೆಸಿ: ಸುನಂದ

| Published : Mar 28 2025, 12:33 AM IST

ಸಾರಾಂಶ

ಗುಂಡ್ಲುಪೇಟೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರತಿ ಕುಟುಂಬದಲ್ಲೂ ಆಡಂಬರದ ಆಚರಣೆ ನಿಲ್ಲಿಸಿ, ಸರಳವಾಗಿ ಬದುಕುವುದನ್ನು ಕಲಿಯಬೇಕು ಎಂದು ರೈತಸಂಘದ ನಾಯಕಿ ಸುನಂದ ಜಯರಾಂ ಸಲಹೆ ನೀಡಿದರು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ಕುರಿತು ವಿಚಾರ ಮಂಡಿಸಿ ಮಾತನಾಡಿದರು. ಮಹಿಳೆಯರು ಮೂಢ ನಂಬಿಕೆಗಳಿಂದ ಹೊರಗೆ ಬಂದು ಜೀವನ ಕಟ್ಟಿ ಕೊಳ್ಳಬೇಕು. ಸಮಾಜದಲ್ಲಿ ಹುಟ್ಟಿನಿಂದ ಹಿಡಿದು ಸತ್ತ ನಂತರದಲ್ಲೂ ತಿಥಿ ಹೆಸರಿನಲ್ಲಿ ಆಚರಣೆ ಆಚರಿಸುವ ಮೂಲಕ ಸಮಾಜದಲ್ಲಿ ಇನ್ನೂ ಮೌಢ್ಯತೆಯಿಂದ ತುಂಬಿದೆ ಎಂದರು.

ಜನರು ವಾಸ್ತವದ ಬಗ್ಗೆ ಅರಿತುಕೊಳ್ಳಬೇಕು. ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಹಾಗೂ ಇತರರಿಗೆ ಸಹಕಾರ ನೀಡಬೇಕು. ಬೇರೆಯವರ ಮುಂದೆ ಕೈ ಚಾಚುವುದನ್ನು ಮೊದಲು ಬಿಡಬೇಕು. ರೈತರು ಕ್ವಿಂಟಾಲುಗಟ್ಟಲೇ ದವಸ, ಧಾನ್ಯ ಬೆಳೆದರೂ ಸೊಸೈಟಿ ಅಕ್ಕಿಗಾಗಿ ಕೈ ಚಾಚುವುದು ಸ್ವಾಭಿಮಾನಕ್ಕೆ ಧಕ್ಕೆ ತರುತ್ತದೆ ಎಂದರು. ರಾಜಕೀಯ ಹೊರತು ಪಡಿಸಿ ಸ್ವಾಭಿಮಾನದ ಬದುಕನ್ನು ಮಹಿಳೆಯರು ಕಲಿಯಬೇಕು. ಮನೆಯಿಂದ ಹೊರಗೆ ಸ್ವ ಇಚ್ಛೆಯಂತೆ ಹೋಗಬೇಕೆಂದುಕೊಂಡ ಕಡೆ ಹೋಗಿ ಬರುವ ಸ್ವಾತಂತ್ರ‍್ಯ ಹೊಂದಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ ಎಂದರು.

ಹೆಣ್ಣು ಮಕ್ಕಳು ಕುಟುಂಬ ನಿರ್ವಹಣೆಯನ್ನು ಉತ್ತಮವಾಗಿ ಮಾಡುವುದರಿಂದಲೇ ಗಂಡಸರು ನೆಮ್ಮದಿಯಾಗಿ ಜೀವನ ನಡೆಸಲು ಸಾಧ್ಯ. ಹಾಗೆಯೇ ಕೆಲವು ಗಂಡಸರನ್ನು ಹೊರತುಪಡಿಸಿ ಪುರುಷರು ಸಹಕಾರ ನೀಡುವುದರಿಂದಲೇ ಹೆಂಗಸರು ಸಾಧನೆ ಮಾಡಲು ಸುಲಭವಾಗುತ್ತಿದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಿದಂಬರ ಮಾತನಾಡಿ, ಮಕ್ಕಳಿಗೆ 18 ವರ್ಷ ತುಂಬುವವರೆಗೆ ಬಾಲ್ಯವಿವಾಹ ಮಾಡುವ ಮೂಲಕ ಮಕ್ಕಳ ಭವಿಷ್ಯವನ್ನು ತಂದೆ-ತಾಯಿಗಳೇ ಹಾಳು ಮಾಡುತ್ತಿದ್ದಾರೆ. ಬಾಲ್ಯ ವಿವಾಹದಿಂದ ಮಕ್ಕಳು ಮಾನಸಿಕ ದುರ್ಬಲತೆಗೆ ಒಳಗಾಗುತ್ತಾರೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ ಮಾತನಾಡಿ, ಸಂಘಟನೆ ಮತ್ತು ಶಿಕ್ಷಣ ಮಹಿಳೆಯರಿಗೆ ಶಕ್ತಿಯನ್ನು ನೀಡುತ್ತದೆ. ಸ್ತ್ರೀ ಶಕ್ತಿ ಸಂಘಟನೆಗಳು ಪ್ರಾರಂಭವಾದ ಹೊಸತರಲ್ಲಿ ಮಹಿಳೆಯರು ಹೊರಗಡೆ ಬರಲು ಹಿಂಜರಿಯುತ್ತಿದ್ದರು. ಸಂಘಟನೆಯ ಶಕ್ತಿಯಿಂದ ಮಹಿಳೆಯರು ಸಂಘಟನೆಯ ಎಂತಹ ಕೆಲಸವನ್ನಾದರೂ ಮಾಡಲು ಸೈ ಎಂದು ತೋರಿಸಿದ್ದಾರೆ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆರೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಭಾರತ ದೇಶದಲ್ಲಿ ಸಾಧನೆ ಮಾಡಿದ ವೀರ ಮಹಿಳೆಯರು ರಾಜಕೀಯ ರಂಗದಲ್ಲಿ ಹೆಸರು ಮಾಡಿದವರು ಹಾಗೂ ಸುನಿತ ವಿಲಿಯಮ್ಸ್‌ರಂತ ಅನೇಕ ಮಹಿಳೆಯರ ಸಾಧನೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಹೇಮಾವತಿ,ತಾಲೂಕು ಆರೋಗ್ಯಾಧಿಕಾರಿ ಡಾ. ಆಲಿಂ ಪಾಷಾ ಬಿ.ಎಚ್, ತಾಪಂ ಎಇಒ ಹಿತೇಶ್,ಗ್ರಾಮೀಣ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಜ್ಯೂಸ್ ವಿ.ಕೆ,ನಿರ್ದೇಶಕಿ ಸರಸ್ವತಿ ಸೇರಿದಂತೆ ಮಹಿಳೆಯರು ಇದ್ದರು.

ನ್ಯಾಯಾಧೀಶರಿಂದ ಚಾಲನೆ:

ತಾಲೂಕು ಕಚೇರಿಯಿಂದ ಹೊರಟ ಜಾತಾಗೆ ಹಿರಿಯ ಸಿವಿಲ್‌ ನ್ಯಾಯಾಧೀಶ ಬಸವರಾಜ ತಳವಾರ ಹಸಿರು ನಿಶಾನೆ ತೋರಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಕುಮಾರ್‌ ಜಿ.ಜೆ ಹಾಗೂ ಅಧಿಕಾರಿಗಳು ಇದ್ದರು.