ಕಾಣೆಯಾದ ಮಕ್ಕಳ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸದಿರಿ: ಪ್ರದೀಪ ಗುಂಟಿ

| Published : Jul 29 2025, 01:00 AM IST

ಕಾಣೆಯಾದ ಮಕ್ಕಳ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸದಿರಿ: ಪ್ರದೀಪ ಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಣೆಯಾದ ಮಕ್ಕಳ ತನಿಖೆಯಲ್ಲಿ ನಿರ್ಲಕ್ಷ್ಯ ಮಾಡಬೇಡಿ ಮತ್ತು ಪರಿಣಾಮಕಾರಿಯಾಗಿ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕಾಣೆಯಾದ ಮಕ್ಕಳ ತನಿಖೆಯಲ್ಲಿ ನಿರ್ಲಕ್ಷ್ಯ ಮಾಡಬೇಡಿ ಮತ್ತು ಪರಿಣಾಮಕಾರಿಯಾಗಿ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿ ಸಭಾಂಗಣದಲ್ಲಿ ಕಾಣೆಯಾದ ಮಕ್ಕಳ ಪತ್ತೆ ಹಚ್ಚಲು ರಚಿಸಿರುವ ವಿಶೇಷ ಕಾರ್ಯಪಡೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಅಪಹರಣ, ನಾಪತ್ತೆ, ಸ್ವಯಂ ಪ್ರೇರಿತವಾಗಿ ಮತ್ತು ಪ್ರೀತಿಸಿ ಮನೆಯನ್ನು ಬಿಟ್ಟು ಹೋಗಿರುವ 18 ವರ್ಷದೊಳಗಿನ ಮಕ್ಕಳು ಕಾಣೆಯಾಗಿರುವ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ಮೌಲ್ಯಮಾಪನ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

2018 ರಿಂದ 2025ರ ಜುಲೈವರೆಗೆ ಬಾಕಿ ಉಳಿದಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಪ್ರಕರಣಗಳು ಮುಗಿಸುವಂತೆ ತಿಳಿಸಿದರು.

ಕಾಣೆಯಾದ ಮಕ್ಕಳ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆದು ಅವರನ್ನು ಟ್ರ್ಯಾಕ್ ಮಾಡಬೇಕು. ಮೊಬೈಲ್‌ನಿಂದ ಕೊನೆಯ ಕರೆಯ ಲೊಕೇಶನ್ ಟ್ರ್ಯಾಕಿಂಗ್ ಮಾಡಿ ದೇಶದ ಯಾವುದೇ ಸ್ಥಳದಲ್ಲಿದ್ದರೂ ಕರೆ ತಂದು ಪೋಷಕರಿಗೆ ಒಪ್ಪಿಸಬೇಕು.

ಮಕ್ಕಳ ಕಾಣೆಯಾದ ಪ್ರಕರಣ ದಾಖಲಿಸಿಕೊಂಡ 30 ದಿನಗಳಲ್ಲಿ ಪ್ರಕರಣ ಪೂರ್ಣಗೊಳಿಸಬೇಕು ಮತ್ತು ಪೋಲಿಸ್ ಅಧಿಕಾರಿಗಳು ಒಂದು ವೇಳೆ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿ ದರೆ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ, ಶಾಲಾ-ಕಾಲೇಜು ಓದುತ್ತಿರುವ ಮಕ್ಕಳ ಕಾಣೆಯಾದ ಅವರ ಜೊತೆ ಓದುತ್ತಿರುವ ಸ್ನೇಹಿತರನ್ನು ಭೇಟಿ ಮಾಡಿ ಅವರಿಗೆ ತಿಳಿದಿ ರುವ ಮಾಹಿತಿಗಳನ್ನು ಪಡೆಯಬೇಕು ಮತ್ತು ಪೋಷಕರಿಂದ ಮೂಲ ಮಾಹಿತಿಗಳನ್ನು ಪಡೆದು ಆದಷ್ಟು ಬೇಗ ಮಕ್ಕಳನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಬನಸೋಡೆ ಮಾತನಾಡಿ, ಮಕ್ಕಳನ್ನು ಅಪಹರಣ ಮಾಡಿ ಭಿಕ್ಷಾಟನೆ, ವೇಶ್ಯವಾಟಿಕೆ ಅಂತಹ ಸಮಾಜದ ಕೆಟ್ಟ ಚಟುವಟಿಕೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂತಹ ಕೆಟ್ಟ ಚಟುವಟಿಕೆಗಳಿಂದ ಮಕ್ಕಳನ್ನು ರಕ್ಷಿಸಿ ಅವರ ಬಾಲ್ಯ ವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀಧರ್ ಎಚ್., ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೂಪಾ ಕೋಟೆಗೌಡರ್, ಶಾಲಾ ಶಿಕ್ಷಣ ಉಪ ನಿರ್ದೇಶಕರಾದ ಸಲಿಂ ಪಾಷಾ, ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷ ಶಿವಪ್ಪ, ಬಾಲ ನ್ಯಾಯಾಲಯ ಸದಸ್ಯೆ ಧನ್ವಂತರಿ ಸೇರಿದಂತೆ ಎನ್‌ಜಿಒಗಳ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿದಂತೆ ಕಾಣೆಯಾದ ಮಕ್ಕಳ ಪೋಷಕರು ಉಪಸ್ಥಿತರಿದ್ದರು.