ಭಿಕ್ಷೆ ಬೇಡ, ವೈಜ್ಞಾನಿಕ ಪರಿಹಾರ ಕೊಡಿ: ಚಂದ್ರಶೇಖರ್

| Published : May 24 2024, 12:48 AM IST

ಭಿಕ್ಷೆ ಬೇಡ, ವೈಜ್ಞಾನಿಕ ಪರಿಹಾರ ಕೊಡಿ: ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಬರದಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ೨ ಸಾವಿರ ರು. ಭಿಕ್ಷೆ ನೀಡದೆ, ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪ್ರತಿ ಎಕರೆಗೆ ೨೫ ಸಾವಿರ ರು. ಪರಿಹಾರ ನೀಡುವಂತೆ ರೈತಸಂಘ (ಮೂಲಸಂಘಟನೆ) ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ಮಂಡ್ಯ

ಬರದಿಂದ ಬೆಳೆ ನಷ್ಟಕ್ಕೆ ಒಳಗಾಗಿರುವ ರೈತರಿಗೆ ೨ ಸಾವಿರ ರು. ಭಿಕ್ಷೆ ನೀಡದೆ, ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪ್ರತಿ ಎಕರೆಗೆ ೨೫ ಸಾವಿರ ರು. ಪರಿಹಾರ ನೀಡುವಂತೆ ರೈತಸಂಘ (ಮೂಲಸಂಘಟನೆ) ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರವನ್ನು ಸಮರ್ಪಕವಾಗಿ ತಲುಪಿಸಬೇಕು ಮತ್ತು ಪಾಳು ಬಿಟ್ಟ ರೈತರ ಜಮೀನಿಗೂ ಎಕರೆಗೆ ೨೫ ಸಾವಿರ ರು. ಪರಿಹಾರ ನೀಡುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.ರಾಜ್ಯದಲ್ಲಿ ಭೀಕರ ಬರಗಾಲದಿಂದ ಕೃಷಿಕ ಮತ್ತು ಕೃಷಿ ಅವಲಂಬಿತ ಕೃಷಿ ವಲಯದಿಂದ ಅಪಾರ ಹಾನಿಗೊಳಗಾದ ರೈತರು ಚೇತರಿಕೆ ಕಾಣದೆ ಸಂಕಷ್ಟ ಅನುಭವಿಸುತ್ತಿದ್ದು, ರೈತರ ನೆರವಿಗೆ ನಿಲ್ಲಬೇಕಾದ ಸರ್ಕಾರಗಳು ಸಮನ್ಯಯ ಕೊರತೆಯಿಂದ ಬರ ಪರಿಹಾರದ ಹಣ ಸಕಾಲದಲ್ಲಿ ಪಾವತಿ ಮಾಡದೆ ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು. 50 ಸಾವಿರ ಪರಿಹಾರ ನೀಡಿ:

ಜಿಲ್ಲೆಯಲ್ಲಿ ಬಹುತೇಕ ಕಬ್ಬು ಬೆಳೆ ಒಣಗಿದ್ದು, ಜೀವನಾಧಾರಿತ ಫಸಲು ಕಳೆದುಕೊಂಡು ರೈತರು ಪರಿತಪಿಸುತ್ತಿದ್ದಾರೆ. ಎಕರೆವಾರು ಇಳುವರಿ ಕಡಿಮೆಯಾಗಿದ್ದು, ಈ ಹಂಗಾಮಿನ ಕಬ್ಬಿನ ಬೆಳೆಗೆ ಕನಿಷ್ಟ ೫೦ ಸಾವಿರ ರು. ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು. ಒಂದು ಮರಕ್ಕೆ 25 ಸಾವಿರ ಕೊಡಿ:

ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಮಾವು, ಸಪೋಟ ಇತರೆ ತೋಟಗಾರಿಕೆ ಬೆಳೆಗಳು ಒಣಗಿದ್ದು, ಈ ತೋಟಗಾರಿಕೆ ಬೆಳೆಗಳು ದೈನಂದಿನ ಜೀವನಕ್ಕೆ, ರೈತರಿಗೆ ಸಹಾಯವಾಗಿದ್ದು, ಪ್ರಸ್ತುತ ಬರಗಾಲದಿಂದ ಹಾಗೂ ನೀರಿನ ಕೊರತೆಯಿಂದ ಸಂಪೂರ್ಣವಾಗಿ ನಾಶವಾಗಿವೆ, ತೆಂಗು ಬೆಳೆಗೆ ಜೀವಿತಾವಧಿಯ ಲೆಕ್ಕದಲ್ಲಿ ಒಂದು ಮರಕ್ಕೆ ೨೫ ಸಾವಿರ ರು. ಪರಿಹಾರ ನೀಡುವಂತೆ ಒತ್ತಾಯಿಸಿದರು.

ಪ್ರತೀ ಲೀ.ಹಾಲಿಗೆ 10 ರು ಹೆಚ್ಚಳ ಮಾಡಿ:

ಹೈನುಗಾರಿಕೆಯಲ್ಲಿ ಅವಲಂಬಿತರಾಗಿರುವ ರೈತರಿಗೆ ಕಳೆದ 6 ತಿಂಗಳಿಂದ ನೀಡದಿರುವ ಸರ್ಕಾರದ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಸರ್ಕಾರದ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ ಹಾಲಿಗೆ ೧೦ ರು. ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. ವಿಶ್ವೇಶ್ವರಯ್ಯ ನಾಲೆಯ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಕಾಲದಲ್ಲಿ ಬೆಳೆಗಳನ್ನು ಬೆಳೆಯಲು ನೀರನ್ನು ಒದಗಿಸಲು ಕ್ರಮ ವಹಿಸಬೇಕು ಎಂದ ಅವರು, ಈ ಹಿಂದೆ ತಮಿಳುನಾಡಿಗೆ ನೀರು ಹರಿಸಲು ತೋರಿದ ಆಸಕ್ತಿಯನ್ನು ರಾಜ್ಯ ಸರ್ಕಾರ ನಮ್ಮ ರೈತರ ಬಗ್ಗೆ ತೋರಿಸಲಿಲ್ಲ ಎಂದು ಕಿಡಿಕಾರಿದರು. ನಾಲೆಯಲ್ಲಿ ನೀರು ಹರಿಸಿದ್ದರೆ ತೆಂಗು, ಅಡಿಕೆ ಇತರೆ ತೋಟಗಾರಿಕೆ ಬೆಳೆಗಳು ಸ್ವಲ್ಪ ಮಟ್ಟಿಗಾದರು ಉಳಿಯುತ್ತಿದ್ದವು. ಹಲವು ಕಡೆಗಳಲ್ಲಿ ಬಿಸಿಲ ಬೇಗೆಯಿಂದ ಮರಗಳ ಸುಳಿಗಳೇ ಒಣಗಿ ಸಂಪೂರ್ಣ ಮರವೇ ಹಾನಿಗೊಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆರೆಗಳ ಹೂಳು ತೆಗೆಯಲು ಪ್ರತಿ ಕೆರೆಗೆ ೪ ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಆದರೆ ಅದನ್ನು ವೈಜ್ಞಾನಿಕ ರೀತಿಯಲ್ಲಿ ರೈತರಿಗೆ ತಿಳುವಳಿಕೆ ಮೂಡಿಸಿ ಹೂಳು ತೆಗೆಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಘದ ಪದಾಕಾರಿಗಳಾದ ಎಸ್.ಮಂಜೇಶ್‌ಗೌಡ, ನಾಗೇಂದ್ರಸ್ವಾಮಿ ಕೆ., ಬೋರಲಿಂಗೇಗೌಡ, ಸೂ.ಶಿ. ಪ್ರಕಾಶ, ಶಿವಲಿಂಗಯ್ಯ, ವೆಂಕಟೇಶ, ಕೆ. ರಾಮಲಿಂಗೇಗೌಡ ಇತರರು ಗೋಷ್ಠಿಯಲ್ಲಿದ್ದರು.