ಕೊಡಗಿನಲ್ಲಿ ತಡವಾಗಿಯೂ ಸುರಿಯಿತು ವಾಡಿಕೆಗಿಂತ ಹೆಚ್ಚು ಮಳೆ

| Published : May 24 2024, 12:48 AM IST

ಸಾರಾಂಶ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ತಡವಾಗಿಯಾದರೂ ವಾಡಿಕೆಗಿಂತ ಹೆಚ್ಚಾಗಿ ಸುರಿಯುವ ಮೂಲಕ ಹರ್ಷ ಮೂಡಿಸಿದೆ. ಮೇ ತಿಂಗಳಿನಲ್ಲಿ ಅಧಿಕ ಮಳೆಯಾಗಿದೆ.

ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ಇನ್ನೇನು ಮುಂಗಾರು ಮಳೆಗೆ ಕೆಲವೇ ದಿನಗಳು ಬಾಕಿ ಇದ್ದು, ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ತಡವಾಗಿಯಾದರೂ ವಾಡಿಕೆಗಿಂತ ಹೆಚ್ಚಾಗಿ ಸುರಿಯುವ ಮೂಲಕ ಹರ್ಷ ಮೂಡಿಸಿದೆ. ಮೇ ತಿಂಗಳಲ್ಲೇ ಅತ್ಯಧಿಕ ಮಳೆ ಪ್ರಮಾಣ ದಾಖಲಾಗಿದೆ.

ಜನವರಿ ತಿಂಗಳಿನಿಂದ ಇಲ್ಲಿಯ ವರೆಗೆ 207 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 265 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 157 ಮಿ.ಮೀ ಮಳೆಯಾಗಿತ್ತು. ಮೇ ತಿಂಗಳ ಅಂತ್ಯಕ್ಕೆ ವಾಡಿಕೆ ಮಳೆ 94 ಮಿ.ಮೀ ಆಗಬೇಕಿದ್ದು, ಈ ಬಾರಿ ಸುಮಾರು 226 ಮಿ.ಮೀ ದಾಖಲೆಯ ಮಳೆಯಾಗಿರುವುದು ವಿಶೇಷ. ಕಳೆದ ವರ್ಷ ಇದೇ ಸಮಯದಲ್ಲಿ 112 ಮಿ.ಮೀ ಮಳೆಯಾಗಿತ್ತು. ಮೇ ತಿಂಗಳಲ್ಲಿ ಮಾತ್ರ ವಾಡಿಕೆಗಿಂತ ಸುಮಾರು 144ರಷ್ಟು ಮಳೆ ಹೆಚ್ಚಳವಾಗಿದೆ.

ಜನವರಿ ತಿಂಗಳಲ್ಲಿ ವಾಡಿಕೆ ಮಳೆ 3.2 ಮಿಮೀ, 18 ಮಿ.ಮೀ ಮಳೆಯಾಗಿದ್ದು, 487ರಷ್ಟು ಹೆಚ್ಚಳವಾಗಿತ್ತು. ಫೆಬ್ರವರಿ ತಿಂಗಳಲ್ಲಿ ವಾಡಿಕೆ ಮಳೆ 5 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಈ ತಿಂಗಳು ಮಳೆಯಾಗದ ಕಾರಣ ಶೇ.100ರಷ್ಟು ಕುಂಠಿತಗೊಂಡಿತು. ಮಾರ್ಚ್ ತಿಂಗಳಲ್ಲಿ 21.5 ಮಿ.ಮೀ ಮಳೆಯಾಗಬೇಕಿದ್ದು, 1.3 ಮಿ.ಮೀ ಮಾತ್ರ ಮಳೆಯಾಗಿತ್ತು. ಏಪ್ರಿಲ್ ತಿಂಗಳಲ್ಲಿ 84 ಮಿ.ಮೀ ಮಳೆಯಾಗಬೇಕಿದ್ದು, 19 ಮಿ.ಮೀ ಮಳೆ ಮಾತ್ರ ಸುರಿದಿತ್ತು.

ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಸುರಿಯಬೇಕಾದ ವಾಡಿಕೆ ಮಳೆ ಕೈಕೊಟ್ಟ ಕಾರಣದಿಂದಾಗಿ ಕಾಫಿ ಗಿಡಗಳು ಹಾಗೂ ಕಾಳು ಮೆಣಸು ಬಳ್ಳಿಗಳು ಸೊರಗಿ ಹೋಗಿದ್ದವು. ಕುಡಿಯುವ ನೀರಿಗೂ ಕೂಡ ಸಮಸ್ಯೆಯಾಗಿತ್ತು. ಇದಲ್ಲದೆ ಹಲವು ಕೃಷಿಗೆ ರೈತರು ಕಂಗಾಲಾಗಿದ್ದರು. ಜಿಲ್ಲೆಯ ಕಾವೇರಿ ನದಿ ಸೇರಿದಂತೆ ಹೊಳೆ, ಕೆರೆಗಳು ಕೂಡ ಬತ್ತಿ ಹೋಗಿತ್ತು. ಆದರೆ ಮೇ ತಿಂಗಳಲ್ಲಿ ಜಿಲ್ಲೆಯ ಹಲವು ಕಡೆ ಭರ್ಜರಿ ಮಳೆಯಾಗಿದೆ. ಇನ್ನೂ ಮಳೆಯಾಗುವ ಸೂಚನೆ ಇರುವುದರಿಂದ ತಡವಾಗಿಯಾದರೂ ಮಳೆ ವಾಡಿಕೆಗಿಂತ ಹೆಚ್ಚು ಸುರಿಯುವ ಮೂಲಕ ಸಮಾಧಾನ ತರಿಸಿದೆ.

ತಾಲೂಕುವಾರು ಗಮನಿಸಿದಾಗ ಕುಶಾಲನಗರ ತಾಲೂಕಿನಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಕುಶಾಲನಗರ ತಾಲೂಕಿನಲ್ಲಿ ಜನವರಿ ತಿಂಗಳಿನಿಂದ ಇಲ್ಲಿಯ ವರೆಗೆ 157 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 316 ಮಿ.ಮೀ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ವಾಡಿಕೆ ಮಳೆ 188 ಮಿ.ಮೀ ಸುರಿಯಬೇಕಿದ್ದು, 333 ಮಿ.ಮೀ ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 169 ವಾಡಿಕೆ ಮಳೆಯಾಗಬೇಕಿದ್ದು, 159 ಮಿ.ಮೀ ಮಳೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲಿ 201 ಮಿ.ಮೀ ಮಳೆಯಾಗಬೇಕಿದ್ದು, 250 ಮಿ.ಮೀ ಮಳೆಯಾಗಿದೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ 190 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 215 ಮಿ.ಮೀ ಮಳೆಯಾಗಿದೆ.

ಅಮ್ಮತ್ತಿಯಲ್ಲಿ ಅಧಿಕ ಮಳೆ : ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿದೆ. ಜನವರಿ ತಿಂಗಳಿನಿಂದ ಮಾರ್ಚ್ 23ರ ವರೆಗೆ 159 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 316 ಮಿ.ಮೀ ಮಳೆಯಾಗಿದ್ದು, ಶೇ.99ರಷ್ಟು ಹೆಚ್ಚಳವಾಗಿದೆ. ಪೊನ್ನಂಪೇಟೆ ತಾಲೂಕಿನ ಹುದಿಕೇರಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಸುರಿದಿದೆ. 193 ಮಿ.ಮೀ ಮಳೆಯಾಗಬೇಕಿದ್ದು, 87.5 ಮಿ.ಮೀ ಮಳೆ ಸುರಿದು, ಶೇ.55ರಷ್ಟು ಕೊರತೆ ಕಂಡುಬಂದಿದೆ. ಉಳಿದಂತೆ ಮಡಿಕೇರಿ ಹೋಬಳಿ 284 ಮಿ.ಮೀ, ಭಾಗಮಂಡಲ 378.3, ನಾಪೋಕ್ಲು,

315.8, ಸಂಪಾಜೆ 351.8, ಸೋಮವಾರಪೇಟೆ 172.7, ಕೊಡ್ಲಿಪೇಟೆ 246.9, ಶನಿವಾರಸಂತೆ 170.7, ಶಾಂತಳ್ಳಿ 181.6, ಸುಂಟಿಕೊಪ್ಪ 208.4 , ವಿರಾಜಪೇಟೆ 300.5, ಕುಶಾಲನಗರ 206.7, ಪೊನ್ನಂಪೇಟೆ 249.0, ಬಾಳೆಲೆ 224.5, ಶ್ರೀಮಂಗಲ 266.8 ಮಿ.ಮೀ ಮಳೆಯಾಗಿದೆ.