ಬಿಜೆಪಿ ಸುಳ್ಳು ಭರವಸೆ ನಂಬಬೇಡಿ, ಕಾಂಗ್ರೆಸ್‌ ಗ್ಯಾರಂಟಿ ನಂಬಿ

| Published : Mar 27 2024, 01:13 AM IST

ಬಿಜೆಪಿ ಸುಳ್ಳು ಭರವಸೆ ನಂಬಬೇಡಿ, ಕಾಂಗ್ರೆಸ್‌ ಗ್ಯಾರಂಟಿ ನಂಬಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಿಜೆಪಿಯ ಸುಳ್ಳು ಭರವಸೆ ನಂಬಬೇಡಿ, ಕಾಂಗ್ರೆಸ್‌ ಐದು ಗ್ಯಾರಂಟಿ ಅನುಷ್ಠಾನಗೊಳಿಸಿದ್ದು ಮುಂದಿನ ಲೋಕಸಭೆ ಚುನಾವಣೇಲಿ ಕಾಂಗ್ರೆಸ್‌ ಬೆಂಬಲಿಸಿ ಎಂದು ಕ್ಷೇತ್ರದ ಜನರಲ್ಲಿ ಕಾಂಗ್ರೆಸ್‌ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಮನವಿ ಮಾಡಿದರು.

ತಾಲೂಕಿನ ಹಾಲಹಳ್ಳಿ ಗ್ರಾಮದ ಬೊಗ್ಗನಪುರ ಫಾರಂನಲ್ಲಿ ವಿಧಾನಸಭಾ ಕ್ಷೇತ್ರದ ಬಿಎಲ್‌ಎ ೨ ಸಂಯೋಜಕರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕಸಭೆ ಚುನಾವಣೆಯನ್ನು ಕಾರ್ಯಕರ್ತರು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಅಲೆ ಇತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದೆ ಎಂದರು.

ದಿ.ಎಚ್.ಎಸ್. ಮಹದೇವಪ್ರಸಾದ್‌ ಶಾಸಕರಾದ ನಂತರ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಹದೇವಪ್ರಸಾದ್‌ ಅವರು ಬೆಂಬಲಿಸಿದ ಅಭ್ಯರ್ಥಿಗಳಿಗೆ ಹೆಚ್ಚಿನ ಮತಗಳು ಬಂದಿವೆ. ನಾನು ನನಗೆ ಬಿದ್ದ ಮತಕ್ಕಿಂತಲೂ ಹೆಚ್ಚಿನ ಮತಗಳು ಲೋಕಸಭೆ ಅಭ್ಯರ್ಥಿಗೆ ಬರಬೇಕು ಎಂದರು. ಲೋಕಸಭೆ ಚುನಾವಣೆಗಳಲ್ಲಿ ಮಹದೇವಪ್ರಸಾದ್‌ ಬೆಂಬಲಿಸಿದಾಗ ಎ. ಸಿದ್ದರಾಜು, ವಿ. ಶ್ರೀನಿವಾಸ್‌ ಪ್ರಸಾದ್‌, ಎಂ. ಶಿವಣ್ಣ, ಧ್ರುವನಾರಾಯಣ ಗೆದ್ದಿದ್ದಾರೆ. ಗುಂಡ್ಲುಪೇಟೆ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ ಹಾಗೂ ಶಾಂತಿಯ ತೋಟದಲ್ಲಿ ಲೋಕಸಭೆ ಸಂಭಾವ್ಯ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಬೋಸ್‌ಗೂ ಹೆಚ್ಚಿನ ಮತಗಳೂ ಬರಲು ಪಕ್ಷದ ಮುಖಂಡರು ಶ್ರಮಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಬೋಸ್‌ ಜನರ ಕೈಗೆ ಸಿಕ್ತಾರೆ:

ಲೋಕಸಭೆಗೆ ಸುನೀಲ್‌ ಬೋಸ್‌ ಅಭ್ಯರ್ಥಿಯಾಗೋದು ಬಹುತೇಕ ಖಚಿತವಾಗಿದೆ. ಸುನೀಲ್‌ ಬೋಸ್‌ ಜನರ ಕೈಗೆ ಸಿಗಲ್ಲ ಎಂದು ಬಿಜೆಪಿಗರು ಬೊಬ್ಬೆ ಹಾಕ್ತಾರೆ. ಅದಕ್ಕೆಲ್ಲ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮತದಾರರು ತಲೆ ಕೆಡಿಸಿಕೊಳ್ಳದೆ ಸುನೀಲ್‌ ಬೋಸ್‌ಗೆ ಬೆಂಬಲಿಸಿ ಎಂದರು. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ. ಮರಿಸ್ವಾಮಿ, ಗುಂಡ್ಲುಪೇಟೆ ಕ್ಷೇತ್ರದ ಉಸ್ತುವಾರಿ ಎಚ್.ಸಿ. ಬಸವರಾಜು, ಮಾಜಿ ಸಂಸದ ಎ. ಸಿದ್ದರಾಜು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್. ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್‌, ಜಿಪಂ ಮಾಜಿ ಅಧ್ಯಕ್ಷ ಮುನಿರಾಜು, ಕೆಪಿಸಿಸಿ ಮಾಜಿ ಸದಸ್ಯ ಜಿ.ಕೆ. ನಾಜೀಮುದ್ದೀನ್‌, ಬ್ರಾಹ್ಮಣ ಸಮಾಜದ ಮುಖಂಡ ಪಂಜನಹಳ್ಳಿ ವಸಂತಪ್ಪ, ಜಿಪಂ ಮಾಜಿ ಸದಸ್ಯ ನಿಟ್ರೆ ನಾಗರಾಜು, ಪುರಸಭೆ ಮಾಜಿ ಸದಸ್ಯ ಲಿಂಗರಾಜು ಮಾತನಾಡಿದರು.

ಸಭೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ. ರಾಜಶೇಖರ್‌, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್. ಮಹೇಶ್‌, ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು,ಜಿಪಂ ಮಾಜಿ ಸದಸ್ಯರಾದ ಪಿ. ಚನ್ನಪ್ಪ,ಬಿ.ಕೆ. ಬೊಮ್ಮಯ್ಯ, ಕೆ. ಶಿವಸ್ವಾಮಿ, ಹಂಗಳ ನಾಗರಾಜು, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್. ಬಸವರಾಜು ಸೇರದಂತೆ ಇತರರು ಇದ್ದರು.

ಅಭಿವೃದ್ಧಿ ಕಂಡು ನಿರಂಜನ್‌ ಹತಾಶ: ಗಣೇಶ್‌ ವ್ಯಂಗ್ಯ

ಗುಂಡ್ಲುಪೇಟೆ: ಕ್ಷೇತ್ರದಲ್ಲಿ ೧೦೦ ಕೋಟಿಗೂ ಹೆಚ್ಚು ಅನುದಾನ ೧೦ ತಿಂಗಳ ಅವಧಿಯಲ್ಲಿ ತಂದಿದ್ದೇನೆ. ಜೊತೆಗೆ ಐದು ಗ್ಯಾರಂಟಿ ಅನುಷ್ಠಾನಗೊಂಡಿವೆ ಇದನ್ನು ಸಹಿಸದ ವಿಪಕ್ಷದವರು ನನ್ನ ಮೇಲೆ ವಿನಾಕಾರಣ ಟೀಕೆ ಮಾಡುವ ಮೂಲಕ ಹತಾಶರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಹೇಳಿದರು. ಮಾಜಿ ಶಾಸಕ ನಿರಂಜನಕುಮಾರ್‌ ಹೆಸರೇಳದೆ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ನಾನು ಕ್ಷೇತ್ರದ ಶಾಸಕನಾದ ನಂತರ ೧೦೦ ಕೋಟಿಗೂ ಹೆಚ್ಚು ಅನುದಾನ ಬಂದಿರುವುದು ಸತ್ಯವಾಗಿದ್ದರೂ ನನ್ನ ಕಾಲದ ಅನುದಾನ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್‌ ಶಾಸಕರಾದ ಅವಧಿಯ ಕೊನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಬದಲಿಸಿ ಗುದ್ದಲಿ ಪೂಜೆ ಮಾಡಿದ್ದೀರಾ? ನಾನು ಹಾಗೆ ಮಾಡಿಲ್ಲ. ನಿಮ್ಮ ಮಂಜೂರಾದ ಕಾಮಗಾರಿಗಳಲ್ಲಿ ಜನರ ಬೇಡಿಕೆಯಂತೆ ಬೆರಳೆಣಿಕೆ ಕಾಮಗಾರಿ ಬದಲಾಯಿಸಿದ್ದೇನೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸರ್ಕಾರದ ಆರಂಭದ ಸಮಯದಲ್ಲಿ ಸ್ವಲ್ಪ ವಿಳಂಬವಾಗಿದ್ದು ನಿಜ. ಆದರೀಗ ಕ್ಷೇತ್ರದಲ್ಲಿ ೨೫ ಕೋಟಿ ಸಿಎಂ ವಿಶೇಷ ಅನುದಾನದಲ್ಲಿ ೬೩ ಗ್ರಾಮಗಳಲ್ಲಿ ಅನುದಾನ ಹಂಚಿ ಕೆಲಸ ಶುರುವಾಗಿದೆ. ಇದನ್ನು ಸಹಿಸದೆ ನನ್ನ ಮೇಲೆ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಕೀಳು ರಾಜಕಾರಣ ಮಾಡಲ್ಲ:

ನಿಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಗ್ರಾಮಸ್ಥರು ಪಕ್ಷಾತೀತವಾಗಿ ನಿಮ್ಮ ಬಳಿಗೆ ಬಂದರೆ ನಮ್ಮ ಪಕ್ಷಕ್ಕೆ ಬನ್ನಿ ಸಹಾಯ ಮಾಡುತ್ತೇನೆ ಎಂದು ಹೇಳಿದ್ದು ಮರೆತು ಹೋಗಿದೆಯಾ? ನನ್ನ ಬಳಿ ಇದಕ್ಕೆಲ್ಲ ಸಾಕ್ಷಿಗಳಿವೆ ಆದರೆ ನಾನು ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ ಎಂದರು.

ಸುಳ್ಳು ಹೇಳಲ್ಲ: ನಾನು ಹೇಳಿದ್ದು ಮಾಡುತ್ತೇನೆ ಹೊರತು ಕ್ಷೇತ್ರದ ಮತದಾರರಿಗೆ ಸುಳ್ಳು ಹೇಳಿ ರಾಜಕಾರಣ ಮಾಡುವುದಿಲ್ಲ. ಅಂತಹ ಪರಿಸ್ಥಿತಿ ಬಂದರೆ ರಾಜಕಾರಣವನ್ನೇ ಮಾಡಲ್ಲ. ಕ್ಷೇತ್ರದ ಜನರ ಸಮಸ್ಯೆ ಆಲಿಸಿ, ನನ್ನ ಕೈಲಾದ ನೆರವು ನೀಡುವುದು ಮಾನವೀಯತೆ ಎಂದು ನಿರಂಜನ್‌ಗೆ ತಿರುಗೇಟು ನೀಡದರು. ಕಳೆದ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ನಿಮಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಸುಖಾ ಸುಮ್ಮನೇ ಸುಳ್ಳು ಹೇಳುವ ಜೊತೆಗೆ ವಿನಾಕಾರಣ ನನ್ನ ಟೀಕಿಸಿರುವುದನ್ನು ನಿಲ್ಲಿಸಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿ ಜಾರಿಯಾಗಿವೆ ಜೊತೆಗೆ ಅಭಿವೃದ್ಧಿ ಕೆಲಸಗಳಿಗೂ ವೇಗ ಸಿಗಲಿದ್ದು ಹಾಗಾಗಿ ಲೋಕಸಭೆನೂ ಗೆಲ್ತೀವಿ ಜೊತೆಗೆ ಮುಂಬರುವ ಜಿಪಂ, ತಾಪಂ ಚುನಾವಣೇಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ತೀವಿ ಎಂದು ಶಾಸಕ ಗಣೇಶ್‌ ಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ವಿಪಕ್ಷಗಳಿಗೆ ನಿದ್ದೆ ಬರುತ್ತಿಲ್ಲ. ಬಿಜೆಪಿ ಸುಳ್ಳು ಭರವಸೆ ಹೇಳುತ್ತಿದ್ದಾರೆ ನಾವಂತೂ (ಕಾಂಗ್ರೆಸ್)‌ ನುಡಿದಂತೆ ನಡೆದು ಐದು ಗ್ಯಾರಂಟಿ ಜಾರಿಗೊಳಿಸಿದ್ದೇವೆ ಮತ ಕೇಳಲು ನೈತಿಕತೆ ನಮಗಿದೆ ಅವರಿಗಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮಗಳ ಅನುಷ್ಠಾನ ಕಂಡು ಕಾಂಗ್ರೆಸ್‌ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಬಿಜೆಪಿ ಪೊಳ್ಳು ಭರವಸೆಗೆ ಮತದಾರರು ಮಣಿಯದೆ ಕಾಂಗ್ರೆಸ್‌ ಬೆಂಬಲಿಸಿ ಎಂದರು.