ಸಾರಾಂಶ
ಎನ್‌ಡಿಎ ಮೈತ್ರಿ ಮಾಡಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ನಾವು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತೇವೆಂದು ಮಲ್ಲಿಕಾರ್ಜುನ ಖರ್ಗೆರನ್ನು ವಿರೋಧಿಸಿದ್ದ ಸಿದ್ದಾರಾಮಯ್ಯನವರನ್ನು ನಂಬಬಾರದು ಎಂದು ಬೆಂಗಳೂರು ಗ್ರಾ. ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಹೇಳಿದರು.
ಕನ್ನಡಪ್ರಭವಾರ್ತೆ ಮಾಗಡಿ
ಎನ್‌ಡಿಎ ಮೈತ್ರಿ ಮಾಡಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದಾಗ, ನಾವು ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುತ್ತೇವೆಂದು ಮಲ್ಲಿಕಾರ್ಜುನ ಖರ್ಗೆರನ್ನು ವಿರೋಧಿಸಿದ್ದ ಸಿದ್ದಾರಾಮಯ್ಯನವರನ್ನು ನಂಬಬಾರದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜನರ ತೆರಿಗೆ ಹಣದಿಂದ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆ. ಇದಕ್ಕಾಗಿ ದಲಿತರ ಅಭಿವೃದ್ಧಿಗೆ ಮೀಸಲಿಟ್ಟದ್ದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ. ನಾನು ತಳಮಟ್ಟದಿಂದ ಬಂದಿದ್ದು, ಬಡಜನರ ಕಷ್ಟ, ದುಃಖ, ದುಮ್ಮಾನಗಳನ್ನು ಹತ್ತಿರದಿಂದ ಕಂಡಿದ್ದೇನೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಬಡವರ ಪರ ಇರುತ್ತೇನೆ. ಕೇಂದ್ರದಲ್ಲಿ ಆಡಳಿತ ನಡೆಸಿದ ರಾಜಕೀಯ ಪಕ್ಷಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿಗೆ ತಂದಿದ್ದರೆ ದೇಶದಲ್ಲಿ ನಿರುದ್ಯೋಗ, ಬಡತನದಂತಹ ಸಮಸ್ಯೆಗಳು ಇರುತ್ತಿರಲಿಲ್ಲ. ದೇಶವಾಸಿಗಳು ಪಡಿತರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಇರುತ್ತಿರಲಿಲ್ಲ. ಇಂದಿಗೂ ಆಡಳಿತ ನಡೆಸುತ್ತಿರುವ ಪಕ್ಷಗಳು ಸಂವಿಧಾನದ ಆಶಯವನ್ನು ಈಡೇರಿಸಿಲ್ಲ, ಉಚಿತ ಶಿಕ್ಷಣ, ಉದ್ಯೋಗ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.
ಬೆಂಗಳೂರು ಗ್ರಾ. ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ 3 ಬಾರಿ ಸಂಸದರಾಗಿದ್ದರೂ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದಿಲ್ಲ, ಕನಿಷ್ಠ ರಸ್ತೆಗಳನ್ನು ಸರಿಪಡಿಸುವುದರಲ್ಲಿಯೂ ಸಂಸದರು ವಿಫಲರಾಗಿದ್ದಾರೆ. ಜೆಡಿಎಸ್, ಬಿಜೆಪಿ ಪಕ್ಷದವರನ್ನು ಬೈಯುವುದೇ ಡಿ.ಕೆ.ಸುರೇಶ್ ಕಾಯಕವಾಗಿದೆ. ತಮ್ಮ ಆಸ್ತಿ ಉಳಿಸಿಕೊಳ್ಳುವುದಕ್ಕೆ ಡಿ.ಕೆ.ಸುರೇಶ್ ಹರಸಾಹಸ ಪಡುತ್ತಿದ್ದಾರೆ. ಸಂಸದರು 3 ಬಾರಿಯ ಅವಧಿಯಲ್ಲಿ 10 ಸಲ ಕ್ಷೇತ್ರದ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿಲ್ಲ ಎಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂದಾನಪ್ಪ, ರಾಜ್ಯ ಕಾರ್ಯದರ್ಶಿ ನಾಗೇಶ್, ರಾಮನಗರ ಜಿಲ್ಲಾ ಸಂಯೋಜಕರ ಮಾಗಡಿ ಉಸ್ತುವಾರಿ ವೆಂಕಟಾಚಲ, ಮಹಿಳಾ ಘಟಕದ ಪಾರ್ವತಮ್ಮ ಅನು, ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಜಿ.ಉ.ಮಹದೇವ್, ಜಿಲ್ಲಾ ಸಂಯೋಜಕರು ಉಮೆಶ್ ಮತ್ತು ಸ್ವಾಮಿ, ಮಾಗಡಿ ಅಧ್ಯಕ್ಷ ರಾಮಣ್ಣ, ಮಂಜೇಶ್, ನರಸಿಂಹಮೂರ್ತಿ, ನಾಗರಾಜು, ಬಳಗೇರಿ ಭೈರಪ್ಪ, ಸುರೇಶ್ ಇತರರಿದ್ದರು.