ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಾಡಿನ ಸಂಸ್ಕೃತಿ, ಪರಂಪರೆಯೊಂದಿಗೆ ಬೆಳೆದು ಬಂದಿರುವ ಕನ್ನಡ ನಾಡಿನ ಅಸ್ಮಿತೆ ಮೈಸೂರು ಸ್ಯಾಂಡಲ್ ಸೋಪಿಗೆ ನಟಿಯೊಬ್ಬರನ್ನು ರಾಯಭಾರಿಯಾಗಿ ನೇಮಿಸಿರುವುದು ಸರ್ಕಾರದ ಅವಿವೇಕಿತನವಾಗಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಶ್ರೀಧರ್ ಹೇಳಿದ್ದಾರೆ.ಮೈಸೂರು ಸ್ಯಾಂಡಲ್ ಸೋಪು ಬೇರೆ ಸೋಪುಗಳಂತಲ್ಲ. ಆ ಸೋಪಿನಲ್ಲಿ ನಾಡಿನ ಪರಂಪರೆಯಿದೆ, ಸಂಸ್ಕೃತಿಯಿದೆ, ಪರಿಸರವಿದೆ, ಕನ್ನಡದ ಕಂಪಿದೆ, ಪರಿಮಳವಿದೆ. ಇಂತಹ ಹಿರಿಮೆಯುಳ್ಳ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಗತವೈಭವ ಹೊಂದಿರುವ ಶತಮಾನದ ಸೋಪನ್ನು ಬೇರೆ ಸೋಪುಗಳಂತೆ ಪರಿಗಣಿಸಿರುವುದೇ ಒಂದು ಅಪರಾಧ. ಅದರ ಜತೆಗೆ ನಟಿಯನ್ನು ರಾಯಭಾರಿಯಾಗಿ ನೇಮಿಸಿ 6.20 ಕೋಟಿ ರು. ಸಂಭಾವನೆ ನೀಡಿ ದುಂದು ವೆಚ್ಚಕ್ಕೆ ನಾಂದಿ ಹಾಡಿರುವುದು ಮಹಾಪರಾಧ.
ಇಷ್ಟಕ್ಕೂ ರಾಯಭಾರಿ ನೇಮಿಸಿರುವ ಸರ್ಕಾರದ ಉದ್ದೇಶವಾದರೂ ಏನು. ಮೈಸೂರು ಸ್ಯಾಂಡಲ್ ಸೋಪು ಬಳಸಿದರೆ ತಮನ್ನಾ ಅವರಂತಾಗುತ್ತಾರೇ ಎಂತಲೋ? ಇಲ್ಲ ಅವರಂತಹ ಮೈಬಣ್ಣ ಹೊಂದುತ್ತಾರೆ ಎಂತಲೋ? ಈ ಬಗ್ಗೆ ಸರ್ಕಾರ ಮೊದಲು ಸ್ಪಷ್ಟ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.ನೆಲಮೂಲ ಸಂಸ್ಕೃತಿಗೆ ಧಕ್ಕೆ ಬೇಡ:
ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿಯ ಅಗತ್ಯವಿದೆಯೇ? ಎಂಬುದು ಮೊದಲ ಪ್ರಶ್ನೆ. ರಾಯಭಾರಿ ಬೇಕು ಎಂಬುದೇ ಆದರೆ ನೇಮಿಸಲಿ, ನಮ್ಮ ಅಡ್ಡಿಯಿಲ್ಲ. ಆದರೆ, ಸೋಪಿಗಿರುವ ಪರಂಪರೆಯಷ್ಟೇ ಹಿನ್ನೆಲೆಯುಳ್ಳ ಯಾರನ್ನಾದರೂ ನೇಮಿಸಲಿ. ಅದಕ್ಕೆ ನಟಿಯರೇ ಏಕೆ ಬೇಕು. ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಶಿಕ್ಷಣ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಾಕಷ್ಟು ಹಿರಿಮೆಯುಳ್ಳವರು ಈ ನಾಡನಲ್ಲ್ಲಿದ್ದಾರೆ. ಅವರನ್ನು ನೇಮಿಸಿದರೆ ಆಗುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.ಪ್ರಚಾರವೇ ಮುಖ್ಯ ಉದ್ದೇಶವಾದರೆ ಪ್ರಸ್ತುತ ದೇಶದ ಈಗಲೂ ಕಾಲಮಿಂಚಿಲ್ಲ ರಾಯಭಾರಿಯನ್ನು ಸರ್ಕಾರ ಬದಲಾಯಿಸಲಿ. ಮುಂದಿನ ದಿನಗಳಲ್ಲಿ ಸೋಪಿನ ಪರಂಪರೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಅದನ್ನು ಬಿಟ್ಟು ಜನರ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಸರಿಯಲ್ಲ. ಪ್ರಚಾರ ತಂತ್ರ, ಮಾರುಕಟ್ಟೆ ವಿಸ್ತರಣೆ ಎಲ್ಲವೂ ಸರಿ. ಆದರೆ, ಸೋಪಿನ ಪರಂಪರೆಗೆ ಧಕ್ಕೆ ಬರದ ರೀತಿ ನೋಡಿಕೊಳ್ಳೂವುದು ಮೊದಲ ಆದ್ಯತೆಯಾಗಬೇಕು. ಈ ವಿಚಾರದಲ್ಲಿ ಸರಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))