ಸಾರಾಂಶ
ಕುಂದುವಾಡ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟನೆ, ಮನವಿ ಕನ್ನಡಪ್ರಭ ವಾರ್ತೆ ದಾವಣಗೆರೆ
ಸಾಮಾಜಿಕ, ಶೈಕ್ಷಣಿಕ, ಜಾತಿ ಸಮೀಕ್ಷೆಯ ಕಾಂತರಾಜು ಆಯೋಗದ ಜಾತಿ ಗಣತಿ ವರದಿ ಜಾರಿಗೊಳಿಸಲು, ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ ಭಟ್ ಗಡಿಪಾರಿಗೆ ಒತ್ತಾಯಿಸಿ ಡಿಎಸ್ಸೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಪ್ರತಿಭಟಿಸಲಾಯಿತು.ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಇತರರ ನೇತೃತ್ವದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಘೋಷಣೆ ಕೂಗಿ, ಪ್ರತಿಭಟನಾಕಾರರು ನಂತರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕುಂದುವಾಡ ಮಂಜುನಾಥ, ರಾಜ್ಯ ಸರ್ಕಾರವು ಜಾತಿಗಣತಿ ವರದಿ ಅಂಗೀಕರಿಸಿ, ಜಾರಿಗೊಳಿಸಬೇಕು. ರಾಜ್ಯದಲ್ಲಿ ಕೈಗೊಂಡ ಜಾತಿ, ಶೈಕ್ಷಣಿಕ, ಸಾಮಾಜಿಕ, ಸ್ಥಿತಿಗತಿ ಕುರಿತ ವರದಿ ಜಾರಿಗೆ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದೇಟು ಹಾಕಬಾರದು. ಕಾಂತರಾಜು ವರದಿ ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಸಂಘ ಪರಿಹಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಾರ್ವಜನಿಕವಾಗಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ಅಕ್ಷಮ್ಯ. ತಕ್ಷಣ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ನಾಮಕರಣ ಮಾಡಬೇಕು. ದಾವಣಗೆರೆ ತಾಲೂಕಿನ ಬೇತೂರು ಗ್ರಾಪಂ ವ್ಯಾಪ್ತಿಯ ಬಿ.ಚಿತ್ತಾನಹಳ್ಳಿ, ಬಿ.ಕಲ್ಪನಹಳ್ಳಿ, ನಗರ ವ್ಯಾಪ್ತಿಯ ಯರಗುಂಟೆ ಸೇರಿ ಜಿಲ್ಲಾದ್ಯಂತ ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ, ಸೂರು ಕಲ್ಪಿಸಬೇಕು. ತಾಲೂಕಿನ ತುರ್ಚಘಟ್ಟ ಗ್ರಾಮದ ದಲಿತರ ಕೇರಿಯಲ್ಲಿ ಅಂಬೇಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡಿ, ಭವನ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.ಮೊರಾರ್ಜಿ, ಕಿತ್ತೂರು ರಾಣಿ, ನವೋದಯ ಶಾಲೆ, ಸರ್ಕಾರಿ ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರ, ಸ್ವಚ್ಛತೆಗೆ ಒತ್ತು ನೀಡಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಉದ್ಯಮಶೀಲತೆ, ಇತರೆ ಸೌಲಭ್ಯವನ್ನು ಹೆಚ್ಚಿನ ಫಲಾನುಭವಿ ಆಯ್ಕೆ, ದಲಿತರಿಗೆ ಸ್ವಾವಲಂಬಿ ಮಾಡಬೇಕೆಂಬುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.
ಡಿಎಸ್ಸೆಸ್ ಮುಖಂಡರಾದ ಕೆ.ವಿಜಯಲಕ್ಷ್ಮಿ, ಕೆಟಿಜೆ ನಗರ ಪ್ರದೀಪ, ಮಹಾಂತೇಶ ಹಾಲುವರ್ತಿ, ಆರ್.ಮಂಜುನಾಥ, ಗುಮ್ಮನೂರು ಹನುಮಂತಪ್ಪ, ಖಾಲಿದ್ ಅಲಿ, ಮೆಳ್ಳೆಕಟ್ಟೆ ಪರಶುರಾಮ, ದೊಡ್ಡಪ್ಪ ಆವರಗೊಳ್ಳ, ತಿಪ್ಪೇಶಿ ತಿಮ್ಮೇನಹಳ್ಳಿ, ಸಿದ್ದರಾಮಣ್ಣ ಬುಳ್ಳಸಾಗರ, ಕೊಡಗನೂರು ಲಕ್ಷ್ಮಣ, ಹನುಮಂತಪ್ಪ ಅಣಜಿ, ಪಿ.ಜೆ.ಮಹಾಂತೇಶ, ಚಿತ್ರಲಿಂಗಪ್ಪ ಗಾಂಧಿ ನಗರ, ಪರಮೇಶ ಬೆನಕನಹಳ್ಳಿ, ಕುಬೇಂದ್ರಪ್ಪ ಸೂರಗೊಂಡನಕೊಪ್ಪ, ಚಂದ್ರಪ್ಪ, ನಾಗರಾಜ ಬಿ.ಚಿತ್ತಾನಹಳ್ಳಿ, ಆರತಿ, ಹನುಮಂತ ಬೇತೂರು, ಮಂಜುನಾಥ ನೀರ್ಥಡಿ, ನಿಂಗಪ್ಪ ಅಣಜಿ, ಹಾಲೇಶ ಕುಂದುವಾಡ, ನಾಗರಾಜ ತುರ್ಚಘಟ್ಟ, ಪ್ರಸನ್ನ, ಹಾಲೇಶ ಗಾಂಧಿ ನಗರ, ರಾಜು ಕಡ್ಲೇಬಾಳು, ಮಾಗಾನಹಳ್ಳಿ ಮಂಜು ಇತರರಿದ್ದರು.ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣ ವಜಾಗೊಳಿಸಿ
ಗೋಣಿವಾಡ ಗ್ರಾಮದ ರಿ.ಸ.ನಂ.19-1ರಲ್ಲಿ ದಲಿತರು ಖರೀದಿಸಿರುವ ಜಮೀನನ್ನು ಸ್ಮಶಾನಕ್ಕೆ ಮಂಜೂರು ಮಾಡಿದ್ದು, ಅದನ್ನು ವಜಾಗೊಳಿಸಿ, ಸಾಗುವಳಿಗೆ ಅವಕಾಶ ಮಾಡಿಕೊಡಬೇಕು. ಕಿತ್ತೂರು ಗ್ರಾಮದ ದಲಿತರು ಉಳುಮೆ ಮಾಡುತ್ತಿರುವ ಭೂಮಿಗೆ ಸಾಗುವಳಿ ಪತ್ರ ನೀಡಿ, ಆಯಾ ರೈತರ ಹೆಸರಿಗೆ ಪಹಣಿ ಮಾಡಿಕೊಡಬೇಕು. ಡಿಎಸ್ಸೆಸ್ ಮುಖಂಡರು, ಹೋರಾಟಗಾರರ ಮೇಲೆ ದಾಖಲಿಸಿದ ಸುಳ್ಳು ಪ್ರಕರಣ ವಜಾಗೊಳಿಸಲು ಒತ್ತಾಯಿಸಿದರು.