ಸಾರಾಂಶ
ದಾವಣಗೆರೆ : ಬುದ್ಧ, ಸಿದ್ಧಾರ್ಥ ಅಂತೆಲ್ಲಾ ಟ್ರಸ್ಟ್‌ಗಳನ್ನು ಮಾಡಿಕೊಂಡು, ನೀವೇ ಕೆಐಎಡಿಬಿ ಭೂಮಿಯನ್ನೆಲ್ಲಾ ಹೊಡೆಯಬೇಡಿ ಸರ್. ಕಂಪನಿಗಳಿಗೆ ಕೆಐಎಡಿಬಿ ಭೂಮಿ ಕೊಡಿಸಿ, ವಿದ್ಯಾವಂತ ಯುವಕರಿಗೆ ಕೆಲಸ ಸಿಗುವಂತೆ ಮಾಡಿ ಪ್ರಿಯಾಂಕ ಖರ್ಗೆ ಸರ್ ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸರ್ ನಿಮ್ಮ ರೀತಿಯ ಅದೃಷ್ಟವಂತರು ಯಾರೂ ಇರೊಲ್ಲ. ಹತ್ತು, ಹನ್ನೆರಡನೇ ತರಗತಿಯನ್ನಷ್ಟೇ ಓದಿ, ಸಾವಿರಾರು ಕೋಟಿ ರು. ಆಸ್ತಿ, ಒಂದೇ ನೋಂದಣಿ ಸಂಖ್ಯೆಯ ಹತ್ತಾರು ಆಸ್ತಿ ಖರೀದಿಸುವ ಶಕ್ತಿಯೂ ಎಲ್ಲರಿಗೂ ಸಿಗೊಲ್ಲ ಎಂದರು.
ಬಡವರಿಗೂ ಬದುಕಲು ಒಂದಿಷ್ಟು ದಾರಿ ಮಾಡಿಕೊಡಿ ಸರ್. ನನ್ನನ್ನು ಬೇಕಾದರೆ ದಿನಾಗಲೂ ಬೈಯ್ರಿ. ನಮ್ಮ ಹುಡುಗರಿಗೆ ಕೆಲಸ ಕೊಡಿ ಸರ್. ಪ್ರಿಯಾಂಕ ಖರ್ಗೆ ಸಾಹೇಬ್ರೆ, ನೀವು ನನ್ನನ್ನು ಯಾವುದೇ ಪ್ರಾಣಿಗೆ ಹೋಲಿಸಿಕೊಳ್ಳಿ. ನಿಮ್ಮ ಪದಕೋಶದಲ್ಲಿದ್ದಷ್ಟು ಪದಗಳನ್ನು ಬಳಸಿಕೊಂಡು, ನನ್ನು ಬೈಯ್ಯಿರಿ. ಆದರೆ, ನಮ್ಮ ವಿದ್ಯಾವಂತ ಯುವಜನರಿಗೆ ಮೊದಲು ಉದ್ಯೋಗವನ್ನು ಕೊಡಿಸಿ ಸರ್ ಎಂದು ಪ್ರತಾಪ್ ವ್ಯಂಗ್ಯವಾಡಿದರು.
ಪ್ರತಿನಿತ್ಯ ಆರೆಸ್ಸೆಸ್, ಬಿಜೆಪಿ ವಿರುದ್ಧ ನೀವು ಮಾತನಾಡುತ್ತೀರಿ. ಇಲಾಖೆ ಏಜೆನ್ಸಿಗಳನ್ನು ಮಾಡಿದ್ದೀರಿ. ನನ್ನನ್ನು ಬೈದರೆ ನಿಮಗೆ ಅಷ್ಟೊಂದು ಖುಷಿ ಸಿಗುತ್ತದೆಂದರೆ ಅದಕ್ಕೆ ಕಲ್ಲು ಹಾಕುವುದಿಲ್ಲ. ಸರ್ ನಿರುದ್ಯೋಗ ಭತ್ಯೆ ಕೊಡುತ್ತೇವೆ ಅಂತಲೇ ಅಧಿಕಾರಕ್ಕೆ ಬಂದಿದ್ದೀರಿ. 2 ವರ್ಷವಾದರೂ ಯುವನಿಧಿ ಜಾರಿಯಾಗಲಿಲ್ಲ. ಯಾರಿಗೂ ಯುವನಿಧಿ ಭತ್ಯೆ ಬರುತ್ತಿಲ್ಲವಲ್ಲ ಎಂದು ದೂರಿದರು.
ಪ್ರತಿವರ್ಷ ಸುಮಾರು 1.5 ಲಕ್ಷದಷ್ಟು ಎಂಜಿನಿಯರಿಂಗ್ ಪದವೀಧರು ಬರುತ್ತಿದ್ದಾರೆ. ಎಂಜಿನಿಯರಿಂಗ್ ಮುಗಿಸಿದವರಿಗೂ ಈಗ ಆರ್ಟ್ಸ್ ಕಲಿತವರ ಪರಿಸ್ಥಿತಿಯೇ ಬಂದಿದೆ. ಸರ್ ನಿಮ್ಮ ಇಲಾಖೆಯ ಬಗ್ಗೆಯೂ ಒಂದಿಷ್ಟು ಮಾತನಾಡಿ. ಇಲಾಖೆಯಲ್ಲಿ ನಿಮ್ಮ ಸಾಧನೆಯ ಕುರಿತು ಸಹ ಒಂದಿಷ್ಟು ಮಾತನಾಡಿ ಸರ್. ಆದರೂ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ ಎಂದು ಪ್ರತಾಪ ಸಿಂಹ ಅವರು ಕುಟುಕಿದರು.
* ಸರ್ಕಾರದ ಸ್ಪಷ್ಟ ಚಿತ್ರಣ ನೀಡದ ರಾಯರೆಡ್ಡಿ! ಇದಕ್ಕೂ ಮುನ್ನ ದಾವಣಗೆರೆಯ ಶ್ರೀ ರೇಣುಕಾ ಮಂದಿರದಲ್ಲಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಜಿ.ಎಂ. ಸಿದ್ದೇಶ್ವರರ 74ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹ ಭಾಗವಹಿಸಿದರು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ರಾಜ್ಯ ಸರ್ಕಾರದಲ್ಲಿ 13 ಬಜೆಟ್ ಮಂಡಿಸಿದ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಸಿಎಂ ಸಿದ್ದರಾಮಯ್ಯ ಸಾಹೇಬರ ಸರ್ಕಾರದ ಸ್ಪಷ್ಟಚಿತ್ರಣ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಸಾಹೇಬರು 2023ರ ಚುನಾವಣೆ ವೇಳೆ ಎಲ್ಲರಿಗೂ ಉಚಿತ ಬಸ್ಸು ಸೇವೆ ಅಂತಾ ಹೇಳಿದ್ದರು. ಕಾಕಾ ಪಾಟೀಲ ನಿನಗೂ ಫ್ರೀ ಕೊಡ್ತೀನಿ, ಮಹದೇವಪ್ಪ ನಿನ್ನ ಹೆಂಡತಿಗೂ ಗೃಹಲಕ್ಷ್ಮಿ ಹಣ ಬರುತ್ತೆ. ಯುವನಿಧಿ, 10 ಕೆಜಿ ಅಕ್ಕಿ ಕೊಡ್ತೀವಿ ಅಂತೆಲ್ಲಾ ಹೇಳಿದ್ದರು. ಇದೆಲ್ಲಾ ಹೇಳುವಾಗ ನಿಮಗೆ ರಸ್ತೆ ಮಾಡುವುದಿಲ್ಲ, ಟಾರ್ ಹಾಕಲ್ಲ, ಅಭಿವೃದ್ಧಿ ಕೆಲಸ ಮಾಡಲ್ಲ, ಮುದ್ರಾಂಕ ಬೆಲೆ ಸೇರಿ ಎಲ್ಲದರ ಮೇಲೆ ಬರೆ ಎಳೆಯುತ್ತೇವೆಂದು ಹೇಳಿದ್ದರಾ ಎಂದು ಪ್ರತಾಪ್ ಪ್ರಶ್ನಿಸಿದರು.
11 ತಿಂಗಳಿನಿಂದಲೂ ಮನೆ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣವೇ ಬಂದಿಲ್ಲ. ಆದರೂ, ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್‌ಗಿಂತಲೂ ಒಳ್ಳೆಯ ಅರ್ಥಶಾಸ್ತ್ರ ಅಂತೆಲ್ಲಾ ಕೆಲವರು ಹೇಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಾಪ ಸಿಂಹ ವ್ಯಂಗ್ಯವಾಗಿ ಕುಟುಕಿದರು.