ಇತಿಹಾಸ ತಿಳಿಯದೆ ರಾಜಕೀಯ ಮಾಡಬಾರದು: ಮೋಹನ್

| Published : Jan 07 2025, 12:15 AM IST

ಸಾರಾಂಶ

ಮೈಸೂರಿಗೆ ತನ್ನದೇ ಇತಿಹಾಸ, ಪರಂಪರೆ ಇದೆ. ಆದ್ದರಿಂದ ದೇಶದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಮೈಸೂರು ಕೂಡ ಒಂದು. ಬನಾರಸ್, ವಾರಣಸಿಯಂತೆ ಮೈಸೂರು ಪಾರಂಪರಿಕ ನಗರ. ಸಾವಿರಾರು ವರ್ಷಗಳ ಇತಿಹಾಸ ಮೈಸೂರಿಗೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಇತಿಹಾಸ, ಪರಂಪರೆ ಅರಿಯದೆ ನಕಲಿ ಗಾಂಧಿಯ, ನಕಲಿ ಕಾಂಗ್ರೆಸ್ಸಿನ ನಕಲಿ ವಕ್ತಾರರು ರಾಜಕೀಯ ಮಾಡಬಾರದು ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್, ಅವರು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ವಿರುದ್ಧ ಕಿಡಿಕಾರಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ತನ್ನದೇ ಇತಿಹಾಸ, ಪರಂಪರೆ ಇದೆ. ಆದ್ದರಿಂದ ದೇಶದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಮೈಸೂರು ಕೂಡ ಒಂದು. ಬನಾರಸ್, ವಾರಣಸಿಯಂತೆ ಮೈಸೂರು ಪಾರಂಪರಿಕ ನಗರ. ಸಾವಿರಾರು ವರ್ಷಗಳ ಇತಿಹಾಸ ಮೈಸೂರಿಗೆ ಇದೆ ಎಂದರು.

ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಮೈಸೂರನ್ನು ವಿಭಾಗಿಸಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ರಾಜ್ಯವು ತಮಿಳುನಾಡಿನ ಶ್ರೀರಂಗಂವರೆಗೆ ವಿಸ್ತರಿಸಿತ್ತು. ಇದನ್ನು ಅರಿಯದವರು ಮೈಸೂರಿನ ಇತಿಹಾಸ ಮತ್ತು ಪರಂಪರೆಯನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಓದಿಗಾಗೋ, ವ್ಯಾಪಾರಕ್ಕೋ ಬಂದು ಮೈಸೂರು ಸೇರಿ ಇಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಇದ್ದುಕೊಂಡು ನಕಲಿ ದಾಖಲೆ ಇಟ್ಟುಕೊಂಡು ಕಳಂಕ ತರಲು ಆರಂಭಿಸಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.

ಪ್ರಿನ್ಸೆಸ್ ರಸ್ತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬದಲಾಯಿಸಲು ಮುಂದಾಗಿದ್ದರಿಂದ ಈ ಚರ್ಚೆ ಆರಂಭವಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂಬ ಗುಂಪು ಕಾಂಗ್ರೆಸ್ಸಿಲ್ಲಿಯೇ ಇದೆ. ಸಿದ್ದರಾಮಯ್ಯ ಹೆಸರಿಗೆ ಇನ್ನಷ್ಟು ಮೆರಗು ಕೊಡಬೇಕು ಎಂಬ ಮುತುವರ್ಜಿಯಲ್ಲಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಅವರ ಹಿಂಬಾಲಕರು ಮಾಡುತ್ತಿದ್ದಾರೆ ಎಂದು ಅವರು ಮೊದಲಿಸಿದರು.

ಮುಡಾ ವಿಷಯದಲ್ಲಿ ಪಾರ್ವತಿ ಅವರ ವಿಷಯ ಮಾತನಾಡುವಂತೆ ಮಾಡಿದರು. ಇದನ್ನು ಮಾಡಿದ್ದು ಸಿದ್ದರಾಮಯ್ಯ ಅವರ ಭಂಟರು. ಹೀಗೆ ಮಾಡಿ ಸಿದ್ದರಾಮಯ್ಯ ಅವರನ್ನು ಖುಷಿಪಡಿಸಿದ್ದಕ್ಕೆ ಲಕ್ಷ್ಮಣಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟರು. ನಕಲಿ ದಾಖಲಾತಿ ಇಟ್ಟುಕೊಂಡು ತಪ್ಪಿಲ್ಲ, ತಪ್ಪಿಲ್ಲ ಎನ್ನುತ್ತಿದ್ದರು. ಆದರೆ ನಾವು ಅಸಲಿ ದಾಖಲೆ ನೀಡಿದ ಮೇಲೆ 14 ನಿವೇಶನ ಹಿಂದಿರುಗಿಸಿದ್ದಾಗಿ ಅವರು ತಿಳಿಸಿದರು.

ಪ್ರತಿಯೊಂದಕ್ಕೂ ಫೊರೆನ್ಸಿಕ್ ಲ್ಯಾಬ್ ಪರೀಕ್ಷೆ ಎನ್ನುತ್ತಾರೆ. ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿದ್ದು ಯಾಕೆ ಲ್ಯಾಬ್‌ಗೆ ಹೋಗಲಿಲ್ಲ. ಜಯಲಕ್ಷ್ಮೀಪುರಂ ಹೆಸರು ಹೇಗೆ ಬಂತು, 1893 ರಲ್ಲಿ ಸಯ್ಯಾಜಿರಾವ್ ರಸ್ತೆಗೆ ಹೇಗೆ ನಾಮಕರಣ ಮಾಡಲಾಯಿತು ಎಂಬುದು ಗೊತ್ತಿದೆಯೇ? ಇಷ್ಟೆಲ್ಲಾ ಆದರೂ ಕೊನೆಯ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಹೆಸರನ್ನು ಯಾವ ರಸ್ತೆಗೆ ಇಡಲಾಗಿದೆ ಎಂದು ಅವರು ಪ್ರಶ್ನಿಸಿದರು.

ಇವರ ಅವಧಿಯಲ್ಲಿ ಲ್ಯಾನ್ಸ್ಡೌನ್ ಕಟ್ಟಡ ಸರಿಪಡಿಸಲು ಆಗಲಿಲ್ಲ. ಆದರೆ ಮಹಾರಾಜರು ಸ್ಯಾನಿಟೋರಿಯಂ ಆಸ್ಪತ್ರೆ ಮಾತ್ರವಲ್ಲದೆ, ರೈಲ್ವೆ ನೌಕರರಿಗಾಗಿ ರೈಲ್ವೆ ಆಸ್ಪತ್ರೆ ನಿರ್ಮಿಸಿದ್ದರು. ಇಷ್ಟೆಲ್ಲಾ ಇದ್ದರೂ ನಗರ ಪಾಲಿಕೆಯಲ್ಲಿ ದಾಖಲೆ ಇಲ್ಲ ಎನ್ನುತ್ತಾರೆ. ಮಹಾರಾಜರು ಇಟ್ಟ ಹೆಸರು ನಗರ ಪಾಲಿಕೆಯಲ್ಲಿ ಹೇಗೆ ಬರುತ್ತದೆ? ಸಿಡಿಪಿಯಲ್ಲಿ ಇದು ಹೇಗೆ ಬರಲು ಸಾಧ್ಯ? ಇಷ್ಟಕ್ಕೂ ಸಿಡಿಪಿ ಎಂದರೆ ಏನು ಎಂಬುದು ಗೊತ್ತೆ ಎಂದು ಅವರು ಪ್ರಶ್ನಿಸಿದರು.

ನಾವು ಈಗ ರೇಸ್‌ ಕೋರ್ಸ್ ರಸ್ತೆ ಎನ್ನುತ್ತೇವಲ್ಲ, ಅದರ ಹೆಸರು ಕಂಠಿರವ ನರಸಿಂಹರಾಜ ಬುಲೇವಾರ್ಡ್ ರಸ್ತೆ ಎಂದು ಲಕ್ಷ್ಮಣಗೆ ಗೊತ್ತಾ? ಮೊದಲು ಮೈಸೂರಿನ ಇತಿಹಾಸ ಪರಂಪರೆ ತಿಳಿದುಕೊಳ್ಳಿ. ಮೈಸೂರು ನಗರವನ್ನು ಕಷ್ಟಪಟ್ಟು ಮಹಾರಾಜರು ಕಟ್ಟಿದ್ದಾರೆ. ಆ ವಂಶಸ್ಥರು ದತ್ತು ತೆಗೆದುಕೊಂಡರೆ ಇವರಿಗೇನು ಸಂಕಟ. ಸೋತ ಮೇಲೆ ಬಾಯಿ ಮುಚ್ಚಿಕೊಂಡು ಇರಬೇಕಲ್ಲವೇ ಎಂದು ಅವರು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ನಗರ ಮಾಧ್ಯಮ ವಕ್ತಾರ ಮೋಹನ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಕೇಬಲ್ ಮಹೇಶ್, ನಗರ ಉಪಾಧ್ಯಕ್ಷ ಜೋಗಿ ಮಂಜು, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸು, ಸಹ ವಕ್ತಾರ ದೇವರಾಜ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಪೈ.ಟಿ. ರವಿ ಇದ್ದರು.