ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸದಿರಿ: ರೈತ ಸಂಘಟನೆ

| Published : Dec 29 2023, 01:32 AM IST

ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸದಿರಿ: ರೈತ ಸಂಘಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಅಧೀಕ್ಷಕ ಅಭಿಯಂತರರು ತರೀಕೆರೆ ಮತ್ತು ಕಡೂರು ಭಾಗದ ರೈತರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ನೆಪವೊಡ್ಡಿ, ಡಿ.29ರಿಂದ ನಾಲ್ಕು ದಿನ ಕಾಲ ನಿರಂತರ ನಿತ್ಯ 700 ಕ್ಯೂಸೆಕ್‌ ನೀರು ಬಿಡುವ ಘೋಷಣೆ ಮಾಡಿದ್ದಾರೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗುತ್ತದೆ. ಭದ್ರಾ ಡ್ಯಾಂನಿಂದ ತರೀಕೆರೆ, ಕಡೂರಿಗೆ ಡಿ.29ರಿಂದ ನೀರು ಹರಿಸುವ ಆದೇಶ ತಕ್ಷಣವೇ ರದ್ದುಪಡಿಸಬೇಕು

ತರೀಕೆರೆ, ಕಡೂರು ಭಾಗ, ವಾಣಿವಿಲಾಸಕ್ಕೆ ನೀರು ಬಿಡಬೇಡಿ । ವಿವಿಧ ಪಕ್ಷ, ರೈತ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ತರೀಕೆರೆ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶ, ಭದ್ರಾ ಮೇಲ್ದಂಡೆ ಮುಖ್ಯ ಕಾಲುವೆ ಮೂಲಕ ವಾಣಿವಿಲಾಸ ಸಾಗರಕ್ಕೆ ಭದ್ರಾ ಅಣೆಕಟ್ಟೆಯಿಂದ ನಾಲ್ಕು ದಿನ ಕಾಲ ಸತತವಾಗಿ ನಿತ್ಯ 700 ಕ್ಯೂಸೆಕ್‌ ನೀರು ಹರಿಸಿ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರನ್ನು ಬೀದಿ ಪಾಲು ಮಾಡಲು ಹೊರಟಿದ್ದನ್ನು ಖಂಡಿಸಿ ಇಲ್ಲಿನ ನೀರಾವರಿ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟಿಸಿದರು.

ನಗರದ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರ ಕಚೇರಿ ಎದುರು ವಿವಿಧ ಪಕ್ಷ, ರೈತ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಭದ್ರಾ ಅಚ್ಚುಕಟ್ಟು ರೈತರು ಭದ್ರಾ ಡ್ಯಾಂನಿಂದ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ನಾಲ್ಕು ದಿನ ನೀರು ಹರಿಸಲು ಮುಂದಾದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಅನುಕೂಲವಾಗುವಂತೆ ಮತ್ತು ಮೇಲ್ದಂಡೆ ಮುಖ್ಯ ಕಾಲುವೆ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲು ಅನುಕೂಲವಾಗುವಂತೆ ಭದ್ರಾ ಜಲಾಶಯದ ನೀರನ್ನು ಒಳ ಹರಿವಿನ ಪ್ರಮಾಣ ಹೆಚ್ಚಾದ ನಂತರ ಮತ್ತು ನೀರಿನ ಲಭ್ಯತೆ ನೋಡಿ ನೀರು ಹರಿಸಬೇಕೆಂಬ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೇ ಆದೇಶ ಹೊರಡಿಸಿದ್ದರೂ, ಅದನ್ನು ಧಿಕ್ಕರಿಸಲಾಗಿದೆ ಎಂದರು.

ಭದ್ರಾ ಅಧೀಕ್ಷಕ ಅಭಿಯಂತರರು ತರೀಕೆರೆ ಮತ್ತು ಕಡೂರು ಭಾಗದ ರೈತರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸುವ ನೆಪವೊಡ್ಡಿ, ಡಿ.29ರಿಂದ ನಾಲ್ಕು ದಿನ ಕಾಲ ನಿರಂತರ ನಿತ್ಯ 700 ಕ್ಯೂಸೆಕ್‌ ನೀರು ಬಿಡುವ ಘೋಷಣೆ ಮಾಡಿದ್ದಾರೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗುತ್ತದೆ. ಭದ್ರಾ ಡ್ಯಾಂನಿಂದ ತರೀಕೆರೆ, ಕಡೂರಿಗೆ ಡಿ.29ರಿಂದ ನೀರು ಹರಿಸುವ ಆದೇಶ ತಕ್ಷಣವೇ ರದ್ದುಪಡಿಸಬೇಕು ಎಂದು ತಾಕೀತು ಮಾಡಿದರು.

ರೈತ ಮುಖಂಡರಾದ ತೇಜಸ್ವಿ ವಿ.ಪಟೇಲ್‌, ಶಾಬನೂರು ಎಚ್.ಆರ್‌.ಲಿಂಗರಾಜ, ಕೊಳೇನಹಳ್ಳಿ ಬಿ.ಎಂ.ಸತೀಶ, ಲೋಕಿಕೆರೆ ನಾಗರಾಜ, ಬೆಳವನೂರು ಬಿ.ನಾಗೇಶ್ವರ ರಾವ್, ಧನಂಜಯ ಕಡ್ಲೇಬಾಳು, ಬಲ್ಲೂರು ರವಿಕುಮಾರ, ಬಲ್ಲೂರು ಬಸವರಾಜ, ಕುಂದುವಾಡ ಗಣೇಶಪ್ಪ, ಎಚ್.ಎನ್‌.ಗುರುನಾಥ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಆರನೇಕಲ್ಲು ವಿಜಯಕುಮಾರ, ಕಲ್ಪನಹಳ್ಳಿ ಸತೀಶ, ಉಜ್ಜಪ್ಪ, ಚಿಕ್ಕಬೂದಿಹಾಳು ಭಗತ್ ಸಿಂಗ್‌, ಕಲ್ಲುಬಂಡೆ ಪ್ರಸಾದ್, ಕೈದಾಳೆ ಗುರುಪ್ರಸಾದ, ಕೊಳೇನಹಳ್ಳಿ ಶರಣಪ್ಪ ಇತರು ಪ್ರತಿಭಟನೆಯಲ್ಲಿದ್ದರು. ನೀರಾವರಿ ಕಚೇರಿ ಬಳಿ ಪ್ರತಿಭಟಿಸಿದ ನಂತರ ರೈತ ಮುಖಂಡರು, ಅಚ್ಚುಕಟ್ಟು ರೈತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಡಿಸಿ ಪಿ.ಎನ್.ಲೋಕೇಶ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಕಾಡಾ ಸಮಿತಿ ಸಭೆ ಕರೆಯಿರಿ

ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆದು, ಬೇಸಿಗೆ ಹಂಗಾಮಿಗೆ ನೀರು ಹರಿಸುವ ವೇಳಾಪಟ್ಟಿ ಮೊದಲು ಪ್ರಕಟಿಸಲಿ. ತುಂಗಾದಿಂದ ಭದ್ರಾ ಜಲಾಶಯಕ್ಕೆ ಹರಿಸಬೇಕಾದ ನೀರು ಲಿಫ್ಟ್ ಮಾಡುವ ತೀರ್ಮಾನ ಕೈಗೊಳ್ಳಬೇಕು. ಭದ್ರಾ ಮೇಲ್ದಂಡೆ ಯೋಜನೆಯ ಷರತ್ತಿನಂತೆ ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್ ಮಾಡುವವರೆಗೂ ಭದ್ರಾ ಮೇಲ್ದಂಡೆ ಭಾಗಕ್ಕೆ ನೀರು ಹರಿಸಬಾರದು. ಅಚ್ಚುಕಟ್ಟು ರೈತರ ಬದುಕಿನ ಜೊತೆ ಅಧಿಕಾರಿಗಳು ಆಟವಾಡುವುದು ಸಹಿಸುವುದಿಲ್ಲ ಎಂದು ಮುಖಂಡರು ಎಚ್ಚರಿಸಿದರು.

...........