ಬಿಜೆಪಿ ಸುಳ್ಳಿನ ಮಾತಿಗೆ ಮರಳಾಗಬೇಡಿ: ದರ್ಶನಾಪುರ

| Published : Apr 29 2024, 01:32 AM IST

ಸಾರಾಂಶ

ಸಗರ, ರಸ್ತಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ. ಕುಮಾರ ನಾಯಕ ಪರ ಮತಯಾಚನೆ

ಕನ್ನಡಪ್ರಭ ವಾರ್ತೆ ಶಹಾಪುರ

ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಯ ಸುಳ್ಳಿನ ಮಾತಿಗೆ ಮರುಳಾಗಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತದಾರರಲ್ಲಿ ಮನವಿ ಮಾಡಿದರು.

ತಾಲೂಕಿನ ಸಗರ ಮತ್ತು ರಸ್ತಾಪುರ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಿ. ಕುಮಾರ ನಾಯಕ ಅವರ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.

ದೇಶವನ್ನು ಸಂವಿಧಾನ ಆಳಬೇಕೆ ಹೊರತು ವ್ಯಕ್ತಿಯಿಂದಲ್ಲ. ಬಿಜೆಪಿ, ದೇಶದ ಉದ್ದಗಲಕ್ಕೂ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಸಲಿ ಬಣ್ಣಗಳನ್ನು ಮರೆಮಾಚಿ ಮೋದಿಗಾಗಿ ಮತ ನೀಡಿ ಎಂದು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷವು 2013 ರ ಚುನಾವಣೆ ವೇಳೆ ಜನರಿಗೆ 165 ಭರವಸೆಗಳನ್ನು ನೀಡಿ ಅವುಗಳಲ್ಲಿ 158 ಭರವಸೆ ಡೇರಿಸಿದ್ದೇವೆ. ಬಿಜೆಪಿಯವರು 2018ರ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ನಮ್ಮ ವಚನಗಳು ಎಂಬ ಶೀರ್ಷಿಕೆಯಲ್ಲಿ ಸುಮಾರು 600 ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು 5 ವರ್ಷಗಳಲ್ಲಿ ಎಷ್ಟು ಬರವಸೆ ಈಡೇರಿಸಿದ್ದಾರೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿಎಂ ಸಿದ್ದರಾಮಯ್ಯ ನವರು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದರು. ಕೇಂದ್ರದ 5 ಕೆಜಿ ಜೊತೆ 5 ಕೆಜಿ ಸೇರಿಸಿ, ಒಟ್ಟು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಇದುವರೆಗೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅಕ್ಕಿ ಕೊಟ್ಟರೆ ಅದರ ಶ್ರೇಯಸ್ಸು ಕಾಂಗ್ರೆಸ್ ಗೆ ಹೋಗುತ್ತದೆ ಎನ್ನುವ ಉದ್ದೇಶದಿಂದ ರಾಜ್ಯ ಬಿಜೆಪಿ ನಾಯಕರು ಕೇಂದ್ರಕ್ಕೆ ಚಾಡಿ ಹೇಳಿ ಅಕ್ಕಿ ಕೊಡದಂತೆ ತಡೆದರು.

ಜನರಿಗೆ ಕೊಟ್ಟ ಮಾತಿನಂತೆ ನಾವು ಅಕ್ಕಿ ಕೊಡಲಾಗದಿದ್ದರೂ ಅದರ ಬದಲಾಗಿ ಬಿಪಿಎಲ್ ಕಾರ್ಡ್‌ನ ಪ್ರತಿ ಫಲಾನುಭವಿ ಖಾತೆಗೆ ಪ್ರತಿ ತಿಂಗಳು 170 ರು. ಹಣ ಜಮಾ ಮಾಡಲಾಗುತ್ತಿದೆ. ಕಳೆದ 6 ತಿಂಗಳಲ್ಲಿ ಜನರ ಖಾತೆಗೆ 3,751 ಕೋಟಿ ರು. ಹಣ ವರ್ಗಾವಣೆ ಮಾಡಿದೆ ಎಂದರು. ಕಾಂಗ್ರೆಸ್ ಪಕ್ಷದ ರಾಯಚೂರು ಲೋಕಸಭಾ ಅಭ್ಯರ್ಥಿಗೆ ಹೆಚ್ಚಿನ ಲೀಡ್ ಕೊಡುವ ಮೂಲಕ ಕೈಯನ್ನು ಬಲಪಡಿಸಬೇಕು ಎಂದರು.