ಮಾರಕ ಕ್ಯಾನ್ಸರ್ ಬಗ್ಗೆ ಭಯ ಬೇಡ, ಎಚ್ಚರವಿರಲಿ

| Published : Feb 14 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ. ಆದರೆ ಭಯ ಬೇಡ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ. ಆದರೆ ಭಯ ಬೇಡ ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೋಟೆಣ್ಣವರ ಹೇಳಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರ ಚಿಕಿತ್ಸಾ ವಿಭಾಗದ ಹಾಗೂ ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಸಹಯೋಗದಲ್ಲಿ ನಡೆದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಮತ್ತು ಜಾಗೃತಿ ಅಭಿಯಾನ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ತಿಳವಳಿಕೆ ಮೂಡಿಸಲು ಪ್ರತಿ ವರ್ಷ ವಿಶ್ವಾದ್ಯಂತ ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಈಗಲೂ ಸಾಕಷ್ಟು ಮೂಢನಂಬಿಕೆಗಳು ಪ್ರಚಲಿತದಲ್ಲಿವೆ. ಅದರ ಬಗ್ಗೆ ಎಚ್ಚರವಿರಬೇಕು. ಆದರೆ, ಭಯ ಬೇಡ ಎಂದರು.

ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಎಲ್ಲಾ ಬಗೆಯ ಕ್ಯಾನ್ಸರ್ ರೋಗಗಗಳನ್ನು ಕಂಡು ಹಿಡಿಯುವ ಸಾಧನಗಳಿವೆ. ಸಂಪೂರ್ಣ ಚಿಕಿತ್ಸೆಗಳು ಉಚಿತವಾಗಿ ಅಥವಾ ಅತಿ ಕಡಿಮೆ ದರದಲ್ಲಿ ಲಭ್ಯವಿವೆ. ನಾನಾ ಪರಿಣಿತ ತಜ್ಞ ವೈದ್ಯರ ಸೇವೆಯೂ ಇದೆ. ಮುಂಚಿನಂತೆ ಕ್ಯಾನ್ಸರ್ ರೋಗ ಚಿಕಿತ್ಸೆಗಾಗಿ ಮುಂಬೈ, ಬೆಂಗಳೂರಿನಂಥ ದೊಡ್ಡ ಊರುಗಳಿಗೆ ಅಲೆದಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ.ಸಂಜೀವ ರಾಠೋಡ ಮಾತನಾಡಿ, ಕ್ಯಾನ್ಸರ್ ರೋಗವು ಸಾಮಾನ್ಯವಾಗಿ ದುಶ್ಚಟಗಳಾದ ತಂಬಾಕು, ಧೂಮಪಾನ, ಸಾರಾಯಿ ಸೇವನೆಗಳಿಂದ ಮತ್ತು ಅಸಾಮಾನ್ಯವಾಗಿ ಅನುವಂಶಿಕವಾಗಿ ಬರುತ್ತವೆ. ಆದ್ದರಿಂದ ಇಂಥ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಜೀವನಶೈಲಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ.ಶೈಲೇಶ ಕನ್ನೂರ ಮಾತನಾಡಿ, ನಾನಾ ಸಾಮಾನ್ಯ ಕ್ಯಾನ್ಸರ್ ರೋಗಗಳ ಗುಣಲಕ್ಷಣಗಳು, ಅವುಗಳನ್ನು ಕಂಡು ಹಿಡಿಯುವ ವಿಧಾನ ಹಾಗೂ ಚಿಕಿತ್ಸೆ ಪದ್ಧತಿಗಳನ್ನು ವಿವರಿಸಿದರು. ಅಲ್ಲದೇ, ಕ್ಯಾನ್ಸರ್ ರೋಗದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ, ನಿರ್ಲಕ್ಷ್ಯಿಸದೆ, ತಜ್ಞ ವೈದ್ಯರನ್ನು ಕಾಣಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ, ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಂಘದ ಕಾರ್ಯದರ್ಶಿ ಡಾ.ರಮಾಕಾಂತ ಬಳೂರಕರ, ಉಪಪ್ರಾಚಾರ್ಯ ಡಾ.ಎಂ.ಬಿ.ಪಾಟೀಲ, ಡೀನ್ ಫ್ಯಾಕಲ್ಟಿ ಆಫ್ ಮೆಡಿಸಿನ್ ಡಾ. ತೇಜಸ್ವಿನಿ ವಲ್ಲಭ, ಡಾ.ವಿಜಯಾ ಪಾಟೀಲ, ಡಾ.ಗಿರೀಶ ಕುಲ್ಲೊಳ್ಳಿ, ಡಾ.ಎಸ್.ಎಸ್.ಪಾಟೀಲ, ಡಾ.ಮಂಜುನಾಥ ಸಾವಂತ, ಡಾ. ವಿಜಯ ಈಶ್ವರಪ್ಪಗೋಳ, ಡಾ.ನಾಗರಾಜ ಬಿರಾದಾರ, ಡಾ.ವೀಣಾ ಘಂಟೆಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

ಈ ಸಪ್ತಾಹದಲ್ಲಿ ಸುಮಾರು 200ಕ್ಕೂ ಹೆಚ್ಚು ಕ್ಯಾನ್ಸರ್ ಲಕ್ಷಣವಿರುವ ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡಿ, ಅವಶ್ಯಕ ಸಲಹೆ ಮತ್ತು ಚಿಕಿತ್ಸೆ ನೀಡಲಾಯಿತು. 25 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾಲೇಜಿನ ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಂಶೋಧನಾ ಸೊಸೈಟಿ ಸಹಯೋಗದೊಂದಿಗೆ ವಿಜಯಪುರದ ವೈದ್ಯಕೀಯ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ, ಈ ವರ್ಷದ ಕ್ಯಾನ್ಸರ್ ರೋಗ ದಿನಾಚರಣೆಯ ಅನನ್ಯತೆಯಿಂದ ಒಂದುಗೂಡಿದೆ ಎಂಬ ಧ್ಯೇಯ ವಾಕ್ಯದ ಮೇಲೆ ಆಯೋಜಿಸಿದ್ದ ನಿಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ಸುಮಾರು 35 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನಗಳನ್ನು ಮುಂದಿನ ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಶೋಧನೆ ಸೊಸೈಟಿ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಸೊಸೈಟಿಯ ಅಧ್ಯಕ್ಷೆ ಡಾ. ಎಚ್. ಟಿ. ಲತಾದೇವಿ ಮಾಹಿತಿ ನೀಡಿದ್ದಾರೆ.