ಸಾರಾಂಶ
ಕನ್ನಡಪ್ರಭವಾರ್ತೆ ಬೀದರ್
ಇಂದಿನ ಆಧುನಿಕತೆ ಭರಾಟೆಯಲ್ಲಿ ನಮ್ಮ ಕಲೆ ಸಾಹಿತ್ಯ ಸಂಸ್ಕೃತಿ ಮರೆಯಲಾಗದು, ಧಾರ್ಮಿಕ ಪರಂಪರೆ ನೈತಿಕ ಮೌಲ್ಯಕ್ಕೆ ಬುನಾದಿಯಾಗಿದ್ದು ಇದು ಹಾಳಾಗದಂತೆ ಎಚ್ಚರ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮಹೇಶ ಬಿರಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ವಿದ್ಯಾನಗರದ ಬಸವ ಕೇಂದ್ರದಲ್ಲಿ ಆಯೋಜಿಸಲಾದ ಮರಣವೇ ಮಹಾನವಮಿ ಹಾಗೂ ಶರಣ ಸಂಗಮಕ್ಕೆ ಚಾಲನೆ ನೀಡಿ ಇಂದು ಅಕ್ಷರಸ್ಥರಿಂದಲೇ ಅನಾಹುತವಾಗುತ್ತಿವೆ. ಅವರಲ್ಲಿ ಶಿಕ್ಷಣ ಇದೆ ಆದರೆ ಆಧ್ಯಾತ್ಮಿಕ ನೆಲೆ ಇಲ್ಲ. ಮತಾಂಧತೆ ನಿಲುವು ನಮ್ಮನ್ನು ಅವಸಾನದತ್ತ ಕೊಂಡೊಯ್ಯುತ್ತದೆ ಎಂದರು.
ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಜೊತೆಗೆ ನೈತಿಕ ಮೌಲ್ಯಗಳ ಪಾಠ ತುಂಬಾ ಅನಿವಾರ್ಯ ಎಂಬುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕು. ನಮ್ಮೆಲ್ಲರಲ್ಲಿ ಕ್ಷುಲ್ಲಕ ವಿಚಾರ ಬಿಟ್ಟು ಮನಃ ಪರಿವರ್ತನೆ ಮಾಡಿಕೊಳ್ಳಲು ಅನುಭಾವಿಗಳ ಸಂಘ ಅವಶ್ಯಕ. ಇದರಿಂದ ಜ್ಞಾನ ಅಭಿವೃದ್ಧಿಯಾಗಿ ಇಂದಿನ ಅನೇಕ ಕೊಲೆ ಸುಲಿಗೆ ಮೋಸ ವಂಚನೆ ತಡೆಗಟ್ಟಬಹುದು ಎಂದು ನುಡಿದರು.ಜಗನ್ನಾಥ ಮೂಲಗೆ ವಿಶೇಷ ಅನುಭಾವ ನೀಡಿ ಶರಣರ ಕಲ್ಯಾಣ ಕ್ರಾಂತಿ ಇಡಿ ಮನುಕುಲದ ಒಳಿತಿಗಾಗಿ ನಡೆದದ್ದಾಗಿದೆ ಎಂದರು. ಪರಿಷತ್ ಗಡಿನಾಡ ಪ್ರತಿನಿಧಿ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ಶರಣರು ಕೊಟ್ಟ ಸಾಹಿತ್ಯಕ್ಕೆ ಚ್ಯುತಿ ಬಂದಾಗ ಹೋರಾಟ ಮಾಡುವ ಮನೋಭಾವ ನಮ್ಮದಾಗಬೇಕು. ಇಂದು ಪುರೋಹಿತ ಶಾಹಿ ಪುನಃ ಅಟ್ಟಹಾಸ ಮೆರೆಯಲು ಅಣಿಯಾಗುತ್ತಿರುವುದು ನೋವಿನ ಸಂಗತಿ ಎಂದರು.
ಔರಾದ್ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗನ್ನಾಥ ಮಳ್ಳಾ ಮಾತನಾಡಿ, ನಾವು ಹಳೆ ಕಾಲದ ವೈದಿಕ ಸಂಪ್ರದಾಯಕ್ಕೆ ಇಂದು ಸಹ ಮಾರು ಹೋಗಿ ತಲ್ಲಣ ಗೊಂಡಿದ್ದೇವೆ ಎಂದರು.ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಅಧ್ಯಕ್ಷತೆ ವಹಿಸಿ ನಾವಿಂದು ಎಚ್ಚರಗೊಳ್ಳಬೇಕಾಗಿದೆ. ಬಸವಣ್ಣನವರ ವಿಚಾರ ಹೇಳೋದಕ್ಕಿಂತ ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡಾಗ ಪರಿವರ್ತನೆ ಸಾಧ್ಯ. ಪ್ರತಿ ತಿಂಗಳ ಶರಣ ಸಂಗಮದಲ್ಲಿ ಮೌಲಿಕ ವಿಚಾರದ ಚಿಂತನ ಮಂಥನ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೋಶಾಧ್ಯಕ್ಷ ಶಿವಶಂಕರ ಟೋಕರೆ ಹಾಗೂ ಬಾಬು ದಾನಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಇದ್ದರು.ಇದೇ ಸಂದರ್ಭದಲ್ಲಿ ಚಿಟ್ಟಾ ವಲಯ ಕಸಾಪ ಅಧ್ಯಕ್ಷರಾಗಿ ನೇಮಕಗೊಂಡ ಕಳೆದ ಹತ್ತು ವರ್ಷಗಳಿಂದ ಬಸವ ಕೇಂದ್ರದ ಎಲ್ಲ ಕಾರ್ಯಕ್ರಮಕ್ಕೆ ಭಾವಚಿತ್ರ ಉಚಿತ ಸೇವೆ ಮಾಡುತ್ತಿರುವ ಆಕಾಶ ಕೋಟೆಗೆ ಯುವ ರತ್ನ ಹಾಗೂ ಬೀದರ್ ಜಿಲ್ಲೆಯ ಉಡಮನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ಶಿಕ್ಷಣ ರತ್ನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು
ಡಿ. ಶಿವಪುತ್ರಪ್ಪ ಪಾಟೀಲ್ ಸ್ವಾಗತಿಸಿ ಶ್ರೀಕಾಂತ ಲಕ್ಕಶೆಟ್ಟಿ ನಿರೂಪಿಸಿದರೆ ಎಂಜಿನಿಯರ ಗಣೇಶ ಶೀಲವಂತರ ವಂದಿಸಿದರು.