ಹುಟ್ಟಿದ ಊರು, ವಿದ್ಯೆ- ಸಂಸ್ಕಾರ ಕೊಟ್ಟ ಶಾಲೆ ಮರೆಯದಿರಿ: ಸಿದ್ದಗಂಗಾ ಶ್ರೀ ಸಲಹೆ

| Published : Jul 17 2024, 12:58 AM IST

ಸಾರಾಂಶ

ಜಾತಿ, ಮತ, ಪಂಥಗಳನ್ನು ಬದಿಗಿರಿಸಿ ವಿದ್ಯಾಭ್ಯಾಸವೇ ನಮ್ಮ ದೇವರು ಎಂಬಂತೆ ಬೆಳೆದು ದೊಡ್ಡವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೀರಿ, ಮತ್ತೊಮ್ಮೆ ಹೀಗೆ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಒಟ್ಟಾಗಿ ಒಂದೆಡೆ ಸೇರಿ ಹಳೆಯ ಮಧುರ ನೆನಪುಗಳು ಹಾಗೂ ಶಾಲೆಗೆ, ಶಿಕ್ಷಕರಿಗೆ ಕೃತಜ್ಞತೆ ಅರ್ಪಿಸುವುದು ಇದೊಂದು ಉತ್ತಮ ಸಂಪ್ರದಾಯವಾಗಿ ರೂಢಿಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.

ಕನ್ನಡಪ್ರಭ ವಾರ್ತೆ ಕುದೂರು

ಹುಟ್ಟಿದ ಊರು, ವಿದ್ಯೆ, ಸಂಸ್ಕಾರ ಕೊಟ್ಟ ಶಾಲೆ, ಇವುಗಳನ್ನು ಮರೆಯಬಾರದು. ಒಂದು ಜನ್ಮ ನೀಡಿದರೆ ಮತ್ತೊಂದು ಬದುಕುವ ಬೆಳಕಿನ ದಾರಿ ತೋರಿಸಿರುತ್ತದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗಸ್ವಾಮೀಜಿಯವರು ಹೇಳಿದರು.

ಸೋಲೂರು ಹೋಬಳಿ ಕಂಚುಗಲ್ ಬಂಡೇಮಠದ ಶ್ರೀ ಶಿವಕುಮಾರ ಸ್ವಾಮಿ ರೂರಲ್ ಹೈಸ್ಕೂಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಸಂಘದ ನೋಂದಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ, ಮತ, ಪಂಥಗಳನ್ನು ಬದಿಗಿರಿಸಿ ವಿದ್ಯಾಭ್ಯಾಸವೇ ನಮ್ಮ ದೇವರು ಎಂಬಂತೆ ಬೆಳೆದು ದೊಡ್ಡವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೀರಿ, ಮತ್ತೊಮ್ಮೆ ಹೀಗೆ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳು ಒಟ್ಟಾಗಿ ಒಂದೆಡೆ ಸೇರಿ ಹಳೆಯ ಮಧುರ ನೆನಪುಗಳು ಹಾಗೂ ಶಾಲೆಗೆ, ಶಿಕ್ಷಕರಿಗೆ ಕೃತಜ್ಞತೆ ಅರ್ಪಿಸುವುದು ಇದೊಂದು ಉತ್ತಮ ಸಂಪ್ರದಾಯವಾಗಿ ರೂಢಿಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್‌ ಕುಮಾರ್ ಮಾತನಾಡಿ, ಆಗಸ್ಟ್ 15 ನೇ ತಾರೀಕು ಸಂಘವನ್ನು ಅಧಿಕೃತವಾಗಿ ಉದ್ಘಾಟನೆ ಮಾಡುತ್ತಿದ್ದೇವೆ. ಅಂದು ಪ್ರತಿಭಾ ಪುರಸ್ಕಾರ ಹಾಗೂ ಶಾಲೆಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ತಿಳಿಸಿದರು.

ಶಾಲೆಯ ಶಿಕ್ಷಕ ಎಂ.ಶಿವರುದ್ರಯ್ಯ ಮಾತನಾಡಿ, ಇಲ್ಲಿ ಕಲಿತು ದೊಡ್ಡವರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮತ್ತೆ ಎಲ್ಲರನ್ನು ಒಟ್ಟಿಗೆ ನೋಡುವುದೇ ಶಿಕ್ಷಕರಿಗೊಂದು ಸಂತೋಷದ ವಿಷಯವಾಗಿದೆ. ತಾವು ಕಲಿತ ಶಾಲೆಗೆ ಏನಾದರೊಂದು ಹೊಸ ಕೊಡುಗೆ ನೀಡುವ ಮನಸ್ಸಿರುವ ವಿದ್ಯಾರ್ಥಿಗಳನ್ನು ಪಡೆದಿರುವ ನಾವುಗಳೇ ಪುಣ್ಯವಂತರು ಎಂದು ಹೇಳಿದರು.

ಶಿಕ್ಷಕರಾಗ ಹೊನ್ನಗಂಗಯ್ಯ, ದಿನೇಶ್, ಸಂಘದ ಉಪಾದ್ಯಕ್ಷ ಹರೀಶ್, ಕಾರ್‍ಯದರ್ಶಿ ದೇವರಾಜು, ಖಜಾಂಚಿ ಸೌಮ್ಯ, ಮಲ್ಲಿಕಾರ್ಜುನ್, ಪುಷ್ಪವತಿ, ಶಿವರತ್ನ, ಯಶೋಧ, ಜ್ಯೋತಿ, ಸುಮಲತ, ಮಹಾಲಿಂಗಯ್ಯ, ಯತೀಶ್ ಭಾಗವಹಿಸಿದ್ದರು.