ಬೇರೆ ಧರ್ಮ ವಿರೋಧಿಸಿ ಸಂಘರ್ಷಕ್ಕೆ ಇಳಿಯಬಾರದು: ಡಾ.ಶಿವಕುಮಾರ್
KannadaprabhaNewsNetwork | Published : Oct 15 2023, 12:45 AM IST
ಬೇರೆ ಧರ್ಮ ವಿರೋಧಿಸಿ ಸಂಘರ್ಷಕ್ಕೆ ಇಳಿಯಬಾರದು: ಡಾ.ಶಿವಕುಮಾರ್
ಸಾರಾಂಶ
ಬೇರೆ ಧರ್ಮ ವಿರೋಧಿಸಿ ಸಂಘರ್ಷಕ್ಕೆ ಇಳಿಯಬಾರದು: ಡಾ.ಶಿವಕುಮಾರ್
ದಮ್ಮೋಪದೇಶ ಮತ್ತು ದೀಕ್ಷಾ ಕಾರ್ಯಕ್ರಮ । 60 ಕ್ಕೂ ಹೆಚ್ಚು ಜನರಿಂದ ದಮ್ಮಾ ದೀಕ್ಷೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಬೌದ್ಧ ಧರ್ಮ ಸ್ವೀಕರಿಸುವವರು ಬೇರೆ ಧರ್ಮವನ್ನು ವಿರೋಧಿಸಿ ಅಥವಾ ನಿಂದಿಸುವ ಮೂಲಕ ಸಂಘರ್ಷಕ್ಕೆ ಇಳಿಯಬಾರದು. ರಚನಾತ್ಮಕವಾಗಿ ಪರಿವರ್ತನೆ ಆಗಬೇಕೆಂದು ಸಾಮಾಜಿಕ ಚಿಂತಕ ಡಾ. ಶಿವಕುಮಾರ್ ಕರೆ ನೀಡಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಅಖಿಲ ಭಾರತ ಬುದ್ಧ ಮಹಾಸಭಾ ಜಿಲ್ಲಾ ಶಾಖೆ ಶನಿವಾರ ಏರ್ಪಡಿಸಿದ್ದ ದಮ್ಮೋಪದೇಶ ಮತ್ತು ದಮ್ಮಾ ದೀಕ್ಷೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು. ಸಂಸ್ಕಾರ ಮತ್ತು ನೈತಿಕತೆ ಧರ್ಮದಿಂದ ಬರುತ್ತದೆ. ನೈತಿಕ ಬಲದಿಂದ ರಚನಾತ್ಮಕ ಕಾರ್ಯಕ್ಕೆ ತೊಡಗಬೇಕು. ಅದನ್ನು ಬಿಟ್ಟು ಇನ್ನೊಂದು ಧರ್ಮವನ್ನು ನಿಂದಿಸಿ, ವಿರೋಧಿಸುವುದರಿಂದ ಏನು ಆಗುವುದಿಲ್ಲ. ಋಣಾತ್ಮಕ ಚಿಂತನೆ ಮೂಲಕ ಹಿಂದೂ ಧರ್ಮ ಪಾಲಕ ರೊಂದಿಗೆ ಸಂಘರ್ಷಕ್ಕೆ ಇಳಿಯ ಬಾರದೆಂದು ಸಲಹೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ಕಾರಣ ತಿಳಿದುಕೊಳ್ಳಬೇಕು. ಹಿಂದೂ ಧರ್ಮ ಅಂಬೇಡ್ಕರ್ ಅವರನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಅವಮಾನಿಸಿತ್ತು, ಅತಿಯಾಗಿ ಅವಮಾನಿತ ರಾಗಿವವರು ಬಂಡಾಯ ಗಾರರಾಗಿರುತ್ತಾರೆ. ಅದೇ ರೀತಿ ಬಂಡಾಯಗಾರ ಅಂಬೇಡ್ಕರ್ ಅವರು ಪ್ರತಿಕಾರ ತೀರಿಸಿಕೊಳ್ಳುವ ಮೂಲಕ ಸ್ವಾರ್ಥ ಸಾಧಿಸಿಕೊಳ್ಳುವ ಅಲ್ಪ ತೃಪ್ತರಾಗಿರಲಿಲ್ಲ ತಮ್ಮ ಅಪಾರ ಚಿಂತನೆಯೊಂದಿಗೆ ತಮ್ಮ ಅಧ್ಯಯನ ಶಕ್ತಿಯಿಂದ ಬೌದ್ಧ ಧರ್ಮಕ್ಕೆ ವಾಪಸ್ ಮರಳಿದರು. ಅದು ಮತಾಂತರವಲ್ಲ ಎಂದು ಹೇಳಿದರು. ಅಸ್ಪೃಶ್ಯರು ಮೂಲತಃ ಬುದ್ಧನ ಅನುಯಾಯಿಗಳು. ಕೀಳು ಜಾತಿಯವರಲ್ಲ, ಬೇರೆ ಧರ್ಮವನ್ನು ವಿರೋಧಿಸದೆ ಪರಿವರ್ತನೆ ಹೊಂದಬೇಕು. ಪ್ರತಿ ಮನೆಯಲ್ಲಿ ಧರ್ಮ ಕಾರ್ಯಕ್ಕೆ ತೊಡಗಿಸಿ ಕೊಳ್ಳಬೇಕೆಂದು ಹೇಳಿದರು. ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ ಅ.14 ಭಾರತದ ಚರಿತ್ರೆಯಲ್ಲಿ ಮಹತ್ವದ ದಿನ. ಇಂದು ಸಮಾಜದಲ್ಲಿ ಜಾತಿ ತಾರತಮ್ಯದಿಂದ ನಜ್ಜು ಗುಜ್ಜಾಗಿದ್ದ ಶೋಷಿತ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮಿಂದಲೇ ಬದಲಾವಣೆ ಆಗಬೇಕೆಂಬ ದೂರ ಸಂಕಲ್ಪದೊಂದಿಗೆ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರ್ಪಡೆಯಾದ ಪವಿತ್ರ ದಿನವೇ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು. ಬೌದ್ಧ ಧರ್ಮ ಸ್ವೀಕರಿಸುವ ಉಪಾಸಕರಿಗೆ ಧಮ್ಮಾ ಬೋಧನೆ ಮಾಡಿ ದಮ್ಮೋಪದೇಶ ನೀಡಿದ ನ್ಯಾನ ಲೋಕ್ ಬಂತೇಜಿ ಅವರು ಬುದ್ಧ ಎಂದರೆ ಜನ, ದೀಕ್ಷೆ ಎಂದರೆ ಸತ್ಯ, ಸತ್ಯದ ಮಾರ್ಗದಲ್ಲಿ ನಡೆಯುವುದೇ ಬೌದ್ಧ ಧರ್ಮದ ಗುರಿ ಎಂದು ಉಪನ್ಯಾಸ ನೀಡಿದರು. ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ, ಧರ್ಮ ದೀಕ್ಷೆ ಜಿಲ್ಲೆಯಲ್ಲಿ ಐತಿಹಾಸಿಕ ಕಾರ್ಯಕ್ರಮ. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದೀಕ್ಷೆ ಪಡೆದವರು ಬುದ್ಧನ ತತ್ವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ಕರೆ ನೀಡಿದರು. ದಮ್ಮಾ ದೀಕ್ಷೆ ಪಡೆದವರಿಗೆ ಬೌದ್ಧ ಧರ್ಮದ ವಿಧಿ ವಿಧಾನಗಳಂತೆ ಪಂಚಶೀಲಗಳು ಅಷ್ಟಾಂಗ ಮಾರ್ಗ ಹಾಗೂ ಬುದ್ಧ ಸಂದೇಶವನ್ನು ಬಂತೇಜಿಯವರು ಪ್ರದಾನ ಮಾಡಿದರು. ಕಾರ್ಯಕ್ರಮದ ಸಂಯೋಜಕ, ವಕೀಲ ಅನಿಲ್ ಕುಮಾರ್, ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ಬುದ್ಧ ಧರ್ಮ ಕೇಂದ್ರ ಆರಂಭಿಸಲು ಜಮೀನು ಮಂಜೂರು ಮಾಡಿ ಕೊಡುವಂತೆ ಶಾಸಕರಿಗೆ ಮನವಿ ಮಾಡಿದರು. ಬಕ್ಕಿ ಮಂಜುನಾಥ್ ಹಾಗೂ ಬಕ್ಕಿ ಸುರೇಶ್ ಇವರ ಕಲಾತಂಡ ಬುದ್ಧ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿತು. ಬಂತೇಜಿ ನಾಗರತ್ನ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ದಲಿತ ಮುಖಂಡರಾದ ಕೆ.ಟಿ. ರಾಧಾಕೃಷ್ಣ, ಮರ್ಲೆ ಅಣ್ಣಯ್ಯ, ಉಮಾಶಂಕರ್, ಹುಣಸೆಮಕ್ಕಿ ಲಕ್ಷ್ಮಣ ಅಖಿಲ ಭಾರತ ಬೌದ್ಧ ಮಹಾಸಭಾ ಜಿಲ್ಲಾ ಮುಖಂಡ ಅನಂತ್ ಸೇರಿದಂತೆ ಹಲವು ಮುಖಂಡರು ಭಾಗವಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ತಾಲೂಕು ಕಚೇರಿಯಿಂದ ಅಲಂಕೃತ ವಾಹನದಲ್ಲಿ ಬುದ್ಧ ಮೂರ್ತಿ ಯೊಂದಿಗೆ ಎಂ.ಜೆ ರಸ್ತೆ ಮೂಲಕ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು. ----- ಬಾಕ್ಸ್ ----- 60 ಕ್ಕೂ ಹೆಚ್ಚು ಜನರಿಂದ ದಮ್ಮಾ ದೀಕ್ಷೆ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ತೋರಿದ ಬುದ್ಧ ಧರ್ಮ ಸೇರುವ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡಿದ ಸುಮಾರು 60 ಕ್ಕೂ ಹೆಚ್ಚು ಜನರು ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ದಮ್ಮಾ ದೀಕ್ಷೆ ಪಡೆದರು. ಬಿ.ಆರ್. ಅಂಬೇಡ್ಕರ್ 1956 ರ ಅ.14 ರಂದು ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮರಳಿದ ಸಂಸ್ಥಾಪನ ದಿನದ ಅಂಗವಾಗಿ ಬೌದ್ಧ ಮಹಾಸಭಾಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 14 ಕೆಸಿಕೆಎಂ 3 ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ದಮ್ಮೋಪದೇಶ ಮತ್ತು ದೀಕ್ಷಾ ಕಾರ್ಯಕ್ರಮ ನಡೆಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ನ್ಯಾನ ಲೋಕ್ ಬಂತೇಜಿ, ಲಕ್ಷ್ಮಣ್ ಇದ್ದರು.