ಡೆಂಘೀಜ್ವರ ನಿರ್ಲಕ್ಷಿಸದೇ ಅಗತ್ಯ ಚಿಕಿತ್ಸೆ ಪಡೆಯಿರಿ

| Published : Jul 21 2024, 01:22 AM IST

ಡೆಂಘೀಜ್ವರ ನಿರ್ಲಕ್ಷಿಸದೇ ಅಗತ್ಯ ಚಿಕಿತ್ಸೆ ಪಡೆಯಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಈಡಿಸ್ ಸೊಳ್ಳೆ ಕಡಿತದಿಂದ ಕಾಣಿಸಿಕೊಳ್ಳುವಂತಹ ಡೆಂಘೀಜ್ವರವನ್ನು ತ್ವರಿತವಾಗಿ ಪತ್ತೆ ಹಚ್ಚುವ ಜೊತೆಗೆ ಶೀಘ್ರ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಮಾರಣಾಂತಿಕವಾಗಬಹುದು ಎಂದು ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎಂ.ಜಿ. ಉಷಾ ದಾವಣಗೆರೆಯಲ್ಲಿ ಹೇಳಿದ್ದಾರೆ.

- ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ಉಷಾ ಉಪನ್ಯಾಸ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಈಡಿಸ್ ಸೊಳ್ಳೆ ಕಡಿತದಿಂದ ಕಾಣಿಸಿಕೊಳ್ಳುವಂತಹ ಡೆಂಘೀಜ್ವರವನ್ನು ತ್ವರಿತವಾಗಿ ಪತ್ತೆ ಹಚ್ಚುವ ಜೊತೆಗೆ ಶೀಘ್ರ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಮಾರಣಾಂತಿಕವಾಗಬಹುದು ಎಂದು ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಎಂ.ಜಿ. ಉಷಾ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ "ಡೆಂಘೀಜ್ವರ- ಮರೆತರೆ ಮಾರಣಾಂತಿಕವಾಗಬಹುದು, ಮುಂಜಾಗ್ರತೆಯಿರಲಿ " ವಿಷಯ ಕುರಿತು ಅವರು ಉಪನ್ಯಾಸ ನೀಡಿದರು. ಡೆಂಘೀಜ್ವರಕ್ಕೆ ಮುಂಜಾಗ್ರತೆಯೇ ಸೂಕ್ತ ಮದ್ದು ಎಂದರು.

ಚೆನ್ನೈನಲ್ಲಿ ಕಾಣಿಸಿತ್ತು:

ಡೆಂಘೀ ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. 1970ಕ್ಕೂ ಮೊದಲು ತೀವ್ರ ಡೆಂಘೀಜ್ವರ ಕೇವಲ 9 ದೇಶಗಳಲ್ಲಿ ಸಾಂಕ್ರಾಮಿಕ ರೋಗವಾಗಿತ್ತು. ಈಗ 100ಕ್ಕೂ ಹೆಚ್ಚು ದೇಶಗಳಲ್ಲಿ ಸ್ಥಳೀಯವಾಗಿದೆ. ಭಾರತದಲ್ಲಿ ಡೆಂಘೀ ತರಹದ ಮೊದಲ ಪ್ರಕರಣ 1780ರಲ್ಲಿ ಈಗಿನ ಚೆನ್ನೈನಲ್ಲಿ ಕಾಣಿಸಿಕೊಂಡಿತ್ತು. ಆದರೂ ವೈರಾಣು ದೃಢಪಟ್ಟ ಮೊದಲ ಸಾಂಕ್ರಾಮಿಕ ಪ್ರಕರಣ 1963 -64 ರಲ್ಲಿ ದಾಖಲಾಗಿದೆ. ಭಾರತದಲ್ಲಿ ಡೆಂಘೀಜ್ವರ ಇಂದಿಗೂ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ ಎಂದು ತಿಳಿಸಿದರು.

ಡೆಂಘೀಜ್ವರ ವೈರಾಣುವಿನಿಂದ ಬರುವಂಥದ್ದು. ಜ್ವರವು ಪ್ರಮುಖವಾಗಿ ಈಡಿಸ್ ಈಜಿಫ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟುಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಆಗುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ಕೆಲವು ವಾರಗಳಲ್ಲಿ ಸೊಳ್ಳೆಗಳ ಸಂಖ್ಯೆ ವೃದ್ಧಿಯಾಗುತ್ತದೆ. ಹಾಗಾಗಿ, ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಗರ್ಭಿಣಿಯಿಂದ ಮಗುವಿಗೆ ರೋಗ ಪ್ರಸರಣದ ಸಾಧ್ಯತೆ ಬಗ್ಗೆ ಪುರಾವೆಗಳಿವೆ. ಗರ್ಭಿಣಿ ಸೋಂಕು ಹೊಂದಿದ್ದರೆ, ಮಗು ಅವಧಿಪೂರ್ವ ಜನನ, ಕಡಿಮೆ ಜನನ ತೂಕ ಮತ್ತು ಭ್ರೂಣದ ತೊಂದರೆಯಿಂದ ಬಳಲಬಹುದು. ರಕ್ತದಾನ, ಅಂಗಾಂಗ ದಾನ ಮೂಲಕ ರೋಗ ಹರಡಿದ ಅಪರೂಪದ ಪ್ರಕರಣಗಳು ದಾಖಲಾಗಿವೆ ಎಂದರು.

ಸೊಳ್ಳೆ ಕಚ್ಚಿದ 5-7 ದಿವಸಗಳ ನಂತರ ಆರಂಭಿಕ ಲಕ್ಷಣಗಳು ಕಂಡುಬರುತ್ತವೆ. ಕೆಲವರಲ್ಲಿ ಲಕ್ಷಣರಹಿತ ಆಗಿರಲೂಬಹುದು. ಇದ್ದಕ್ಕಿದ್ದಂತೆ ತೀವ್ರಜ್ವರ, ತಲೆನೋವು, ಕಣ್ಣಿನ ಹಿಂಭಾಗ, ಮೈಕೈ, ಕೀಲು, ಹೊಟ್ಟೆ ನೋವು, ವಾಕರಿಕೆ, ವಾಂತಿ ಡೆಂಘೀಜ್ವರದ ಲಕ್ಷಣಗಳು ಎಂದು ತಿಳಿಸಿದರು.

ಮುಂಜಾಗ್ರತೆ:

ಸೊಳ್ಳೆ ಕಚ್ಚುವಿಕೆ ತಪ್ಪಿಸುವುದು, ಸೊಳ್ಳೆ ಪರದೆ ಉಪಯೋಗ, ಹಗಲಿನಲ್ಲಿ ತುಂಬುತೋಳಿನ ಅಂಗಿ ಧರಿಸುವುದು, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಕೆ, ಸೊಳ್ಳೆಬತ್ತಿ, ಲಿಕ್ವಿಡೇಟರ್ಸ್, ಕ್ರೀಂ ಇತ್ಯಾದಿ ಸ್ವಯಂ ರಕ್ಷಣ ವಿಧಾನಗಳ ಬಳಕೆ, ಡ್ರೈ ಡೇ, ಮಳೆನೀರು ಶೇಖರಿಸದಂತೆ ಎಚ್ಚರಿಕೆ ಮುಂತಾದ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.

ಡೆಂಘೀಜ್ವರ ಪೀಡಿತರು ಹೆಚ್ಚು ವಿಶ್ರಾಂತಿ, ಯಥೇಚ್ಛವಾಗಿ ದ್ರವಹಾರ ಸೇವನೆ, ವೈದ್ಯರ ಸಲಹೆಯಂತೆ ಔಷಧ ಬಳಕೆ, ವೈದ್ಯರ ಸಲಹೆ ಇಲ್ಲದೇ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಸತ್ವಭರಿತ ಆಹಾರ ಸೇವನೆ. ಪರಿಸರದ ನೈರ್ಮಲ್ಯತೆ ಕಾಪಾಡಿಕೊಳ್ಳಬೇಕು. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಉತ್ತಮ. ಸಣ್ಣ ನಿರ್ಲಕ್ಷತೆ ಮನೆ ಮಂದಿಯೆಲ್ಲ ನರಳುವಂತೆ ಮಾಡಬಹುದು ಎಂದು ತಿಳಿಸಿದರು.

ಕೇಂದ್ರದ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ಡಾ.ಸುರೇಶ್ ಬಾಬು, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ.ರೇವಪ್ಪ, ಡಾ.ಮಧು ಪೂಜಾರ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ ಇತರರು ಇದ್ದರು.

- - -

ಕೋಟ್‌ ಡೆಂಘೀಜ್ವರಕ್ಕೆ ನಿರ್ದಿಷ್ಟ ಔಷಧ ಇಲ್ಲ. ಸರಿಯಾದ ಬೆಂಬಲ ಚಿಕಿತ್ಸೆ ಹಾಗೂ ಪೂರ್ವಭಾವಿ ಚಿಕಿತ್ಸೆ ಮೂಲಕ ರೋಗ ಲಕ್ಷಣಗಳನ್ನು ಪರಿಹರಿಸಬಹುದು. ಸೂಕ್ತ ಜಾಗೃತಿ ಹೊಂದಿದ್ದಲ್ಲಿ ಮುಂದೆ ಉಂಟಾಗುವಂತಹ ಗಂಭೀರ ಸಮಸ್ಯೆಗಳಾದ ಡೆಂಘೀ ರಕ್ತಸ್ರಾವ, ಶಾಕ್, ಸಾವನ್ನು ತಪ್ಪಿಸಬಹುದು

- ಡಾ. ಎಂ.ಜಿ. ಉಷಾ, ಮುಖ್ಯಸ್ಥೆ, ಸೂಕ್ಷ್ಮ ಜೀವಶಾಸ್ತ್ರ ವಿಭಾಗ

- - - -18ಕೆಡಿವಿಜಿ42ಃ:

ದಾವಣಗೆರೆಯಲ್ಲಿ ಡಾ.ಉಷಾ ಅವರು "ಡೆಂಘೀಜ್ವರ- ಮರೆತರೆ ಮಾರಣಾಂತಿಕವಾಗಬಹುದು, ಮುಂಜಾಗ್ರತೆಯಿರಲಿ " ವಿಷಯ ಕುರಿತು ಉಪನ್ಯಾಸ ನೀಡಿದರು.